ಕಾಂಗ್ರೆಸ್‌ನಲ್ಲಿ ಶಾಸಕರ ಅಭಿವೃದ್ಧಿಗೆ ಆದ್ಯತೆ
ಕುಷ್ಟಗಿ: ಕಾಂಗ್ರೆಸ್ ಸರ್ಕಾರವು ರೈತರಿಗೆ ಮಧ್ಯಂತರ ಪರಿಹಾರವನ್ನು ಕೊಡುವ ಬದಲಿಗೆ ತನ್ನ ಮಂತ್ರಿಗಳಿಗೆ ಗೂಟದ ಕಾರು ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಎಂದು ಬಿಜೆಪಿ ನಾಯಕ ಹಾಗೂ ಶಾಸಕ ವಿಜಯೇಂದ್ರ ಯಡಿಯೂರಪ್ಪ ಹೇಳಿದರು.
ಪಟ್ಟಣದ ಮಾರ್ಗವಾಗಿ ಲಿಂಗಸೂರಿಗೆ ತೆರಳುವ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸನ್ಮಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದವರು, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಹೊಸ ಅವಾಂತರಗಳು ಸೃಷ್ಟಿಯಾಗುತ್ತಿವೆ. ಭೀಕರ ಬರಗಾಲ ಇದೆ. ರೈತರು ಬೆಳೆಗಳಾದ ಮೆಕ್ಕೆಜೋಳ, ಜೋಳ, ರಾಗಿ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರಾಜ್ಯ ಸರ್ಕಾರ ರೈತರಿಗೆ ಮಧ್ಯಂತರ ಪರಿಹಾರ ಕೊಡುವಲ್ಲಿ ಇನ್ನೂ ಯೋಚಿಸುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಈ ರಾಜ್ಯ ಸರ್ಕಾರಕ್ಕೆ ಬಡವರ ಅಭಿವೃದ್ಧಿ ಬೇಕಾಗಿಲ್ಲ. ಶಾಸಕರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಇದು ನಮ್ಮ ರಾಜ್ಯದ ದುರ್ದೈವ. ಈಗ ಸರ್ಕಾರ ರಚನೆಯಾಗಿ ಕೇವಲ ೫ ತಿಂಗಳಾಗಿದ್ದು, ಇತ್ತೀಚೆಗೆ ನಡೆದ ಐಟಿ ದಾಳಿಯಲ್ಲಿ ೧೫೦ ಕೋಟಿಗೂ ಅಧಿಕ ದುಡ್ಡು ಸಿಕ್ಕಿದ್ದು, ಇದು ಸ್ಯಾಂಪಲ್ ಅಷ್ಟೇ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಯಲಾಗಲಿದ್ದು, ಸರ್ಕಾರ ಯಾವ ರೀತಿ ನಡೆಯುತ್ತದೆ ಕಾಯ್ದು ನೋಡಬೇಕಾಗಿದೆ ಎಂದರು.
ಶೀಘ್ರ ವಿಪ ನಾಯಕ ಆಯ್ಕೆ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗಿರಬಹುದು. ಆದರೆ, ಅದನ್ನೇ ನಮ್ಮ ನಾಯಕರ ವೈಫಲ್ಯ ಎಂದು ಹೇಳುವುದು ತಪ್ಪು. ಶೀಘ್ರದಲ್ಲಿ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಸಹಕಾರ ಬೇಕಾದರೆ ರಾಜ್ಯ ಸರ್ಕಾರವು ಕೂಡ ಸಹಕಾರ ನೀಡಬೇಕು. ಅಂದಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತವೆ. ಕೇವಲ ದೂಷಿಸುವ ಕಾರ್ಯ ಮಾಡಬಾರದು ಎಂದರು.
ಕೇಂದ್ರ ಸರ್ಕಾರವು ದೇಶದಲ್ಲಿ ಇರುವ ರೈತರಿಗೆ ವಾರ್ಷಿಕವಾಗಿ ೬ ಸಾವಿರ ರೂಪಾಯಿ ಹಣವನ್ನು ಹಾಕುತ್ತಿದೆ. ಇತ್ತೀಚಿಗೆ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಹಿಂದೆ ಯಡಿಯೂರಪ್ಪನವರು ರಾಜ್ಯದಿಂದ ಕೊಡುವ ನಾಲ್ಕು ಸಾವಿರ ರೂ. ಹಣವನ್ನು ಕಡಿತಗೊಳಿಸಿದ್ದಾರೆ. ಆದರೂ ಸಹಿತ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ದ್ವೇಷಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ರಾಜ್ಯದ ರೈತರಿಗೆ ಏನು ಮಾಡಬೇಕೆಂಬುದನ್ನು ಅರಿತುಕೊಂಡು ಸರ್ಕಾರಆಡಳಿತ ಮಾಡಬೇಕಾಗಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಶರಣು ತಳ್ಳಿಕೇರಿ, ಪುರಸಭೆ ಮಾಜಿ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ, ಯುವ ಮೊರ್ಚಾ ಅಧ್ಯಕ್ಷ ಉಮೇಶ ಯಾದವ್, ದೊಡ್ಡಬಸವ ಸುಂಕದ, ಶಶಿಧರ ಕವಲಿ ಮತ್ತು ರಾಠೋಡ, ಗವಿ ಶೆಟ್ಟರ್, ಪ್ರಕಾಶ ತಾಳಕೇರಿ ಸೇರಿದಂತೆ ಅನೇಕರು ಇದ್ದರು.