ಕಳ್ಳನ ಮೇಲೆ ಪೊಲೀಸರ ಫೈರಿಂಗ್: ಬಂಧನ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೇ ಗುಂಡಿನ ಸದ್ದು ಮೊಳಗಿದೆ. ಹುಬ್ಬಳ್ಳಿ ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಾಹನಗಳನ್ನು ತಡೆದು ತಲ್ವಾರ್ ತೋರಿಸಿ ಚಿನ್ನಾಭರಣ, ಹಣ ಸೇರಿದಂತೆ ಮೊಬೈಲ್ ಫೋನ್‌ಗಳನ್ನು ದೋಚುತ್ತಿದ್ದ ನಟೋರಿಯಸ್ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಅರೆಸ್ಟ್ ಮಾಡಿದ್ದಾರೆ.
ವಿನೋದ್ ಗುಡಿಹಾಳ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪಿಎಸ್ಐ ಜಯಶ್ರೀ ಚಲವಾದಿ ಫೈರಿಂಗ್ ಮಾಡಿದ್ದಾರೆ. ಸಿಬ್ಬಂದಿ ರಮೇಶ ಹಿತ್ತಲಮನಿ ಮತ್ತು ಜಯಶ್ರೀ ಅವರು ಗಾಯಗೊಂಡಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಡಿಗೇರಿ ಪಿಐ ಎಸ್.ಆರ್. ನಾಯಕ ತಂಡ ತನಿಖೆ ನಡೆಸುತ್ತಿದೆ.
ಆರೋಪಿ ಬಳ್ಳಾರಿ, ಧಾರವಾಡ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಹೆದ್ದಾರಿಗಳಲ್ಲಿ ಮಾರಕಾಸ್ತ್ರ ತೋರಿಸಿ ವಾಹನ ಸವಾರರಿಂದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ೧೭ ಪ್ರಕರಣಗಳಿವೆ.
ಕಳೆದ ದಿನ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಚಾಲಕನನ್ನು ಅಡ್ಡಗಟ್ಟಿದ ಮೂವರು ತಲ್ವಾರ್‌ನಿಂದ ಹಲ್ಲೆ ನಡೆಸಿ ಆತನ ಬಳಿಯಿದ್ದ 10 ಸಾವಿರ ಹಣ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು. ಲಾರಿ ಚಾಲಕ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗುತ್ತಿದ್ದ ಹಾಗೆ ಕಮಿಷನರ್ ಎನ್. ಶಶಿಕುಮಾರ್ ಆರೋಪಿಗಳನ್ನು ಬಂಧಿಸಲು ಒಂದು ತಂಡವನ್ನು ರಚನೆ ಮಾಡಿದ್ದರು.
ಈ ವೇಳೆ ಆರೋಪಿಗಳು ರಿಂಗ್ ರೋಡ್ ಬಳಿ ಇರುವ ಮಾಹಿತಿ ಮಾಹಿತಿ ಆಧರಿಸಿ ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಲು ಹೋದಾಗ, ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾದಾಗ ಆರೋಪಿ ವಿನೋದ್ ಗುಡಿಹಾಳ ಕಾಲಿಗೆ ಗುಂಡು ಹಾರಿಸಿದ್ದಾರೆ.