For the best experience, open
https://m.samyuktakarnataka.in
on your mobile browser.

ಕಾಡಾನೆ ದಾಳಿಗೆ ಬಲಿಯಾದ ಮಹಿಳೆ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಿಸಿದ ಸಿಎಂ

03:50 PM Nov 08, 2023 IST | Samyukta Karnataka
ಕಾಡಾನೆ ದಾಳಿಗೆ ಬಲಿಯಾದ ಮಹಿಳೆ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹೆಡದಾಳು ಬಳಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ 29 ವರ್ಷ ವಯಸ್ಸಿನ ಶ್ರಮಿಕ ಮಹಿಳೆ ಮೀನಾ ಅವರ ಸಾವಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿಗಳು ತಕ್ಷಣ 15 ಲಕ್ಷ ರೂ ಪರಿಹಾರದ ಚೆಕ್ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂಡಿಗೆರೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ತುರ್ತು ಸಭೆ ನಡೆಸಿದರು. ಪಟ್ಟಣಕ್ಕೆ ಬಂದಿರುವ ಕಾಡಾನೆಗಳನ್ನು ವಾಪಾಸ್ ಕಾಡಿಗೆ ಕಳುಹಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಮೃತ ಮೀನಾ ಅವರ ಮೃತದೇಹ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರ ಜತೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕಾಡಾನೆ ಹಾವಳಿ ತಪ್ಪಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಸೂಚನೆ ನೀಡಿದ್ದೇನೆ.
ಅರಣ್ಯ ಸಚಿವರೂ ಇಲ್ಲಿಗೆ ಬಂದು ಸುದೀರ್ಘ ಸಭೆ ನಡೆಸಿ ರಕ್ಷಣಾ ಕಾರ್ಯಗಳ ಕುರಿತಾಗಿ ಕ್ರಮ ಕೈಗೊಳ್ಳುತ್ತಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಾಫಿ ತೋಟಗಳು ಇರುವುದರಿಂದ ಕಾಡಾನೆಗಳು ಬರುತ್ತಿವೆ. ರೈಲ್ವೇ ಫೆನ್ಸಿಂಗ್ ಹಾಕುವುದೂ ಸೇರಿ ಅಗತ್ಯ ಕ್ರಮಗಳ ಕುರಿತು ಟಾಸ್ಕ್ ಫೋರ್ಸ್ ಗೆ ಸ್ಪಷ್ಟ ಸೂಚನೆ ನೀಡಲು ಅರಣ್ಯ ಸಚಿವರ ಜತೆ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ತಿಳಿಸಿದ್ದಾರೆ.
ಕಾಡಾನೆಗಳಿಗೆ ಗುಂಡು ಹೊಡೆದು ಕೊಲ್ಲಬೇಕು ಎನ್ನುವ ಸ್ಥಳೀಯರ ಮತ್ತು ಪ್ರತಿಭಟನಾಕಾರರ ಒತ್ತಾಯದ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಆ ಹಂತಕ್ಕೆ ಯೋಚನೆ ಮಾಡುವುದು ಬೇಡ. ಇತರೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.