ಕಾಂಗ್ರೆಸ್ ಸರ್ಕಾರ ಅಸ್ಥಿರಕ್ಕೆ ಬಿಜೆಪಿ ಹುನ್ನಾರ
ಹುಬ್ಬಳ್ಳಿ: ಬಿಜೆಪಿಗರು ಯಾವಾಗಲೂ ಜನಾಶೀರ್ವಾದದಿಂದ ಅಧಿಕಾರಕ್ಕೆ ಬಂದವರಲ್ಲ. ಈಗಲೂ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರು ನಿರಂತರ ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಹೊಸ ಸಿಎಂ ಬರಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಅವರು ರಾಜೀನಾಮೆಗೆ ಆಗ್ರಹಿಸಿದ ಕೂಡಲೇ ಕೊಡೋಕೆ ಆಗೋದಿಲ್ಲ. ವಿಜಯೇಂದ್ರ ರಾಜೀನಾಮೆ ನೀಡುವಂತೆ ನಾನೂ ಆಗ್ರಹಿಸುತ್ತೇನೆ. ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಅವರು ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನಿಸಿದರು. ಅಲ್ಲದೆ, ಪ್ರಾಸಿಕ್ಯೂಷನ್ ವಿಚಾರವಾಗಿ ನಾಳೆ ವಿಚಾರಣೆ ನಡೆಯಲಿದೆ. ಹೈಕೋರ್ಟ್ ತೀರ್ಮಾನ ಏನೆಂಬುದು ಸ್ಪಷ್ಟವಾಗಲಿದೆ ಎಂದರು. ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಸಂಸದರು ಸೇರಿಕೊಂಡು ಶನಿವಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದೇವೆ. ಎಚ್.ಡಿ.ಕುಮಾರಸ್ವಾಮಿ, ಮುರುಗೇಶ ನಿರಾಣಿ ಹಾಗೂ ಜನಾರ್ಧನ ರೆಡ್ಡಿ ಅವರ ಮೇಲಿರುವ ಪ್ರಾಸಿಕ್ಯೂಷನ್ ತನಿಖೆಗೆ ಆಗ್ರಹಿಸಲಾಗುವುದು. ಈ ಎಲ್ಲ ಪ್ರಕರಣಗಳಲ್ಲೂ ದೋಶಾರೋಪಣ ಪಟ್ಟಿ ಸಲ್ಲಿಕೆಯಾಗಿ ತನಿಖೆಯೂ ಪೂರ್ಣಗೊಂಡಿದೆ. ನಮ್ಮ ಪ್ರಕರಣದಲ್ಲಿ ಯಾವುದೇ ವಿಚಾರಣೆ ಆಗಿಲ್ಲ. ಎಲ್ಲವನ್ನೂ ಸೋಕ್ಷ್ಮವಾಗಿ ಗಮನಿಸಿದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿದ್ದಾರೆ ಎಂಬುದು ಸ್ಪಷ್ಟ ಎಂದರು.