For the best experience, open
https://m.samyuktakarnataka.in
on your mobile browser.

ಕಾಂಗ್ರೆಸ್‌ನಿಂದ 40 ಶಾಸಕರು ಹೊರಕ್ಕೆ

07:37 PM Nov 21, 2023 IST | Samyukta Karnataka
ಕಾಂಗ್ರೆಸ್‌ನಿಂದ 40 ಶಾಸಕರು ಹೊರಕ್ಕೆ

ಮಂಗಳೂರು: ಕಾಂಗ್ರೆಸ್ ಒಳಗೆ ಆಂತರಿಕ ಜಗಳ ಜಾಸ್ತಿಯಾಗಿದೆ. ಸಿದ್ದರಾಮಯ್ಯ, ಡಿಕೆಶಿ ಮತ್ತು ಜಾರಕಿಹೊಳಿ ತಂಡ ಇಬ್ಭಾಗವಾಗುತ್ತಿದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ನ ೩೦-೪೦ ಶಾಸಕರು ಹೊರಗೆ ಬರಲಿದ್ದಾರೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಆಂತರಿಕ ಜಗಳದ ನಡುವೆಯೇ ಮರಿ ಖರ್ಗೆ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಡುತ್ತಿದ್ದಾರೆ. ಕಾಂಗ್ರೆಸ್ ಒಡೆಯುತ್ತಿದ್ದು, ಹಸ್ತದ ಒಳಗೆ ಹಸ್ತದ ಆಪರೇಷನ್ ಆಗುತ್ತಿದೆ. ಈ ಭಯದಿಂದ ಕಾಂಗ್ರೆಸ್‌ನವರು ಬಿಜೆಪಿಯಿಂದ ಬರ್ತಾರೆ ಎಂದು ದಾರಿ ತಪ್ಪಿಸುತ್ತಾ ಇದ್ದಾರೆ. ಯಾವುದೇ ಕಾರಣಕ್ಕೆ ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ. ಬೆಳಗಾವಿ ಅಧಿವೇಶನ ಮುಗಿದ ಕೂಡಲೇ ಕಾಂಗ್ರೆಸ್ನಲ್ಲಿ ದೊಡ್ಡ ಪರಿವರ್ತನೆ ಆಗುತ್ತದೆ ಎಂದರು.

ಮುಖ್ಯಮಂತ್ರಿ ಹುದ್ದೆಗೆ ಹತ್ತಾರು ಟವಲ್ಗಳು ಬಿದ್ದಿವೆ. ಜಾರಕಿಹೊಳಿ, ಪರಮೇಶ್ವರ್ ಜೊತೆಗೆ ದಲಿತ ಸಿಎಂ ಕಾರ್ಡ್ ಹೊರಟಿದೆ. ಪ್ರಿಯಾಂಕ್ ಖರ್ಗೆ, ಡಿಕೆಶಿ ಎಲ್ಲರೂ ಹೊರಟ ಕಾರಣ ಸರ್ಕಾರ ಬೀಳಬಹುದು. ಸರ್ಕಾರ ಟೇಕಾಫ್ ಆಗ್ತಾ ಇಲ್ಲ, ಅಭಿವೃದ್ಧಿ ಕಾರ್ಯ ಕೂಡ ಆಗುತ್ತಿಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಡಿದೆ, ನಾಲ್ಕು ತಿಂಗಳಲ್ಲಿ ಮುನ್ನೂರು ರೈತರ ಆತ್ಮಹತ್ಯೆ ಆಗಿದೆ. ಉಡುಪಿಯಲ್ಲಿ ಹಾಡಹಗಲೇ ನಾಲ್ವರ ಹತ್ಯೆ ನಡೆದಿದೆ. ಶಾಂತಿ ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ, ಬರ ನಿಯಂತ್ರಣ ಆಗಿಲ್ಲ. ರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳಿ ತಲವಾರು ತೋರಿಸಿದರೂ ಬಂಧನ ಆಗುತ್ತಿಲ್ಲ. ರಾಷ್ಟ್ರ ವಿರೋಧಿ ಶಕ್ತಿಗಳು ರಾಜ್ಯದಲ್ಲಿ ಎದ್ದು ನಿಂತಿದೆ ಎಂದರು.
ಮೋದಿ ಸರ್ಕಾರ ಕೊಟ್ಟ ಅನುದಾನದಲ್ಲಿ ರಾಜ್ಯದಲ್ಲಿ ಕೆಲಸ ನಡೆಯುತ್ತಿದೆ. ರಾಜ್ಯದಿಂದ ಒಂದು ರೂ. ಬಿಡಿಗಾಸು ಬಿಡಗಡೆಯಾಗಿಲ್ಲ. ಈ ಸರ್ಕಾರ ಭ್ರಷ್ಟಾಚಾರದ ಸರ್ಕಾರ, ಅಧಿಕಾರಿಗಳ ಸಂಬಳ ಕೊಡಲು ಕೂಡ ಹಣ ಇಲ್ಲ, ಮೂರ್ನಾಲ್ಕು ತಿಂಗಳು ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆ ಎಂದರು.