ಕಾಂಗ್ರೆಸ್‌ನಲ್ಲಿ ಒಳಬೇಗುದಿ, ಆಡಳಿತದಲ್ಲಿ ಅರಾಜಕತೆ
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಗೃಹಸಚಿವರು, ಸಚಿವರು ಎಲ್ಲರೂ ಒಳಬೇಗುದಿಯಲ್ಲಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಾಕಷ್ಟು ಅರಾಜಕತೆ ಎದ್ದು ಕಾಣುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರ ಕೇವಲ ಬಣ ರಾಜಕೀಯದಲ್ಲಿ ಮುಳುಗಿ ಹೋಗಿದೆ. ಸರ್ಕಾರಕ್ಕೆ ಆಡಳಿತ ನಡೆಸೋದಕ್ಕೆ ಸಮಯವೇ ಇಲ್ಲದಂತಾಗಿದೆ. ಯಾವುದೇ ದೊಡ್ಡ ಅಪರಾಧ ಘಟನೆ ನಡೆದಾಗ ಗೃಹ ಸಚಿವರು ತಕ್ಷಣ ಕ್ರಮ ಕೈಗೊಳ್ಳಲು ಮುಂದಾಗಬೇಕು. ಆದರೆ, ಇದು ಆಗುತ್ತಿಲ್ಲ. ಇಂತಹ ಕೃತ್ಯಗಳಿಗೆ ಪ್ರಚೋದನೆ ಸಿಕ್ಕಂತಾಗಿದೆ. ಅಪರಾಧಿಗಳಿಗೆ ಭಯ ಇಲ್ಲದಂತಾಗಿದೆ. ಪೊಲೀಸ್ ಇಲಾಖೆಯನ್ನು ಬಲವರ್ಧನೆ ಮಾಡಬೇಕು ಎಂದು ಆಗ್ರಹಿಸಿದರು.
ಔತಣಕೂಟ, ಅಧ್ಯಕ್ಷ ಗಾದಿ, ಅಧಿಕಾರ ಹೀಗೆ ಅನೇಕ ವಿಷಯಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ರಾಜ್ಯಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ಕೇವಲ ಅಧಿಕಾರ ಹಂಚಿಕೆ ವಿಚಾರದಲ್ಲೇ ಕಾಂಗ್ರೆಸ್ ಕಾಲಹರಣ ಮಾಡುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗುತ್ತಿದೆ. ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ನಡೆ ಬಗ್ಗೆ ರಾಜ್ಯದ ಜನತೆಗೆ ಬೇಸರ ತರಿಸಿದೆ. ಸಿಎಂ ಮತ್ತು ಸಚಿವರು ರಾಜ್ಯವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದರ ಕುರಿತು ಮಾತನಾಡಬೇಕು ಎಂದರು.