For the best experience, open
https://m.samyuktakarnataka.in
on your mobile browser.

ಕಾಂಗ್ರೆಸ್‌ನಿಂದ ದಲಿತರಿಗೆ ನ್ಯಾಯ ಸಿಗಲ್ಲ

10:59 PM Dec 30, 2023 IST | Samyukta Karnataka
ಕಾಂಗ್ರೆಸ್‌ನಿಂದ ದಲಿತರಿಗೆ ನ್ಯಾಯ ಸಿಗಲ್ಲ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಿಂದ ದಲಿತರಿಗೆ ನ್ಯಾಯ ಸಿಗುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾದಿಗರ ಆತ್ಮಗೌರವ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್‌ನವರು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರಿಗೆ ಅನ್ಯಾಯ ಮಾಡಿದವರು. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದು ಗಮನ ಸೆಳೆದರು.
ಕಾಂಗ್ರೆಸ್ ಈಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ಆ ಸ್ಥಾನಕ್ಕೆ ಅಧ್ಯಕ್ಷರಾಗಲು ಎಲ್ಲರೂ ಒಲ್ಲೆ ಎಂದಿದ್ದರು. ಅಂತಹ ಸ್ಥಾನಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹಾಳೂರಿಗೆ ಉಳಿದವನೆ ಗೌಡ ಎಂಬಂತೆ ತಂದು ಕೂರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಐ.ಎನ್.ಡಿ.ಐ.ಎ ಒಕ್ಕೂಟದಲ್ಲಿ ಖರ್ಗೆ ಅವರು ಪ್ರಧಾನಿ ಆಗಬೇಕು ಎಂದು ಅಭಿಪ್ರಾಯ ಬಂದಿದೆ. ಆದರೆ, ಆ ಸಭೆಯಲ್ಲೇ ಇದ್ದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇದಕ್ಕೆ ಚಪ್ಪಾಳೆ ಹೊಡೆಯಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳುತ್ತಾರೆ. ಹೀಗಾಗಿ, ದಲಿತರಿಗೆ ಆ ಪಕ್ಷದಲ್ಲಿ ಗೌರವ ಇಲ್ಲ. ಮತ್ತೆ ಮೋಸ ಮಾಡಲು ಮುಂದಾಗಿದ್ದಾರೆ. ಅದನ್ನು ನಂಬಬೇಡಿ ಎಂದು ಹೇಳಿದರು.
ಮೀಸಲಾತಿ ವಿಚಾರದಲ್ಲಿ ಲಂಬಾಣಿಗರಿಂದ ಬಿಎಸ್‌ವೈ ಮನೆ ಮೇಲೆ ಕಲ್ಲು ಹೊಡೆಯಲು ಕಾಂಗ್ರೆಸ್‌ನವರು ಹಚ್ಚಿದರು. ನಾವು ಲಂಬಾಣಿ, ಕೊರಮ, ಕೊರಚ, ವಡ್ಡರು, ಭೋವಿ ಸಮಾಜದ ವಿರೋಧಿಗಳಲ್ಲ. ಈ ಎಲ್ಲ ಕೆಳ ಸಮಾಜಗಳಿಗೆ ಬಿಜೆಪಿಯಿಂದಲೇ ನ್ಯಾಯ ಸಿಗಲಿದೆ ಎಂದರು.