ಕಾಂಗ್ರೆಸ್ ಸರ್ಕಾರದ ಎಟಿಎಂ ತೆಲಂಗಾಣದಲ್ಲಿ ಕೆಲಸ ಮಾಡಿದೆ
ಚಿಕ್ಕಮಗಳೂರು: ಪ್ರತಿ ಚುನಾವಣೆಯಲ್ಲೂ ಭಿನ್ನ ವಿಚಾರಗಳು ಪ್ರಭಾವ ಬೀರುತ್ತದೆ. ಕಾಂಗ್ರೆಸ್ ಸರ್ಕಾರದ ಎಟಿಎಂ ತೆಲಂಗಾಣದಲ್ಲಿ ಕೆಲಸ ಮಾಡಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ಅಭೂತಪೂರ್ವವಾಗಿ ಜಯಗಳಿಸಿರುವ ಕುರಿತು ಪ್ರತಿಕ್ರಿಯಿಸಿ, ಹತ್ತಾರು ವಿಚಾರಗಳು ನಮ್ಮ ವಿರುದ್ಧ ಕೆಲಸ ಮಾಡಿತ್ತು. ಆದರೆ ಮೋದಿ ತುಂಬಾ ಎತ್ತರದ ನಾಯಕ ಅವರ ಪ್ರಭಾವ ಪ್ರತಿ ಚುನಾವಣೆ ಮೇಲೆ ಇದ್ದೇ ಇರುತ್ತದೆ. ಕಾರ್ಯಕರ್ತರ ಶ್ರಮ, ಮೋದಿ ಪ್ರಭಾವ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ೪೮ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ್ದೇನೆ ಅದರಲ್ಲಿ ೩೫ ಕ್ಕೂ ಹೆಚ್ಚು ಸ್ಥಾನಗಳು ಬಂದಿವೆ. ಸಮೀಕ್ಷೆ ಲೆಕ್ಕಾಚಾರ ತಲೆಕೆಳದಾಗಿದೆ. ಈ ಚುನಾವಣಾ ಫಲಿತಾಂಶ ಕೇಂದ್ರದಲ್ಲಿ ಯಾವ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂಬ ಮುನ್ಸೂಚನೆ ನೀಡಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ಕೊಟ್ಟಾಗ ಕಾಂಗ್ರೆಸ್ ಪಕ್ಷ ಎಚ್ಚರಿಕೆವಹಿಸಬೇಕಿತ್ತು ಒಳ ಮೀಸಲಾತಿ ಮನವರಿಕೆ ಮಾಡಿ ಕೊಡುವಲ್ಲಿ ವಿಫಲವಾಗಿದ್ದೆವು ತುಂಬಾ ಕ್ಷೇತ್ರಗಳಲ್ಲಿ ಗ್ಯಾರಂಟಿಗಳು ಕೆಲಸ ಮಾಡಿದೆ ಎಂದರು.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.ಈ ಫಲಿತಾಂಶಕ್ಕೆ ಲಕ್ಷಾಂತರ ಕಾರ್ಯಕರ್ತರು ದುಡಿದಿದ್ದಾರೆ.ಚುನಾವಣಾ ಗೆಲುವಿನ ತಂತ್ರ ಮಾಡಿದ್ದು ಅಮಿತ್ ಶಾ, ಈ ಚುನಾವಣೆ ಫಲಿತಾಂಶ ನಮಗೆ ವಿಶ್ವಾಸ ಮೂಡಿಸಿದೆ.ಪ್ರತಿ ಗೆಲುವು ಆಯಾ ರಾಜಕೀಯ ಪಕ್ಷಗಳಿಗೆ ಆತ್ಮ ವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ನಾವು ಸೋತಾಗ ನಮಗೆ ನಿರಾಸೆಯಾಗಿದ್ದು ನಿಜ,ಸೋಲನ್ನು ಅರ್ಥೈಸಿಕೊಂಡು ಮುನ್ನಡೆದರೆ ಮುಂದೆ ಗೆಲವು ಸಿಗುತ್ತದೆ ಎಂಬುದನ್ನು ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಂದಿರುವ ಫಲಿತಾಂಶ ಸ್ಪಷ್ಟ ನಿದರ್ಶನ.ಆತ್ಮವಿಶ್ವಾಸದಿಂದ ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧತೆಮಾಡಿಕೊಳ್ಳಲಾಗುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರು ಈಗಲಾದರೂ ಜನಾದೇಶ ಸ್ವೀಕರಿಸಲು ಮುಂದಾಗಲಿ,ಗೆದ್ದಾಗ ಜನಾದೇಶ, ಸೋತಾಗ ಇವಿಎಂ ದೋಷ ಎಂದು ಹೇಳಬಾರದು. ಸೋಲಿರಲಿ ಗೆಲುವಿರಲಿ ಜನದೇಶ ಸ್ವೀಕಾರ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕರ್ನಾಟಕದ ಸೋಲಿನ ಬಳಿಕ ಕೇಂದ್ರಿಯ ನಾಯಕತ್ವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಮುಂಚಿತವಾಗಿ ಟಿಕೆಟ್ ಘೋಷಣೆಮಾಡಲಾಯಿತು.ಗ್ಯಾರಂಟಿಗೆ ಕೌಂಟರ್ ಮಾಡುವ ಕೆಲಸ ಮಾಡಿದ್ದೇವೆ. ಮೋದಿಯವರು ಇದು ಮೋದಿ ಗ್ಯಾರಂಟಿ ಎಂದು ಹೇಳಿದ್ದರು ಎಂಬುದನ್ನು ನೆನಪು ಮಾಡಿಕೊಂಡರು.
ತೆಲಂಗಾಣದಲ್ಲಿ ಬಿಜೆಪಿ ಪರ್ಯಾಯ ಪಾರ್ಟಿ ಆಗುವ ಅವಕಾಶ ಇತ್ತು. ಕೈಕೊಂಡ ಕೆಲವು ನಿರ್ಣಯ ಅನುಕೂಲ ಹಾಗೂ ಅನಾನುಕೂಲವು ಆಗಿವೆ ಎಂದು ಹೇಳಿದರು.