ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ
ಬಳ್ಳಾರಿ: ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಸರಕಾರದ ದುರಾಡಳಿತ ಜನರಲ್ಲಿ ರೇಜಿಗೆ ಹುಟ್ಟಿಸಿದೆ. ಈ ಸರಕಾರದ ಪಾಪದ ಕೊಡ ತುಂಬಿದೆ. ಶೀಘ್ರದಲ್ಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತೋರಣಗಲ್‌ನಲ್ಲಿನ ಜಿಂದಾಲ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎ-೧ ಆರೋಪಿಯಾಗಿದ್ದಾರೆ. ಭ್ರಷ್ಟ, ಭಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ, ವಾಲ್ಮೀಕಿ ನಿಗಮದ ಹಗರಣ ನಡೆದಿದ್ದರೂ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದು ವಾದ ಮಾಡುತ್ತಾರೆ. ಭ್ರಷ್ಟಾಚಾರ ನಡೆದೇ ಇಲ್ಲ ಎನ್ನುವುದಾದರೆ ೧೪ ಸೈಟುಗಳನ್ನು ವಾಪಸ್ಸು ಕೊಟ್ಟಿದ್ದೇಕೆ? ೫೦:೫೦ ಹಂಚಿಕೆ ನಿಯಮವನ್ನು ಬದಲಾವಣೆ ಮಾಡಿದ್ದೇಕೆ? ಮುಡಾದಲ್ಲಿ ಕೆಲಸ ಮಾಡಿದ ಅಧಿಕಾರಿಗಳನ್ನು ಬಚ್ಚಿಡುವ ಮೂಲಕ ಹಗರಣವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ. ನ್ಯಾಯಾಲಯವೇ ನೀವು ದೋಷಿ ಎಂದು ನಿಮ್ಮ ಮೇಲೆ ವಿಚಾರಣೆಗೆ ಅನುಮತಿ ನೀಡಿದೆ. ಆದರೆ ನಿಮ್ಮ ಮೊಂಡು ವಾದ ಬಿಡುತ್ತಿಲ್ಲ. ಇಡಿ ವಿಚಾರಣೆಯಲ್ಲಿ ನಿಮ್ಮ ಎಲ್ಲ ಜಾತಕ ಬಯಲಾಗಲಿದ್ದು, ಶೀಘ್ರದಲ್ಲಿ ನಿಮ್ಮ ಕುರ್ಚಿ ಪತನವಾಗಲಿದೆ ಎಂದರು.
ವಾಲ್ಮೀಕಿ ನಿಗಮದಲ್ಲಿ ೮೯ ಕೋಟಿ ರೂ. ಭ್ರಷ್ಟಾಚಾರ ಆಗಿದೆ. ರಿಕವರಿ ಮಾಡುತ್ತಿದ್ದೇವೆ ಎಂದು ಸದನದಲ್ಲಿಯೇ ಒಪ್ಪಿಕೊಂಡಿದ್ದಾರೆ. ಆದರೂ ನಾಚಿಕೆ ಇಲ್ಲದೇ ನಾವು ಯಾವ ಹಗರಣ ಮಾಡಿಲ್ಲ ಎಂದು ಹೇಳುತ್ತಿದ್ದಾರೆಂದು ಲೇವಡಿ ಮಾಡಿದರು.
ಜ.ಮೈಕಲ್ ಕುನ್ಹಾ ಮಧ್ಯಂತರ ವರದಿ ಸಲ್ಲಿಕೆಗೂ ಮುನ್ನವೇ ಯಡಿಯೂರಪ್ಪ, ಶ್ರೀರಾಮುಲು ಅವರ ವಿರುದ್ಧ ವಿಚಾರಣೆಗೆ ಚಿಂತನೆ ನಡೆಸಿದ್ದೀರಿ? ನಿಮಗೆ ಯಾಕಿಷ್ಟು ಆತುರ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದ ವಿಜಯೇಂದ್ರ, ರಾಜ್ಯದಲ್ಲಿ ನಡೆದಿರುವ ಮೂರು ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ಇಂತಹ ದುಸ್ಸಾಹಸಕ್ಕೆ ಮುಂದಾಗಿದ್ದೀರಿ. ನಿಮ್ಮ ಈ ಪ್ರಯತ್ನ ಸಫಲವಾಗುವುದಿಲ್ಲ ಎಂದರು.