ಕಾಂಗ್ರೆಸ್ ರಾಜಕಾರಣವನ್ನು ಧರ್ಮಕ್ಕೆ ಬೆರೆಸಲ್ಲ
ಬಾಗಲಕೋಟೆ: ಬಿಜೆಪಿ ಅಧಿಕಾರವಧಿಯಲ್ಲಿ ಸರಕಾರದ ಬೊಕ್ಕಸದಲ್ಲಿ ದುಡ್ಡು ತುಂಬಿ ತುಳುಕುತ್ತಾ ಇತ್ತು. ಆಗ ಆ ಹಣವನ್ನು ದೇವಸ್ಥಾನಗಳಿಗೆ ಏಕೆ ಕೊಡಲಿಲ್ಲ. ನಮ್ಮ ಸರಕಾರದಲ್ಲಿ ಬೊಕ್ಕಸಕ್ಕೆ ಹಣ ಬರ್ತಿದೆ, ಖಾಲಿ ಆಗ್ತಿದೆ. ನಾವು ರಾಜಕಾರಣವನ್ನು ಧರ್ಮಕ್ಕೆ ಬೇರೆಸಲ್ಲ. ಅವರು ಹಟಕ್ಕೋಸ್ಕರ ರಾಜಕಾರಣದಲ್ಲಿ ಧರ್ಮವನ್ನ ಬೆರೆಸುತ್ತಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಜಿಲ್ಲೆಯ ಹೂಲಗೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ದತ್ತಿ ಕಾಯ್ದೆ ತಿದ್ದುಪಡಿ ತಂದಿದ್ದೆ ವಿಜಯೇಂದ್ರ ಅವ್ರ ಅಪ್ಪ ಯಡಿಯೂರಪ್ಪನವರು. ಅವರೇ ೨೦೧೧ರಲ್ಲಿ ಈ ಕಾಯ್ದೆ ತಂದಿದ್ದು ಎಂದು ದತ್ತಿ ಕಾಯ್ದೆ ತಿದ್ದುಪಡಿ ತಂದಿರುವುದನ್ನು ಎಕ್ಸ್ನಲ್ಲಿ ಕೇಳಿದ್ದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದರು.
ಸೆಕ್ಷನ್ ೧೯ರಲ್ಲಿ ಹಿಂದೆ ೨೦೧೧ರಲ್ಲಿ ಬೇರೆ ಧಾರ್ಮಿಕ ಸಂಸ್ಥೆಗಳಿಗೆ ಕೊಡಬಹುದು ಎಂದು ಬಿಜೆಪಿಯವರೇ ಮಾಡಿದ್ದರು. ಈಗ ನಾನು ಅದನ್ನು ಬರೀ ಸಿ ದರ್ಜೆ ದೇವಸ್ಥಾನಗಳಿಗೆ ಕೊಡಬೇಕು ಎನ್ನುತ್ತಿದ್ದೇವೆ. ನಾವು ಇನ್ನೂ ಬಂದೋಬಸ್ತ್ ಮಾಡಿದ್ದೇವೆ. ಹೆಚ್ಚುವರಿ ಹಣ ಬರುತ್ತೆ, ಅದರಲ್ಲಿ ೧ ಸಾವಿರ ಸಿ ದರ್ಜೆ ದೇವಸ್ಥಾನಗಳಿಗೆ ೨೫ ಕೋಟಿ ರು., ೭ ಕೋಟಿ ರು. ವೆಚ್ಚದಲ್ಲಿ ೪೦ ಸಾವಿರ ಅರ್ಚಕರಿಗೆ ೫ ಲಕ್ಷ ರು. ಇನ್ಸೂರೆನ್ಸ್ ಮಾಡಿಸುತ್ತೇವೆ. ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ ೫ ಕೋಟಿ ರು. ಸ್ಕಾಲರಶಿಪ್ ಹಾಗೂ ಅರ್ಚಕರ ಮೂರು ಸಂಘದವರ ಮನೆ ಕಟ್ಟಲು ಸಹಾಯ ಮಾಡಿ ಅಂತಾ ಕೇಳುತ್ತಿದ್ದರು. ಅದಕ್ಕಾಗಿ ಈ ವರ್ಷ ೧೫ ಕೋಟಿ ರು. ಇಟ್ಟಿದ್ದೇವೆ ಎಂದರು.