ಕಾಡಿಗೆ ಮರಳಿದ ದಸರಾ ಆನೆಗಳು
ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ ಆನೆಗಳು ತಮ್ಮ ಮೂಲ ಅರಣ್ಯ ಶಿಬಿರಗಳಿಗೆ ಹಿಂದಿರುಗಿವೆ. ಅರಮನೆ ಆವರಣದಲ್ಲಿ ಸೋಮವಾರ ಆನೆಗಳಿಗೆ ಬೀಳ್ಕೊಡುಗೆ ನೀಡಲಾಯಿತು.
ಏಕಲವ್ಯನ ತಕರಾರು: ಈ ಬಾರಿಯ ಹಬ್ಬದಲ್ಲಿ ವಿಶೇಷವಾಗಿ ಗಮನಸೆಳೆದಿದ್ದ ಏಕಲವ್ಯ ಆನೆ ಅರಮನೆ ಆವರಣ ಬಿಟ್ಟು ಲಾರಿ ಏರಲು ಕೆಲಕಾಲ ಸತಾಯಿಸಿತು. ಏಕಲವ್ಯನ ಮಾವುತ ಮತ್ತು ಕಾವಾಡಿ, ನಾವು ಮತ್ತೆ ಬರೋಣ ಈಗ ಲಾರಿ ಹತ್ತು ಎಂದು ಆನೆಯನ್ನು ಪುಸಲಾಯಿಸಿದ್ದು ಗಮನ ಸೆಳೆಯಿತು. ಇದನ್ನು ಹೊರತುಪಡಿಸಿದರೆ ಅಂಬಾರಿ ಆನೆ ಅಭಿಮನ್ಯು ಸೇರಿದಂತೆ ಉಳಿದ ೧೩ ಆನೆಗಳು ಸೊಂಡಿಲೆತ್ತಿ ಎಲ್ಲರಿಗೂ ನಮಸ್ಕರಿಸುತ್ತಲೇ ಲಾರಿಗಳನ್ನು ಏರಿದ್ದು ವಿಶೇಷ. ಇದಕ್ಕೂ ಮೊದಲು ಆನೆಗಳಿಗೆ ಪೂಜೆ ಸಲ್ಲಿಸಿ, ವಿವಿಧ ಹಣ್ಣು ಕಬ್ಬು ಬೆಲ್ಲ ಇತ್ಯಾದಿ ತಿನ್ನಿಸಲಾಯಿತು. ಬಳಿಕ ಒಂದರ ನಂತರ ಒಂದರಂತೆ ಲಾರಿ ಹತ್ತಿಸಿ ಬೀಳ್ಕೊಡಲಾಯಿತು.
ಅರಮನೆ ಆವರಣದಲ್ಲಿ ಸೇರಿದ್ದ ಪ್ರವಾಸಿಗರು, ಸಾರ್ವಜನಿಕರು ಆನೆಗಳು ಲಾರಿ ಏರುವುದನ್ನು ನೋಡಿ ಭಾವನಾತ್ಮಕವಾಗಿ ಸ್ಪಂದಿಸಿದರು.
ಆನೆಗಳ ಜೊತೆ ಅರಮನೆ ಆವರಣಕ್ಕೆ ಬಂದಿದ್ದ ಮಾವುತರು ಕಾವಾಡಿಗರ ಕುಟುಂಬದವರು ತಮ್ಮ ಸಾಮಾನು ಸರಂಜಾಮಿನ ಬ್ಯಾಗ್‌ಗಳನ್ನು ಹಿಡಿದು ಭಾರವಾದ ಮನಸ್ಸಿನಿಂದಲೇ ವಾಹನ ಏರಿ ತಮ್ಮ ಹಾಡಿಗಳತ್ತ ಪ್ರಯಾಣ ಬೆಳೆಸಿದರು. ಜಿಲ್ಲಾಧಿಕಾರಿ ಸೇರಿ ಹಿರಿಯ ಅಧಿಕಾರಿ ವರ್ಗದವರು ಈ ಸಮಯ ಇದ್ದರು.