ಕಾಡಾನೆಗೆ ಪರ್ಮಿಟ್ ಬೇಕೇ…
ಈ ಕಾಡಾನೆಗೇನು ಗೊತ್ತು, ಗಡಿ, ಭಾಷೆ, ಪಕ್ಷ ರಾಜಕಾರಣ…!?
ಆನೆಯಷ್ಟೇ ಅಲ್ಲ. ಎಲ್ಲ ವನ್ಯಜೀವಿಗಳೂ, ನಾಯಿ, ಬೆಕ್ಕುಗಳೂ ತಮ್ಮ ಅನ್ನಾಹಾರ ಮತ್ತು ಜೀವಕ್ಕೆ ಅಪಾಯ ಎದುರಾದಲ್ಲಿ ರಕ್ಷಿಸಿಕೊಳ್ಳಲು ಯಾವ ಮಟ್ಟಿನ ಸಂಘರ್ಷಕ್ಕೂ ಇಳಿಯುತ್ತವೆ.
ಕೇರಳದ ವೈನಾಡ್ ಜಿಲ್ಲೆಯಲ್ಲಿ ಕಾಡಾನೆ ಹಳ್ಳಿಗೆ ನುಗ್ಗಿ ಆಜೀಶ್ ಎನ್ನುವ ರೈತನ ಮೇಲೆ ದಾಳಿ ಮಾಡಿ ತುಳಿದು ಹೊಸಕಿ ಹಾಕಿತು. ರೊಚ್ಚಿಗೆದ್ದ ಜನ ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ತೀವ್ರ ಪ್ರತಿಭಟನೆಗೈದಾಗಲೇ, ಅಲ್ಲಿಯ ಸಂಸದ ರಾಹುಲ್ ಗಾಂಧಿ ದೌಡಾಯಿಸಿ ಆಜೀಶ್ ಕುಟುಂಬಕ್ಕೆ ಸಾಂತ್ವನ ಹೇಳಿ, ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಕೇರಳ ಸರ್ಕಾರ ೫ ಲಕ್ಷ ರೂಪಾಯಿ ಪರಿಹಾರ ನೀಡಿದ್ದರೆ, ಕರ್ನಾಟಕ ಸರ್ಕಾರ ರಾಹುಲ್ ಶಿಫಾರಸಿನಂತೆ ೧೫ ಲಕ್ಷ ರೂಪಾಯಿ ಆಜೀಶ್ ಕುಟುಂಬಕ್ಕೆ ಪರಿಹಾರವಾಗಿ ನೀಡಿತ್ತು.
ಈಗ ಇದೇ ವಿವಾದ
ಕೇರಳದ ವೈನಾಡಿನಲ್ಲಿ ಸತ್ತ ಆಜೀಶ್‌ಗೆ ಕರ್ನಾಟಕ ಸರ್ಕಾರ ಪರಿಹಾರ ನೀಡಿದ್ದೇಕೆ ಎನ್ನುವ ಆಕ್ಷೇಪ ಪ್ರತಿಪಕ್ಷಗಳದ್ದು. ಆಜೀಶ್‌ನನ್ನು ಕೊಂದದ್ದು ಕರ್ನಾಟಕದ ಆನೆ. ಹಾಸನ ಕೊಡಗು ಜಿಲ್ಲೆಗಳಲ್ಲಿ ಉಪಟಳ ನಡೆಸಿದ ಆನೆಯನ್ನು ಹಿಡಿದು ಅದರ ದಂತ ತೆಗೆದು ರೇಡಿಯೋ ಕಾಲರ್ ಅಳವಡಿಸಿ ಕಳೆದ ನವೆಂಬರ್‌ನಲ್ಲಿ ಬಂಡಿಪುರ ಅರಣ್ಯಕ್ಕೆ ಬಿಡಲಾಗಿತ್ತು. ಅದೇ ಆನೆ ರಾಜ್ಯ ಗಡಿ ದಾಟಿ ವೈನಾಡಿಗೆ ಹೋಗಿ ಆಜೀಶ್‌ನನ್ನು ಕೊಂದಿದೆ. ಕೇರಳದ ಮಂತ್ರಿಯದ್ದೋ, ರಾಹುಲ್ ಗಾಂಧಿಯ ಕೋರಿಕೆಯ ಮೇರೆಗೋ ಸರ್ಕಾರ ೧೫ ಲಕ್ಷ ಪರಿಹಾರ ನೀಡಿ ಅದಕ್ಕೆ ಸ್ಪಷ್ಟನೆ ನೀಡಿದೆ.
ಮಾನವೀಯ ಅನುಕಂಪದ ಕಾರ್ಯಕ್ಕೆ ಆಕ್ಷೇಪವೇಕೆ ಎಂದರೆ ರಾಜಕಾರಣ ಇಲ್ಲಿಗೇ ಮುಕ್ತಾಯವಾಗುತ್ತದಾ?
ಇಲ್ಲ. ಆಗಲೇ ಆರಂಭವಾದದ್ದು ಸರ್ಕಾರದ ನಡವಳಿಕೆ ಪ್ರಶ್ನೆ ಮಾಡುವ ಪ್ರಕ್ರಿಯೆ. ಇದೇ ಪ್ರಪ್ರಥಮ ಪ್ರಕರಣ, ಹೊರ ರಾಜ್ಯದ ವ್ಯಕ್ತಿಯೊಬ್ಬನ ಸಾವಿಗೆ ಸರ್ಕಾರ ಪರಿಹಾರ ಘೋಷಿಸಿದ್ದು.
ಕರ್ನಾಟಕದ ಆನೆ ವೈನಾಡಿನಲ್ಲಿ ದಾಳಿಗೈದ ಪರಿಣಾಮ ೧೫ ಲಕ್ಷ ರೂಪಾಯಿಯನ್ನೇನೋ ಸರ್ಕಾರ ನೀಡಿತು. ಮಾನವೀಯ ದೃಷ್ಟಿಯಿಂದ ಪರಿಗಣಿಸಿದರೂ ಕೂಡ, ಅರಣ್ಯ ಇಲಾಖೆಯಿಂದ ಉಳಿದ ಸಂದರ್ಭಗಳಲ್ಲಿ ಹೆಚ್ಚೆಂದರೆ ಕೊಡುವುದು ಕೇವಲ ನಾಲ್ಕು ಲಕ್ಷ. ಇದು ದುರ್ದೈವ. ಆಜೀಶ್ ಕುಟುಂಬಕ್ಕೆ ಕೊಟ್ಟಿರುವಷ್ಟೇ ಪರಿಹಾರವನ್ನು ರಾಜ್ಯದಲ್ಲಿ ಬಲಿಯಾದವರಿಗೂ ಕೊಡಬೇಕಲ್ಲವೇ?
ಕರ್ನಾಟಕದ ಆನೆ ಗಡಿದಾಟಿ ಉಪಟಳಗೈದಿದ್ದಕ್ಕೆ ಪರಿಹಾರ ನೀಡಿದರೆ ಮುಂದೆ ಅಲ್ಲಿಯ ಕಾಡುಪ್ರಾಣಿಗಳು ಗಡಿ ಅಂಚಿನಲ್ಲಿ ನಡೆಸಿದ ಇಂತಹ ಅವಘಡಗಳಿಗೆ ಪರಿಹಾರ ನೀಡುತ್ತವೆಯೆ? ಒಕ್ಕೂಟ ವ್ಯವಸ್ಥೆ, ನನ್ನ ತೆರಿಗೆ-ನನ್ನ ಹಕ್ಕು, ಸರ್ಕಾರದ ನೀತಿ-ಧೋರಣೆ ಇತ್ಯಾದಿ ಗೊಂದಲಕ್ಕೆ ಸಿಲುಕಿದ ಅಧಿಕಾರಿಗಳಿಗೆ, ಮಾನವೀಯತೆ ಮಾಯವಾಗಿ ಇದೊಂದು ಪೆಂಡುರಾ ಪೆಟ್ಟಿಗೆ ಆದೀತೇ?' ಎನ್ನುವ ತಲೆಬಿಸಿ. ಆದರೆ ಈ ಸಾಂತ್ವನದಲ್ಲಿ ವಾತಾವರಣದಲ್ಲಿ ಅದರಲ್ಲೂ ವಿಶೇಷವಾಗಿ ವನ್ಯಜೀವಿಗಳ ದಾಳಿ, ಪ್ರಕೃತಿ ವಿಕೋಪ, ವೈಪರೀತ್ಯಗಳು ಇತ್ಯಾದಿಗಳಿಗೆ ಈ ತರಹದ ಗಡಿ, ಭಾಷೆ, ಜಾತಿ, ಪಕ್ಷ ಇತ್ಯಾದಿ ತಂಟೆ ಎತ್ತಬೇಕಾದ ಅಗತ್ಯವೇನು? ಈಗ ಮೂಲಭೂತವಾಗಿ ಪ್ರಶ್ನೆ ಎದ್ದಿರುವುದು ವನ್ಯ ಪ್ರಾಣಿಗಳು ಮತ್ತು ಮಾನವನ ಸಂಘರ್ಷ. ಈ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡದಿದ್ದರೆ ಬಹುಶಃ ಕಳೆದ ಮರ‍್ನಾಲ್ಕು ವರ್ಷಗಳಿಂದ ಮಲೆನಾಡು, ಕರಾವಳಿ ಮತ್ತು ಅರಣ್ಯದಂಚಿನ ನೂರಾರು ಕುಟುಂಬಗಳ ಬದುಕು ಉಳಿಸಬಹುದಿತ್ತು. ಈ ಮಲೆನಾಡು, ಹಾಸನ, ಮಂಡ್ಯ, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಕಾಡನ್ನು ವ್ಯಾಪಕವಾಗಿ ಹೊಂದಿಕೊಂಡಿರುವಂತಹ ಜಿಲ್ಲೆಗಳಲ್ಲಿ ಕಾಡಾನೆಗಳ ದಾಳಿಗೆ ನಾಲ್ಕು ವರ್ಷಗಳಲ್ಲಿ ೯೨ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರೈವತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ೨೦೧೯-೨೦೨೦ರ ಕಾಡಾನೆ ದಾಳಿಯಲ್ಲಿ ೨೦ ಮಂದಿ, ೨೦೨೦-೨೧ರಲ್ಲಿ ೨೩ ಮಂದಿ, ೨೦೨೧-೨೨ರಲ್ಲಿ ೨೨ ಮಂದಿ, ೨೦೨೨ರ ನಂತರದಲ್ಲಿ ೨೧ ಮಂದಿ ಬಲಿಯಾಗಿದ್ದಾರೆಂದು ಸರ್ಕಾರದ ಅಂಕಿಸಂಖ್ಯೆಗಳು ಹೇಳುತ್ತವೆ. ಇನ್ನು ಹುಲಿ, ಕರಡಿ, ಚಿರತೆ ಇತ್ಯಾದಿಗಳಿಗೆ ಜನ ಜಾನುವಾರು, ಸಾಕು ಪ್ರಾಣಿಗಳು ಬಲಿಯಾದದ್ದು ಸಾಕಷ್ಟಿದೆ. ಈ ಸಾರೆಯಂತೂ ಬರ. ಕಾಡುಗಳಲ್ಲಿ ಆಹಾರವಿಲ್ಲ. ಹೊಲ- ಗದ್ದೆಗಳು ಬೀಳುಬಿದ್ದಿವೆ. ನೀರು, ಆಹಾರ ಕಾಡಲ್ಲಿ ಸಿಗದಿದ್ದಾಗ ತಮ್ಮ ಕಾಡನ್ನೇ ಬರಿದು ಮಾಡಿ ಜಮೀನು, ನಗರ ಇತ್ಯಾದಿಗಳ ಕಡೆ ಪ್ರಾಣಿಗಳು ದಾಳಿ ಮಾಡುತ್ತವೆ. ಅವುಗಳಿಗೂ ಆಹಾರ ಬೇಕು. ಆದರೆ ಅವು ಹೊರಬಿದ್ದಾಗ ಜನ ಭಯಗೊಂಡು ಪ್ರತಿಕ್ರಿಯಿಸುತ್ತಾರೆ. ಆಗ ಅವು ತಮ್ಮ ಜೀವಕ್ಕೆ ಅಪಾಯ ಬಂದಿದೆಯೇನೋ ಎಂದು ಜನರ ಮೇಲೆ ದಾಳಿ ಮಾಡುತ್ತವೆ. ಫಸಲನ್ನು ತುಳಿದು ಹಾಕುತ್ತವೆ. ಬಾಳೆ- ಅಡಕೆ, ಕಬ್ಬು, ದ್ರಾಕ್ಷಿ ಎಲ್ಲವೂ ಅವುಗಳ ಆಹಾರ. ರೈತರ ಒಂದು ವರ್ಷದ ಶ್ರಮ ವ್ಯರ್ಥ. ಬದುಕಿಗೆ ಆತಂಕ. ಕಳೆದ ಹತ್ತಾರು ವರ್ಷಗಳಿಂದ ಕಾಡಂಚಿನ ಪ್ರದೇಶಗಳಲ್ಲಿ ಈ ಕಿರಿಕಿರಿ ತಪ್ಪಿದ್ದಲ್ಲ. ಜನಪ್ರತಿನಿಧಿಗಳಿಗೆ ಜನ ಸಿಟ್ಟಿನಿಂದ ಹೊಡೆದದ್ದೂ ಇದೆ. ಮೂಡಿಗೆರೆಯ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿಯವರ ಬಟ್ಟೆ ಹರಿದು ಜನ ಆಕ್ರೋಶವನ್ನು ಪಡಿಸಿದ್ದು ಇನ್ನೂ ಹಸಿರಾಗಿದೆ. ಅವರೇನು ಮಾಡಿಯಾರು? ಗೊತ್ತಿಲ್ಲ. ನಾವು ಚುನಾಯಿಸಿದ್ದೇವೆ. ನಮ್ಮನ್ನು ರಕ್ಷಣೆ ಮಾಡಬೇಕು ಎನ್ನುವುದು ಜನ ಭಾವನೆ. ಕಾಡಿಗೆ ಬೇಲಿ ಹಾಕಲಾದೀತೇ ಎನ್ನುವುದು ಸರ್ಕಾರದ ಪ್ರಶ್ನೆ. ಇದು ಕರ್ನಾಟಕದ್ದಷ್ಟೇ ಪ್ರಶ್ನೆ ಅಲ್ಲ. ದೇಶದಲ್ಲಿ ಕಾಡು ಹೊಂದಿರುವ ಎಲ್ಲ ರಾಜ್ಯಗಳ ಚಿಂತೆ. ಕಾಡು ನಾಶದ ಬಗ್ಗೆ, ಕಾಡು ಕಡಿದು ರಾಷ್ಟ್ರೀಯ ಯೋಜನೆಗಳನ್ನು ಕಾಡಿನ ಮಧ್ಯೆ ತಂದು ಪ್ರತಿಷ್ಠಾಪಿಸುವ ಬಗ್ಗೆ ಎಷ್ಟು ಚುರುಕಾಗಿ ಕಾರ್ಯಕ್ರಮಗಳು ಸಿದ್ಧವಾಗುತ್ತವೋ ಅಷ್ಟು ವೇಗವಾಗಿ ಕಾಡು ಪ್ರಾಣಿಗಳ ರಕ್ಷಣೆಯ ಯೋಜನೆಗಳು ಸಿದ್ಧವಾಗುವುದಿಲ್ಲ. ರಾಜ್ಯದ ಕಾವೇರಿ, ಶರಾವತಿಯಿಂದ ಹಿಡಿದು ಕಾಳಿ ವಾರಾಹಿಯವರೆಗೆ ಎಲ್ಲ ಜಲವಿದ್ಯುತ್ ಯೋಜನೆಗಳನ್ನೇ ತೆಗೆದುಕೊಳ್ಳಿ. ಯೋಜನೆಗೆ ಅನುಮೋದನೆ ದೊರೆಯುವ ಮೊದಲೇ ಅಲ್ಲಿನ ಮರಗಳು ಗರಗಸಕ್ಕೆ ಬಲಿಯಾದವು. ಕಾಡು ಹೋಗಿ ಬಟಾಬಯಲಾಯಿತು. ಅಲ್ಲಿದ್ದ ವನ್ಯ ಜೀವಿಗಳು, ಪಕ್ಷಿಗಳು ಏನಾದವು? ಇದರ ಬಗ್ಗೆ ಚಿಂತನೆಗಳಿಲ್ಲ. ಯೋಜನೆಗಳಲ್ಲಿ ವನ್ಯಜೀವಿ ರಕ್ಷಣೆ, ಅವುಗಳ ಪುನರ್ವಸತಿ ಇತ್ಯಾದಿ ಚಿಂತನೆಯೇ ಇಲ್ಲ.. ಕಾಡಾನೆ ಹಾವಳಿ ತಡೆಗೆ ಎರಡು ವರ್ಷಗಳ ಹಿಂದೆ ನಾಲ್ಕು ಜಿಲ್ಲೆಗಳಲ್ಲಿ ಎಲಿಫಂಟ್ ಟಾಸ್ಕ್ ಫೋರ್ಸ್ ಉದ್ಭವಿಸಿತು. ಆದರೆ ಈ ಟಾಸ್ಕ್ ಫೋರ್ಸ್ ಏನು ಮಾಡಬೇಕು? ಏನೆಲ್ಲ ಇದರ ಕೆಲಸ? ಎನ್ನುವುದೂ ಇಲ್ಲ. ದಮಡಿ ಕಾಸು ಕೊಟ್ಟಿಲ್ಲ. ಪೂರ್ಣ ಸಿಬ್ಬಂದಿಯನ್ನೂ ನೇಮಕ ಮಾಡಿಲ್ಲ. ಕೇವಲ ಆಯಾ ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಒಂದು ನೊಟಿಫಿಕೇಶನ್ ಹೊರಡಿಸಿ ಕೈತೊಳೆದುಕೊಂಡಿತು ಸರ್ಕಾರ. ಕೆಲ ಆಸಕ್ತರು ಅರಣ್ಯ ಮಧ್ಯೆ ನೀರು ಒದಗಿಸುವುದು, ಹಣ್ಣು ಬೆಳೆಯುವುದು, ಆಹಾರ ಅಲ್ಲಿಯೇ ದೊರೆಯುವಂತೆ ಮಾಡುವುದು, ಪ್ರಾಣಿಗಳು ನಾಡಿಗೆ ಬಾರದಂತೆ ಕಂದಕ ತೆಗೆಯುವುದು, ಸೌರ ಬೇಲಿ ನಿರ್ಮಾಣ, ಅರಣ್ಯದ ಒಳಗೆ ಕಬ್ಬು-ಬಾಳೆ, ಸೊಪ್ಪು ಗಿಡ ಗಂಟಿ ಬೆಳೆಸುವುದು ಇವೇ ಮೊದಲಾದ ಯೋಜನೆ ರೂಪಿಸಿ ಸರ್ಕಾರಕ್ಕೇನೋ ಸಲ್ಲಿಸಿದರು. ದುರಂತವೆಂದರೆ ಈ ಟಾಸ್ಕ್ ಫೋರ್ಸ್
ಫೋರ್ಸ್'ಪಡೆಯಲೇ ಇಲ್ಲ.
ಕೊಡಗು, ಹಾಸನ, ಉತ್ತರ ಕನ್ನಡದಲ್ಲಿ ಕಾಡಾನೆ ಮತ್ತು ವನ್ಯಪ್ರಾಣಿಗಳ ಹಾವಳಿ ಜೋರಾದಾಗ ತಿಂಗಳ ಹಿಂದೆ ವನ್ಯಜೀವಿ ಮತ್ತು ಮಾನವ- ರೈತರ ಸಮಸ್ಯೆಗಳ ಕುರಿತು ಸಭೆ ನಡೆಸಲಾಯಿತು. ಅಲ್ಲಿಯೂ ಅಷ್ಟೆ. ಭಾಷಣ-ಭೀಷಣಗಳೇ ನಡೆದವು. ಉಚಿತ ಸಲಹೆಗಳು ಬಂದವು. ಟಾಸ್ಕ್ಫೋರ್ಸ್ಗಳಿಗೆ ಏನು ಮಾಡಬೇಕು ಎನ್ನುವುದೇ ಹೊರಬರಲಿಲ್ಲ.
ಅಸ್ಸಾಂ, ಒಡಿಶಾ, ಉತ್ತರಾಖಂಡ ಮೊದಲಾದೆಡೆಯೂ ಇಲ್ಲಿಗಿಂತ ಹೆಚ್ಚು ಕಾಡು ಪ್ರಾಣಿಗಳ ಸಮಸ್ಯೆ. ಮಾನವ ಮತ್ತು ವನ್ಯ ಪ್ರಾಣಿಗಳ ನಡುವಿನ ಸಂಘರ್ಷ ಸಮಸ್ಯೆಗಳಿವೆ.. ದಕ್ಷಿಣದಲ್ಲಿ ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದ ಗಡಿಯಂಚಿನಲ್ಲಿ ಇದೇ ಸಂಘರ್ಷ. ಒಂದು ರಾಜ್ಯದ ಆನೆ, ಒಂದು ರಾಜ್ಯದ ಪ್ರಾಣಿ, ಆ ರಾಜ್ಯದ ಹುಲಿ- ಚಿರತೆ ಎಂದು ಜಗಳವಾಡುವ, ಪರಿಹಾರ ವಿತರಣೆಗೆ ಕೊಂಕು ತೆಗೆಯುವ, ಆಕ್ಷೇಪ ಎತ್ತುವ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಈ ಸಂಘರ್ಷ ತಡೆಗೆ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಮತ್ತು ಕಾರ್ಯಯೋಜನೆ ರೂಪಗೊಳ್ಳಬೇಕಲ್ಲವೇ?
ವೈನಾಡಿನ ವ್ಯಕ್ತಿಗೆ ೧೫ ಲಕ್ಷ ರೂಪಾಯಿ ಪರಿಹಾರಕ್ಕೆ ಆಕ್ಷೇಪ ವ್ಯಕ್ತಪಡಿಸುವವರು ಪ್ರಾಣಿಗಳಿಗೆ ಗಡಿ ಹಾಕಲು, ಕಾನೂನು ಕಟ್ಟಳೆ ಕಲಿಸಲು ಆದೀತೇ? ನೀರು ಗಡಿ- ಭಾಷೆಗೆ ಇದುವರೆಗೆ ತಂಟೆ ಇತ್ತು. ವನ್ಯಜೀವಿ ವಿಷಯದಲ್ಲೂ ರಾಜಕಾರಣ ಸೇರಿಕೊಂಡಂತಾಯಿತು.
ಕೇರಳ ವಿಧಾನಸಭೆ ಮೊನ್ನೆ ಮೊನ್ನೆ ಕೇಂದ್ರದ ವನ್ಯಜೀವಿ ಕಾನೂನುಗಳಿಗೆ ಕೆಲವು ಬದಲಾವಣೆಗಳನ್ನು ಸೂಚಿಸಿ ಶಿಫಾರಸು ಮಾಡಿದೆ. ರಾಷ್ಟçಕ್ಕೊಂದು ವನ್ಯಜೀವಿ ಸಂರಕ್ಷಣಾ ಮಂಡಳಿ ಇದೆ. ಹಸಿರು ನ್ಯಾಯಪೀಠವಿದೆ. ಅರಣ್ಯ ಸಂರಕ್ಷಣೆ, ಬೆಳವಣಿಗೆ, ಅರಣ್ಯ ಭೂಮಿಯ ನಿಯಂತ್ರಣಕ್ಕೆ ಸಾವಿರಾರು ಕೋಟಿ ರೂಪಾಯಿ ಯೋಜನೆಗಳನ್ನು ಪ್ರತಿ ವರ್ಷ ಇನ್ನೂ ಅರಣ್ಯವನ್ನೇ ನೋಡದ, ಸಮಸ್ಯೆ ಆಲಿಸದ ಅಧಿಕಾರಿಗಳು, ಪ್ರತಿನಿಧಿಗಳು ಎಸಿ ಕೊಠಡಿಯಲ್ಲಿ ಕುಳಿತು ಸಿದ್ಧಪಡಿಸುತ್ತಾರೆ. ಸರ್ಕಾರ ಬದಲಾದಾಗಲೆಲ್ಲ ಹೊಸ ಹೊಸ ಅರಣ್ಯ-ವನ್ಯಜೀವಿ ನೀತಿಗಳನ್ನು ತರುತ್ತಲೇ ಇರುತ್ತವೆ ! ಪಾಪ, ಅರಣ್ಯದಂಚಿನ ಮಡಿಕೇರಿ, ಪುತ್ತೂರು, ದಾಂಡೇಲಿ ಮಂದಿಯ ಸಲಹೆಯನ್ನೂ ಕೇಳಲ್ಲ. ಅವರಿಗೆ ಉಪಟಳವನ್ನೂ ನಿಲ್ಲಿಸಲ್ಲ. ಏನಾದವೋ ಯೋಜನೆಯ ದುಡ್ಡು ಗೊತ್ತಿಲ್ಲ.
ಕೇಂದ್ರದ ಪರಿಸರ ಸಚಿವರೊಬ್ಬರು ಮೂರು ವರ್ಷಗಳ ಹಿಂದೆ ಆನೆ ದಿನ' ಆಚರಿಸಿ, ಮನುಷ್ಯನ ಜೊತೆಗಿನ ಸಂಘರ್ಷಕ್ಕೆ ಕಡಿವಾಣ ಹಾಕಲು ಆನೆಗಳನ್ನು ಕಾಡಿನಲ್ಲೇ ಇರುವಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಅಗತ್ಯ ಇರುವ ನೀರು ಆಹಾರ ಸಂಗ್ರಹಕ್ಕೆ ಯೋಜನೆ ರೂಪಿಸುತ್ತೇನೆ ಎಂದು ಘೋಷಿಸಿ ಎಲ್ಲರ ಅಪಹಾಸ್ಯಕ್ಕೆ ಈಡಾಗಿದ್ದರು. ಈಗ
ಮಂಗ'ಗಳನ್ನೇ ನೋಡಿ. ಕಾಡು ತೊರೆದಿವೆ. ಕಾಡಂಚಿನ ಪ್ರದೇಶವಷ್ಟೇ ಅಲ್ಲ. ನಗರ ಪ್ರದೇಶಗಳಲ್ಲಿಯೂ ವಾಸ್ತವ್ಯ ಬದಲಿಸಿವೆ. ಬೆಳೆ ಸಂರಕ್ಷಣೆ ಬಿಡಿ. ನಗರದಂಚಿನ ಮನೆಗಳ ಸಂರಕ್ಷಣೆಯೇ ಸಾಧ್ಯವಾಗಲಿಕ್ಕಿಲ್ಲ. ಕಪ್ಪು, ಕೆಂಪು ಮೂತಿಯ ಮಂಗಗಳ ನಿಯಂತ್ರಣ ಹೇಗೆಂಬ ಬಗ್ಗೆ ವರ್ಷಗಳ ಹಿಂದೆ ಅಧಿವೇಶನದಲ್ಲಿ ಚರ್ಚೆ ನಡೆದಿತ್ತು!
ಕಾಡಿನ ಗುಣಮಟ್ಟ, ನೈಜ ಸಂಯೋಜನೆಯೇ ಅಸ್ವಸ್ಥಗೊಂಡಿರುವುದರಿಂದ ವನ್ಯಜೀವಿಗಳು ಹೇಗೆ ಕಾಡಿನಲ್ಲಿ ಉಳಿಯಲಾರವೋ ಹಾಗೇ ಅವುಗಳ ಉಪಟಳದಿಂದ ಜನರ ಬದುಕೂ ಹೈರಾಣ.