For the best experience, open
https://m.samyuktakarnataka.in
on your mobile browser.

ಕಳಚಿತು ಸ್ವಾತಂತ್ರ್ಯ ಹೋರಾಟದ ಮತ್ತೊಂದು ಕೊಂಡಿ

04:48 PM Nov 30, 2023 IST | Samyukta Karnataka
ಕಳಚಿತು ಸ್ವಾತಂತ್ರ್ಯ ಹೋರಾಟದ ಮತ್ತೊಂದು ಕೊಂಡಿ
ಕೃಷ್ಣರಾವ್ ಗೋಪಾಲರಾವ್ ಕುಲಕರ್ಣಿ

ಹುಬ್ಬಳ್ಳಿ: ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರಲ್ಲಿನ ಮತ್ತೊಂದು ಕೊಂಡಿ ಗುರುವಾರ ಕಳಚಿತು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ಕಂಚಿನ ಕಂಠದಿಂದ ಸಿಡಿಗುಂಡಿನಂತಹ ಹೋರಾಟದ ನುಡಿಗಳಿಂದ ಬ್ರಿಟಿಷರ ಎದೆ ನಡುಗಿಸಿದ್ದ ಕೃಷ್ಣರಾವ್ ಗೋಪಾಲರಾವ್ ಕುಲಕರ್ಣಿ ಗುರುವಾರ ತಮ್ಮ 97ನೇ ವಯಸ್ಸಿನಲ್ಲಿ ಅಗಲಿದರು. ದಿಟ್ಟತನ, ಗಟ್ಟಿತನ, ದೇಶಾಭಿಮಾನದಿಂದ ಆಗಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇವರು ಪ್ರಮುಖವಾಗಿ ಗುರುತಿಸಲ್ಪಟ್ಟರು. ಬ್ರಿಟಿಷರ ವಿರುದ್ಧ ಕರಾರುವಕ್ಕಾದ ಹೋರಾಟದ ತಂತ್ರಗಳನ್ನು ರೂಪಿಸುವುದು, ಅವುಗಳನ್ನು ಜಾರಿಗೊಳಿಸುವುದರಲ್ಲಿ ನಿಷ್ಣಾತರಾಗಿದ್ದರು. ಅಂತೆಯೇ ಬ್ರಿಟಿಷರಿಗೆ ನಿದ್ದೆಗೆಡಿಸಿದ್ದರು. ಅವರು ಸಭೆ, ಸಮಾರಂಭಗಳಲ್ಲಿ, ಶಾಲೆ ಕಾಲೇಜುಗಳಲ್ಲಿ ಅಂದಿನ ಹೋರಾಟದ ದಿನಗಳನ್ನು ಮೆಲುಕು ಹಾಕುತ್ತಿದ್ದರೆ ಅಲ್ಲಿದ್ದವರಿಗೆ ರೋಮಾಂಚನೆ. ದೇಶಾಭಿಮಾನ ಉಕ್ಕಿ ಹರಿಯುವ ರೀತಿ ಅವರ ಹೋರಾಟದ ಸ್ವಾನುಭವದ ನುಡಿಗಳು ಬಡಿದೆಬ್ಬಿಸುತ್ತಿದ್ದವು. ಭವ್ಯ ಭಾರತದ ಬಗ್ಗೆ ಅವರು ಅಪಾರ ಕನಸು ಕಂಡಿದ್ದರು. ೨೦೨೨ರ ಆಗಸ್ಟ್ ೧೫ರಂದು ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆಸಂಯುಕ್ತ ಕರ್ನಾಟಕ' ಹೇಗೆ ಪ್ರೇರಣೆ ನೀಡಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆ ವಹಿಸಿದ ಪಾತ್ರದ ಬಗ್ಗೆ ವಿವರಿಸಿದ್ದರು.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ:
ಅವರಿಗೆ ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವಿದೆ. ಪತ್ನಿ ಅಕ್ಟೋಬರ್ ತಿಂಗಳಲ್ಲಿ ನಿಧನರಾಗಿದ್ದರು. ಕೇಶ್ವಾಪುರದ ಮುಕ್ತಿಧಾಮದಲ್ಲಿ ತಹಶೀಲ್ದಾರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವು ಗಣ್ಯರು, ಆಪ್ತರು, ಬಂಧುಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.

`ಸಂಯುಕ್ತ ಕರ್ನಾಟಕ' ಹುಬ್ಬಳ್ಳಿ ಕಚೇರಿ ಆವರಣದಲ್ಲಿ ೨೦೨೨ರ ಆಗಸ್ಟ್ ೧೫ರಂದು ಧ್ವಜಾರೋಹಣ ನೆರವೇರಿಸಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಕೃಷ್ಣರಾವ್ ಗೋಪಾಲರಾವ್ ಕುಲಕರ್ಣಿ ಅವರನ್ನು ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಕೇಶವ ದೇಸಾಯಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋಹನ ಹೆಗಡೆ ಅವರು ಸಂಸ್ಥೆಯ ವತಿಯಿಂದ ಸತ್ಕರಿಸಿದ್ದರು.(ಫೈಲ್ ಚಿತ್ರ).