ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಾಂಗ್ರೆಸ್ ಚುನಾವಣಾ ಗ್ಯಾರಂಟಿ

02:22 AM Apr 06, 2024 IST | Samyukta Karnataka

ಚುನಾವಣಾ ಪ್ರಣಾಳಿಕೆಗಳು ಒಂದರ್ಥದಲ್ಲಿ ಮತದಾರರಿಗೆ ರಾಜಕೀಯ ಪಕ್ಷಗಳು ಕೊಡುವ ವಚನ. ಅಧಿಕಾರಕ್ಕೆ ಬಂದದ್ದೇ ಆದರೆ ಪ್ರಸ್ತಾಪಿಸಲಾಗಿರುವ ವಚನಗಳನ್ನು ಜಾರಿಗೆ ತರುವ ಮೂಲಕ ಹೊಸ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುವುದು ಎಂಬುದು ರಾಜಕೀಯ ಪಕ್ಷಗಳು ಪ್ರಣಾಳಿಕೆಯ ಮೂಲಕ ಕೊಡುವ ಭರವಸೆ. ಬಹಳಷ್ಟು ಸಂದರ್ಭಗಳಲ್ಲಿ ಪ್ರಣಾಳಿಕೆಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬ ರೀತಿಯಲ್ಲಿ ಆಗಿರುವ ಪ್ರಸಂಗಗಳು ಸಾಕಷ್ಟು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚುವರಿ ಪ್ರಣಾಳಿಕೆಯ ಮೂಲಕ ಐದು ಗ್ಯಾರಂಟಿಗಳ ಭರವಸೆಯನ್ನು ಕೊಟ್ಟ ನಂತರ ಅಧಿಕಾರಕ್ಕೆ ಬಂದ ಮೇಲೆ ಈ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತಂದದ್ದು ನಿಜಕ್ಕೂ ದೊಡ್ಡ ಹೆಚ್ಚುಗಾರಿಕೆ.
ಈ ಗ್ಯಾರಂಟಿ ಸ್ವರೂಪದ ಪ್ರಣಾಳಿಕೆಗಳು ಎಲ್ಲಾ ರಾಜ್ಯಗಳಲ್ಲೂ ಪ್ರತ್ಯಕ್ಷವಾಗಿ ಇದೀಗ ಲೋಕಸಭಾ ಚುನಾವಣೆಯಲ್ಲೂ ಪ್ರತ್ಯಕ್ಷವಾಗಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ದೇಶದ ಜನರ ಮೇಲೆ ನೇರವಾಗಿ ಪರಿಣಾಮ ಬೀರುವ ಇಪ್ಪತ್ತೈದು ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ಉಳಿದ ಪಕ್ಷಗಳಿಗೆ ಸವಾಲು ಹಾಕಿರುವುದು ಚುನಾವಣಾ ಪೈಪೋಟಿಯ ದಿಕ್ಸೂಚಿ ಎಂದೇ ಗುರುತಿಸಬಹುದು.
ದೇಶಾದ್ಯಂತ ಜಾತಿ ಗಣತಿ ನಡೆಸಿ ಸರ್ಕಾರಿ ಸೌಲಭ್ಯಗಳ ವಿತರಣೆಗೆ ನ್ಯಾಯಬದ್ಧವಾದ ಕ್ರಮವನ್ನು ಕೈಗೊಳ್ಳುವ ದಾರಿಯನ್ನು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಸೂಚಿಸಿದೆ. ಜಾತಿಗಣತಿ ಈಗಾಗಲೇ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ. ಬಿಹಾರದಲ್ಲಿಯೂ ಇದೇ ಸ್ಥಿತಿ. ಜಾತಿ ಜನಸಂಖ್ಯೆ ಆಧರಿಸಿ ಸೌಲಭ್ಯಗಳ ವಿತರಣೆ ಮಾಡುವುದು ಸಾಮಾಜಿಕ ನ್ಯಾಯದ ಮಾರ್ಗ ಎಂಬುದು ಕಾಂಗ್ರೆಸ್ ನಂಬಿಕೆ. ಇದರ ಜೊತೆಗೆ ಯುವಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಇನ್ನೊಂದು ಗ್ಯಾರಂಟಿ ಎಂದರೆ ಗುತ್ತಿಗೆ ಆಧಾರದ ನೇಮಕಾತಿಯನ್ನು ಸಂಪೂರ್ಣವಾಗಿ ರದ್ದುಪಡಿಸುವ ನಿರ್ಧಾರ. ಇದರ ಜೊತೆಗೆ ಈಗಾಗಲೇ ಈ ಸ್ವರೂಪದ ನೇಮಕಾತಿಯಲ್ಲಿರುವವರ ಸೇವೆ ಕಾಯಂಗೊಳಿಸುವ ಭರವಸೆ. ಯಾವುದೇ ಸರ್ಕಾರಿ ವ್ಯವಸ್ಥೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನೇಮಕಾತಿ ಪ್ರಕ್ರಿಯೆಯೇ ನಡೆಯುತ್ತಿಲ್ಲ. ಹೀಗಾಗಿ ಗುತ್ತಿಗೆ ಆಧಾರದ ಇಲ್ಲವೇ ಹೊರಗುತ್ತಿಗೆ ಪದ್ಧತಿಯ ನೇಮಕಾತಿ ಮೂಲಕ ಆಡಳಿತವನ್ನು ನಿರ್ವಹಿಸಿಕೊಂಡು ಬರುತ್ತಿರುವ ಸರ್ಕಾರಗಳಲ್ಲಿ ವಿಶ್ವಾಸಾರ್ಹತೆ ಹಾಗೂ ದಕ್ಷತೆಯ ಪ್ರಮಾಣ ಕುಸಿಯುತ್ತಿರುವುದು ಗಮನಿಸಬೇಕಾದ ಸಂಗತಿ. ರೈತಾಪಿ ಜನರು, ಮಹಿಳೆಯರು, ಕಾರ್ಮಿಕರನ್ನು ಮುಖ್ಯವಾಗಿ ಪರಿಗಣಿಸಿ ಈ ಗ್ಯಾರಂಟಿಗಳನ್ನು ರೂಪಿಸಲಾಗಿದೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರ ಬೆಳೆಗಳಿಗೆ ಕನಿಷ್ಠ ಬೆಲೆ ಒದಗಿಸುವ ಭರವಸೆಯನ್ನು ಪ್ರಣಾಳಿಕೆ ನೀಡಿದೆ. ಇದಕ್ಕೆ ಪೂರಕವಾಗಿ ಕಾನೂನಿನ ಬದ್ಧತೆಯನ್ನು ಒದಗಿಸುವ ಭರವಸೆ ನೀಡಿರುವುದು ಹೊಸ ಸಂಗತಿ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ದೂರದೃಷ್ಟಿ ಹಾಗೂ ಅನುಭವದ ಆಧಾರದ ಮೇರೆಗೆ ಹಿರಿಯ ಮುಖಂಡರ ಸಮಿತಿ ರೂಪಿಸಿರುವ ಈ ಪ್ರಣಾಳಿಕೆ ಚುನಾವಣೆ ದೃಷ್ಟಿಯಿಂದ ಗಮನ ಸೆಳೆಯುವಂತಿರುವುದೇನೋ ನಿಜ. ಆದರೆ, ಈ ಭರವಸೆಗಳು ಕಾರ್ಯರೂಪಕ್ಕೆ ಬರುವ ರೀತಿಯಲ್ಲಿ ರೂಪಿತಗೊಂಡಿದ್ದರೆ ಅದಕ್ಕಿಂತಲೂ ಅತಿಶಯವಾದ ಸಂಗತಿ ಇನ್ನೊಂದಿಲ್ಲ. ಚುನಾವಣಾ ಪ್ರಣಾಳಿಕೆ ಸಮಿತಿಯ ಸದಸ್ಯರೆಲ್ಲರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮಂತ್ರಿಗಳಾಗಿ ಆಡಳಿತಾನುಭವ ಇರುವವರು.
ಹೀಗಾಗಿ ಕೇವಲ ಭಾವನಾತ್ಮಕವಾಗಿ ಪ್ರಣಾಳಿಕೆಗಳನ್ನು ರೂಪಿಸುವ ಗೋಜಿಗೆ ಹೋಗದೆ ವಾಸ್ತವಿಕ ನೆಲೆಗಟ್ಟಿನಲ್ಲಿ ರೂಪಿಸಿದ್ದರೆ ನಿಜಕ್ಕೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಮತದಾರರು ಒಪ್ಪಿ ಬೆಂಬಲಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಸಾಮಾನ್ಯವಾಗಿ ಪ್ರಣಾಳಿಕೆಗಳ ಘೋಷಣೆ ಚುನಾವಣೆಯಲ್ಲಿ ಒಂದು ಶಾಸ್ತ್ರ. ಏಕೆಂದರೆ, ಮತದಾನ ಮುಗಿದು ಸರ್ಕಾರಗಳು ರಚನೆಯಾದ ಮೇಲೆ ಕೊಟ್ಟ ಮಾತಿನ ಮೇಲೆ ಯಾರಿಗೂ ಗಮನವಿರುವುದಿಲ್ಲ. ಅಸಂಘಟಿತ ಮತದಾರರಿಗೆ ಈ ಭರವಸೆಗಳ ಬಗ್ಗೆ ಯಾರನ್ನೂ ಪ್ರಶ್ನಿಸುವ ಅವಕಾಶವೂ ಇರುವುದಿಲ್ಲ. ಹೀಗಾಗಿಯೇ ಕಾವೇರಿ, ಕೃಷ್ಣಾ, ಮಹದಾಯಿ ನದಿ ನೀರಿನ ಹಂಚಿಕೆ ವಿವಾದ, ಬೆಳಗಾವಿ ಹಾಗೂ ಕಾಸರಗೋಡಿನ ಗಡಿ ವಿವಾದಗಳು ಇದುವರೆಗಿನ ಬಹುತೇಕ ಎಲ್ಲ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಾಧಾನ್ಯತೆಯನ್ನು ಪಡೆದುಕೊಂಡಿರುತ್ತಿದ್ದವು. ಲೋಕಾಯುಕ್ತ ಬಲವರ್ಧನೆ ಮಾಡುವ ಭರವಸೆಗೂ ಇದೇ ರೀತಿಯ ಭರವಸೆ ಬಂದು ಈಗ ಭರವಸೆ ನೀಡುವ ಹಂತ ದಾಟಿ ನ್ಯಾಯಾಲಯದ ಕೃಪೆಯಿಂದಾಗಿ ಲೋಕಾಯುಕ್ತ ಸಂಸ್ಥೆಗೆ ಖಚಿತ ನೆಲೆ ಬೆಲೆ ದೊರೆತಿದೆ. ಹೀಗಾಗಿ ಚುನಾವಣಾ ಪ್ರಣಾಳಿಕೆಗಳ ಬಗ್ಗೆ ದೇಶಾದ್ಯಂತ ಸಾರ್ವಜನಿಕ ಸಂವಾದ ನಡೆದು ಒಳಿತು ಕೆಡುಕುಗಳ ವಿಮರ್ಶೆಯಾದ ನಂತರ ಎಲ್ಲಾ ಪಕ್ಷಗಳಿಗೆ ಅನ್ವಯವಾಗುವ ರೀತಿಯಲ್ಲಿ ಜನಾಭಿಪ್ರಾಯ ರೂಪುಗೊಳ್ಳುವಂತೆ ಮಾಡುವುದು ದೇಶವಾಸಿಗಳ ರಾಷ್ಟçಧರ್ಮ.

Next Article