ಕಾಣದಂತೆ ಮಾಯವಾದನು
ವಿಶ್ವ ಸ್ವರಚಿತ ಕವನ ಸಂಗ್ರಹ ಕೃತಿಯನ್ನು ಹಿಡಿದು ಬೇಸರದಿಂದ ಕುಳಿತಿದ್ದ.
“ಯಾಕೆ ವಿಶ್ವ, ಪುಸ್ತಕ ಮಾರಾಟ ಆಗ್ಲಿಲ್ವಾ?” ಎಂದೆ.
“ಕವನ ಪುಸ್ತಕಕ್ಕೆ ಡಿಮ್ಯಾಂಡ್ ಇಲ್ಲ ಬಿಡು, ನನ್ನ ಯೋಚನೆ ಅದಲ್ಲ, ಕಳೆದ ವಾರ ಗ್ರಂಥಾಲಯ ಉದ್ಘಾಟನೆ ಆಯ್ತಲ್ಲ, ಆ ಬಗ್ಗೆ ಚಿಂತೆ” ಎಂದ.
“ಓಹ್! ಸಚಿರ‍್ನೇ ಕರೆಸಿ ಗ್ರಂಥಾಲಯ ಉದ್ಘಾಟನೆ ಮಾಡಿಸ್ದೆ! ಚೆನ್ನಾಗಾಯ್ತಾ ಕಾರ್ಯಕ್ರಮ?”
“ತುಂಬಾ ಜನ ಸೇರಿದ್ರು. ಸಚಿವರು ಯಥಾಪ್ರಕಾರ ಒಂದು ಗಂಟೆ ತಡವಾಗಿ ಬಂದ್ರು. ಟೇಪ್ ಕಟ್ ಮಾಡಿ ದೀಪ ಹಚ್ಚಿದ್ರು. ಅಷ್ಟರಲ್ಲಿ ಯಾವ್ದೋ ಫೋನ್ ಬಂತು, ಆಚೆಗೆ ಓಡಿ ಕಾರಲ್ಲಿ ಕೂತ್ರು, ಮಾಯವಾದ್ರು.”
“ರ‍್ಲಿ ಬಿಡು, ಸಚಿವರಿಗೆ ಎಷ್ಟೋ ಕೆಲ್ಸಗಳು ಇರುತ್ತೆ” ಎಂದೆ.
“ಉದ್ಘಾಟನೆ ಮಾಡಿದವರು ಒಳಗೆ ಬಂದು ಗ್ರಂಥಾಲಯ ನೋಡೋದೇ ಬೇಡ್ವಾ?” ಎಂದ.
“ನೋಡು ವಿಶ್ವ, ಕಾರ್ಯಕ್ರಮ ಉದ್ಘಾಟನೆ ಮಾಡಿದ ನಾಯಕರು ಅದ್ರಲ್ಲಿ ಭಾಗವಹಿಸೊಲ್ಲ, ಆ ಪದ್ಧತಿ ನಮ್ಮಲ್ಲಿ ಇದ್ದೇ ಇದೆಯಲ್ಲ” ಎಂದೆ.
“ಹೌದಾ?” ವಿಶ್ವನಿಗೆ ಷಾಕಾಯಿತು.
“ಹೌದು! ಮೊನ್ನೆ ಸತ್ಯಂ ವದ, ಧರ್ಮಂ ಚರ’ ವಿಷಯದ ಬಗ್ಗೆ ಏಳು ದಿನಗಳ ಶಿಬಿರ ಇತ್ತು. ಒಳ್ಳೇ ಬುದ್ಧಿ, ಒಳ್ಳೇ ಮನಸ್ಸು ಪಡೆಯೋದು ಹೇಗೆ ಅಂತ ಆ ಶಿಬಿರದಲ್ಲಿ ಕಲಿಸಿದರು. ನಾಯಕರೊಬ್ರು ಉದ್ಘಾಟನೆ ಮಾಡಿ ದೀಪ ಹಚ್ಚಿದ್ರು, ಎರಡೇ ನಿಮಿಷಕ್ಕೆ ಹೊರಟ್ರು” “ಯಾಕೆ, ಅವರಿಗೆ ಶಿಬಿರದ ವಿಷಯಗಳು ಬೇಡವಾಗಿತ್ತಾ?” “ಸತ್ಯಂ ವದ, ಧರ್ಮಂ ಚರ ಅನ್ನೋದು ಪಾಲಿಸಿದರೆ ಲೀಡರ್‌ಗೆ ನಷ್ಟ ಆಗುತ್ತೆ” ಎಂದೆ. “ಹಾಗಿದ್ರೆ ನಾಯಕರಿಗೆ ಒಳ್ಳೇ ವಿಷ್ಯಗಳು ತಲುಪಿಸೋದು ಹ್ಯಾಗೆ?” ಎಂದು ವಿಶ್ವ ಪರಿತಪಿಸಿದ. “ಅವರು ವಿಷಯಾತೀತರು, ಎಲ್ಲಾ ತಿಳಿದ ಸಕಲ ಕಲಾ ನಿಪುಣರು. ಭಗವದ್ಗೀತೆಯ ಡಿಸ್ಕೋರ್ಸ್ ಉದ್ಘಾಟನೆಗೆ ರ‍್ತಾರೆ, ಭಾಷಣ ಮಾಡ್ತಾರೆ, ತಕ್ಷಣ ಕಳಚಿಕೊಳ್ತಾರೆ. ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ ಅನ್ನೋದು ಅವರಿಗೆ ಬೇಕಿಲ್ಲ. ರಥ ಓಡಿಸಿದ್ದು ಕೃಷ್ಣನೋ, ಅರ್ಜುನನೋ ಎಂಬುದು ಕೆಲವರಿಗೆ ಗೊಂದಲ ಇರಬಹುದು.” “ಈ ನಿರಾಸಕ್ತಿಗೆ ಏನು ಕಾರಣ?” ಎಂದ ವಿಶ್ವ. “ಆರ್ಥಿಕ ಲಾಭ ಇಲ್ಲದಿದ್ದಾಗ ಎಷ್ಟು ತಾಸು ಕುಳಿತು ಕೇಳಿದರೇನು?” ನಾ ಕಂಡಂತೆ ಯಾವ್ದೇ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು ಬಂದ್ರೂ ತಮ್ಮ ಭಾಷಣ ಆದ ಮೇಲೆ ಅಲ್ಲಿ ಉಳಿಯೋದಿಲ್ಲ. ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಸಾಮಾನ್ಯವಾಗಿ ಮಂತ್ರಿಗಳೇ ರ‍್ತಾರೆ. ಉದ್ಘಾಟನೆಯಂದು ಲಕ್ಷ ಜನ ಸೇರಿರುತ್ತಾರೆ. ನಾಯಕರ ಭಾಷಣದ ಪ್ರತಿಯನ್ನು ಎಲ್ಲರಿಗೂ ಹಂಚಲಾಗುತ್ತೆ. ನಾಯಕರು ಕೆಲವೊಮ್ಮೆ ಮೊದಲು ಮತ್ತು ಕಡೆಯ ಪುಟವನ್ನಷ್ಟೇ ಓದಿ ಹೆಲಿಕಾಪ್ಟರನ್ನು ಹತ್ತೇ ಬಿಡುತ್ತಾರೆ. ಉಳಿದಿದ್ದು ನೀವು ಓದಿಕೊಳ್ಳಿ ಎಂದರ್ಥ. ಮೂರು ದಿನದ ಸಮ್ಮೇಳನದಲ್ಲಿ ಇರುವ ವಿವಿಧ ಗೋಷ್ಠಿಗಳಲ್ಲಿ ಕಲಿಯುವಂಥದ್ದು, ತಿಳಿಯುವಂಥದ್ದು ತುಂಬಾ ಇರುತ್ತದೆ. ಉತ್ತಮ ಬೋಧನಾತ್ಮಕ ಅಂಶಗಳನ್ನು ನಾಯಕರಿಗೆ ತಿಳಿಸಲು ಆಗಲಿಲ್ಲವಲ್ಲ ಎಂಬ ದುಃಖ ಕಾರ್ಯಕರ್ತರಿಗೆ. “ಇಡೀ ಶಿಬಿರದಲ್ಲಿ ಅರ್ಧ ದಿನವಾದರೂ ನಾಯಕರು ಕುಳಿತು ಇತರರ ಭಾಷಣ ಕೇಳಿದ ಉದಾಹರಣೆ ಇದೆಯಾ ವಿಶ್ವ?” ಎಂದೆ. “ನಮ್ಮ ತಂದೆಯವರು ಹೇಳ್ತಾ ಇದ್ರು. ಕಡಿದಾಳ್ ಮಂಜಪ್ಪನೋರು, ಕೆಂಗಲ್ ಹನುಮಂತಯ್ಯನವರು ಗಮಕ ವ್ಯಾಖ್ಯಾನ ಇಷ್ಟ ಪಡ್ತಾ ಇದ್ರಂತೆ. ದೂರದ ಪ್ರವಾಸ ಮುಗಿಸಿ ಬೆಂಗಳೂರಿಗೆ ಎಂಟರ್ ಆಗೋಕೆ ಮುಂಚೆ ಹೊರ ವಲಯದಲ್ಲಿ ಒಂದು ರಾತ್ರಿ ಕ್ಯಾಂಪ್ ಮಾಡಿ ಜೈಮಿನಿ ಭಾರತ, ಕುಮಾರವ್ಯಾಸ ಭಾರತಗಳ ವಾಚನ, ವ್ಯಾಖ್ಯಾನ ಕೇಳಿಕೊಂಡು ಬರುತ್ತಿದ್ದಂತೆ. ಇತ್ತೀಚೆಗೆ ಇಂಥ ಉದಾಹರಣೆಗಳಿಲ್ಲ” ಎಂದೆ. “ಯಾಕೆ ಸಾಹಿತ್ಯ, ಸಂಗೀತ, ಉತ್ತಮ ವಿಷಯಗಳಲ್ಲಿ ನಾಯಕರಿಗೆ ಆಸಕ್ತಿ ಇರೊಲ್ಲವಾ?” ವಿಶ್ವ ಕೇಳಿದ. “ಆಸಕ್ತಿ ಇರುತ್ತೆ, ಆದ್ರೆ ಮನಸ್ಸು, ತಲೆ ಬಿಸಿ ಮಾಡುವ ಬುದ್ಧಿ ಮಾತುಗಳು, ಧರ್ಮದ ವಿಶ್ಲೇಷಣೆಗಳು ಯಾಕೆ ಬೇಕು? ತಿಳಿದುಕೊಂಡು ಏನಾಗಬೇಕು?” ಎಂದೆ. “ಇದು ನಿನ್ನ ಅಭಿಪ್ರಾಯವಾ?” ಎಂದು ವಿಶ್ವ ಕೇಳಿದ. “
ನನ್ನದೊಬ್ಬನದಲ್ಲ, ಸಾವಿರಾರು ಜನರ ಅಭಿಪ್ರಾಯ. `ಅಕ್ಕ ಸಮ್ಮೇಳನ’ಕ್ಕೆ ಮಂತ್ರಿಗಳು ಅಮೆರಿಕಕ್ಕೆ ಹೋಗುತ್ತಾರೆ. ಉದ್ಘಾಟನೆಯ ದಿನ ವೇದಿಕೆ ತುಂಬಾ ರಾಜಕಾರಣಿಗಳ ದಂಡೇ ಕೂತಿರುತ್ತೆ. ಉದ್ಘಾಟನಾ ಸಮಾರಂಭದಲ್ಲಿ ಎಲ್ಲರೂ ಸೊಗಸಾಗಿ ಭಾಷಣ ಮಾಡುತ್ತಾರೆ. ತಮ್ಮ ಮಾತು ಮುಗಿಸಿ ವೇದಿಕೆಯಿಂದ ಇಳಿದ ಮೇಲೆ ಬಹುಮಂದಿ ಮಾಯವಾಗಿರುತ್ತಾರೆ. ಮೂರು ದಿನಗಳ ಸಮ್ಮೇಳನದಲ್ಲಿ ಮುಂದೆ ಏನಾಯಿತು ಎಂಬುದು ನಾಯಕರಿಗೆ ಬೇಕಿರುವುದಿಲ್ಲ” ಎಂದೆ.
“ಇದಕ್ಕೇನಿದೆ ಪರಿಹಾರ?” ವಿಶ್ವನ ಪ್ರಶ್ನೆ.
“ಪರಿಹಾರ ಅಂತ ಹೇಳೋಕಾಗೊಲ್ಲ. ಯಾವುದು ಮುಖ್ಯ, ಯಾವುದು ಅಮುಖ್ಯ ಅನ್ನೋದು ಅವರೇ ಯೋಚ್ನೆ ಮಾಡ್ಬೇಕು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಜಯನಗರದ ಹಾಸ್ಯೋತ್ಸವಕ್ಕೆ ಬಂದು ಅರ್ಧ ದಿನ ಆರಾಮವಾಗಿ ಕುಳಿತು ಆನಂದ ಪಟ್ಟಿದ್ದು ಯೂ ಟ್ಯೂಬ್‌ನಲ್ಲಿದೆ. ಇಂಥ ಆನಂದ ಉಳಿದ ನಾಯಕರಿಗೂ ಸಿಗಲಿ ಎಂಬುದೇ ಸಮ್ಮೇಳನ ಸಂಘಟಕರ ಉದ್ದೇಶ” ಎಂದೆ.
“ಅಮೆರಿಕದ ಅಕ್ಕ ಸಮ್ಮೇಳನ ಸಂಘಟಕರು ಏನು ಹೇಳುತ್ತಾರೆ?” ವಿಶ್ವ ಕೇಳಿದ.
“೨೪ ಗಂಟೆ ವಿಮಾನ ಪ್ರಯಾಣ ಮಾಡಿ ಸಮ್ಮೇಳನಕ್ಕೆಂದು ಅಮೆರಿಕಕ್ಕೆ ಬಂದವರು ೨ ಗಂಟೆ ಕಾಲ ನೆಮ್ಮದಿಯಾಗಿ ಕೂರದಿದ್ದರೆ ಹೇಗೆ? ಮೂರು ದಿನಗಳ ಬಿಡುವು ಇಟ್ಟುಕೊಂಡು ಬರಬೇಕು. ಅಕ್ಕ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ವಸ್ತು ಪ್ರದರ್ಶನ, ಚಲನ ಚಿತ್ರಗಳು, ನೃತ್ಯ, ನಾಟಕಗಳು ೩-೪ ಸಮಾನಾಂತರ ವೇದಿಕೆಗಳಲ್ಲಿ ಸತತವಾಗಿ ನಡೀತಿರುತ್ತೆ. ಮದುವೆ ಮನೆಯ ಟೈಪ್ ಅದ್ದೂರಿ ಊಟ ಎಲ್ಲ ಪ್ರತಿನಿಧಿಗಳಿಗೆ ಮಾಡಿಸರ‍್ತಾರೆ. ಮೈಸೂರು ಅರಮನೆ, ಹೊಯ್ಸಳ ಶೈಲಿಯ ದೇಗುಲಗಳ ಸ್ತಬ್ಧ ಚಿತ್ರಗಳಿರುತ್ತೆ. ಇವನ್ನೆಲ್ಲ ನಮ್ಮ ನಾಯಕರು ನೋಡಿದ್ರೆ ನಮಗೆ ಸಂತೋಷ ಆಗುತ್ತೆ. ಪಾಪ, ಅವರಿಗೆ ಟೈಂ ಇರೊಲ್ಲವಲ್ಲ ಎಂದು ಪೇಚಾಡಿದರು”
“ಹಾಗಿದ್ರೆ ನಾಯಕರಿಗೆ ಟೈಂ ಯಾವಾಗ ಇರುತ್ತೆ?”
“ಟೈಂಗೂ ನಾಯಕರಿಗೂ ಆಗಿ ಬರೊಲ್ಲ. ಚುನಾವಣೆಗೆ ಮುಂಚೆ ಟೈಂ ಸಿಗುವುದಿಲ್ಲ. ಪ್ರಚಾರ ಇರುತ್ತೆ. ಚುನಾವಣೆ ಮುಗಿದ ಮೇಲೂ ಟೈಂ ಸಿಗುವುದಿಲ್ಲ. ಗೆಲ್ಲುತ್ತೇನೋ, ಇಲ್ಲವೋ ಎಂಬ ಆತಂಕ ಇರುತ್ತೆ. ಗೆದ್ದ ಮೇಲೆ ಯಾವ ಖಾತೆ ಸಿಗುತ್ತೆ ಎಂಬ ತೊಳಲಾಟ. ಎಲ್ಲಾ ಸಿಕ್ಕ ಮೇಲೆ ಸೈಲೆಂಟಾಗಿ ಬಾಯಿ ಆಡಿಸದೆ ತಿನ್ನಲು ಯಾವ ವಿಧಾನ ಅನುಸರಿಸಬೇಕು ಎಂಬ ಆಲೋಚನೆ ಕೆಲವು ನಾಯಕರಿಗೆ” ಎಂದೆ.
“ಕೆಲವರು ಮಾತ್ರಾನಾ?”
“ಹೌದು, ಒಳ್ಳೇ ಲೀರ‍್ಸೂ ನಮ್ಮಲ್ಲಿದ್ದಾರೆ” ಎಂದಾಗ ವಿಶ್ವ ಹಾಡನ್ನು ಹೇಳಿದ.
“ಕಾಣದಂತೆ ಮಾಯವಾದನು
ನಮ್ಮ ಸಚಿವ ಆಫೀಸು ಸೇರಿಕೊಂಡನು
ಕೊಡುವುದನ್ನು ಕೊಟ್ಟು ಬಿಡುವುದನ್ನು ಬಿಟ್ಟು
ದೇವರಂತೆ ಮಾಯವಾದನು”
ವಿಶ್ವನ ಈ ಪ್ರಶ್ನೆ ಎಲ್ಲ ಸಂಘಟಕರ ಧ್ವನಿ ಎನ್ನಿಸಿತು. ಶಿಬಿರ ಸಮ್ಮೇಳನಗಳನ್ನು ಉದ್ಘಾಟನೆ ಮಾಡಿದವರು ಅರ್ಧ ದಿನವಾದರೂ ಸಭೆಯಲ್ಲಿ ಭಾಗವಹಿಸಲು ಬಿಡುವಿಲ್ಲವಾದರೆ ಬರಲೇಬಾರದು.
ಕಂಡೀಷನ್ಸ್ ಅಪ್ಲೈ:
ಇದರಿಂದ ತನಗೇನು ಲಾಭ ಎಂದು ಯೋಚಿಸುವವರಿಗೆ ಇದು ಅನ್ವಯಿಸುವುದಿಲ್ಲ.