ಕಾಂಗ್ರೆಸ್ ಸರ್ಕಾರ ಇರುವೆಡೆ ಆಸ್ತಿ ಕಬಳಿಸಲು ವಕ್ಫ್ ಸಂಚು
ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇರುವೆಡೆ ವಕ್ಫ್ ಆಸ್ತಿ ಕಬಳಿಸಲು ಸಂಚು ನಡೆದಿದೆ. ೫೦-೬೦ ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ಇವರಪ್ಪನ ಮನೆ ಆಸ್ತಿನಾ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆಸ್ತಿ ತನ್ನದೆಂದು ಎಲ್ಲೂ ಯಾರಿಗೂ ವಕ್ಫ್ ನೋಟಿಸ್ ನೀಡದಂತೆ ರಾಜ್ಯ ಸರ್ಕಾರ ತಕ್ಷಣ ಆದೇಶ ಹೊರಡಿಸಬೇಕು. ಮೌಖಿಕ ಸೂಚನೆ, ಹೇಳಿಕೆಯನ್ನಲ್ಲ ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು
ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇರದಿದ್ದರೆ ವಕ್ಫ್ ಬೋರ್ಡ್ ಮೂಲಕ ಆಸ್ತಿ ಕಬಳಿಸಿ ತಮ್ಮ ತಮ್ಮ ಹೆಸರಿಗೆ ಮಾಡಿಕೊಳ್ಳುವ ತರಾತುರಿಯಲ್ಲಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ವಕ್ಫ್ ಆಸ್ತಿ ಕಬಳಿಸಲು ಆಯಾ ಕಾಂಗ್ರೆಸ್ ಸರ್ಕಾರಗಳೂ ಸಾಥ್ ನೀಡುತ್ತಿದೆ. ರೈತರ, ಹಿಂದೂಗಳ, ಬಡ ಮುಸ್ಲಿಮರ ಮತ್ತು ದೇವಸ್ಥಾನಗಳ ಆಸ್ತಿ ವಶಪಡಿಸಿಕೊಳ್ಳಲು ಅದೇನು ಇವರಪ್ಪಂದೇ? ಎಂದು ಜೋಶಿ ಕಿಡಿ ಕಾರಿದರು.
ವಿಜಯಪುರದಲ್ಲಿ ರೈತರ ಆಸ್ತಿ ತನ್ನದೆನ್ನುತ್ತಿದೆ. ಅಳ್ನಾವರದಲ್ಲಿ ಪೊಲೀಸ್ ಠಾಣೆ, ಉಪ್ಪಿನಬೆಟಗೇರಿ ಹೀಗೆ ಹಲವೆಡೆ ಹಿಂದೂಗಳ, ರೈತರ, ದೇವಸ್ಥಾನಗಳ ಅಷ್ಟೇ ಅಲ್ಲ ಬಡ ಮುಸ್ಲಿಮರ ಆಸ್ತಿಯನ್ನೂ ತನ್ನದೆನ್ನುತ್ತಿದೆ. ಇದು ರಾಜ್ಯ ಸರ್ಕಾರ ಯಾವ ಮಟ್ಟದಲ್ಲಿ ತುಷ್ಟೀಕರಣದಲ್ಲಿ ತೊಡಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಪ್ರಲ್ಹಾದ ಜೋಶಿ ಸರ್ಕಾರದ ವಿರುದ್ಧ ಹರಿ ಹಾಯ್ದರು.
ವಕ್ಫ್ ಕಾಯ್ದೆ ತಿದ್ದುಪಡಿ ಬೆಂಬಲಿಸಲ್ಲ ಏಕೆ?:
ದೇಶದಲ್ಲಿ ಇಂಥ ಅವಾಂತರ ತಡೆಯಲು ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾದರೆ ಅದನ್ನೇಕೆ ಕಾಂಗ್ರೆಸ್ ಬೆಂಬಲಿಸುತ್ತಿಲ್ಲ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು. ಈಗ ವಕ್ಫ್ ನೋಟಿಸ್ ನೋಡಿ ರಾಜ್ಯದಲ್ಲಿ ಅಮಾಯಕ ರೈತರು, ಜನ ದಂಗಾಗಿದ್ದಾರೆ. ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ನೋಟಿಸ್ ನೀಡದಂತೆ ವಕ್ಫ್ ಗೆ ಆದೇಶ ನೀಡಬೇಕು. ಮತ್ತು ಕೇಂದ್ರ ಜಾರಿ ತರಲು ಉದ್ದೇಶಿಸಿರುವ ವಕ್ಫ್ ಕಾಯ್ದೆ ತಿದ್ದಡಿಯನ್ನು ಬೆಂಬಲಿಸಬೇಕು ಎಂದು ಜೋಶಿ ಒತ್ತಾಯಿಸಿದರು.
ಅಲ್ಲಾ ಹೆಸರಲ್ಲಿ ಬೋಗಸ್ ನಡಿಸ್ಯಾರ
೨೦೧೩ ರಲ್ಲಿ ವಕ್ಫ್ ಗೆ ಅಪರಿಮಿತವಾದಂತಹ ಅಧಿಕಾರ ಕೊಟ್ಟಿದ್ದಾರೆ. ರೈತರ, ದೇವಸ್ಥಾನಗಳ ಆಸ್ತಿ ವಕ್ಫ್ ಗೆ ಕೊಡಲು ಇವರು ಯಾರು? ಈ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಹೇಳಿದರು. ವಕ್ಫ್, ಆಸ್ತಿ ಕಬಳಿಸಲು ಅಲ್ಲಾ ನನ್ನು ಮುಂದಿಡುತ್ತಿದೆ. ಆದರೆ, ಅಲ್ಲಾ ಆಸ್ತಿ ಕಬಳಿಸಿ ಎಂದಿಲ್ಲ. ಅಲ್ಲಾ ಹೆಸರಲ್ಲಿ ಎಲ್ಲಾ ಬೋಗಸ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಾನಿಗೆ ನಾವು ವಿರುದ್ಧವಲ್ಲ. ಅಲ್ಲಾನ ಹೆಸರಿನಲ್ಲಿ ಬದ್ಮಾಶಗಿರಿ ಮಾಡುವವರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಜೋಶಿ ಹೇಳಿದರು.
ಆಸ್ತಿ ಕಬಳಿಕೆ ವಿರುದ್ಧ ಬಿಜೆಪಿ ಹೋರಾಟ:
೪೦-೫೦ ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರ ಜಮೀನನ್ನು ವಕ್ಫ್ ಗೆ ಕೊಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಸಚಿವ ಜೋಶಿ, ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.