ಕಾನೂನು ಕೈಗೆತ್ತಿಕೊಂಡಾಗ ಲಾಠಿ ಚಾರ್ಜ್ ಅನಿವಾರ್ಯ
ಬೆಳಗಾವಿ: ನಾವು ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೆವು. ಆದರೆ, ಕಾನೂನು ಕೈಗೆತ್ತಿಕೊಂಡಾಗ ಲಾಟಿ ಚಾರ್ಜ್ ಅನಿವಾರ್ಯ ಆಗಿತ್ತು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತಂತೆ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನಾವು ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೆವು. ಆದರೆ, ಅವರು ಟ್ರ್ಯಾಕ್ಟರ್ ರ‍್ಯಾಲಿ ಇಟ್ಟುಕೊಂಡಿದ್ದರು. ಹಾಗಾಗಿ ನಾವು ಅದನ್ನು ಬೇಡ ಎಂದಿದ್ದೆವು. ಶಾಂತಿಯುತ ಪ್ರತಿಭಟನೆ ಮಾಡಿ ಎಂದಿದ್ದೆವು. ನಮ್ಮ ಸಚಿವರನ್ನೂ ಅಲ್ಲಿಗೆ ಕಳುಹಿಸಿದ್ದೆವು. ಪಂಚಮಸಾಲಿ ಹೋರಾಟದ ಸ್ಥಳಕ್ಕೆ ಕಳುಹಿಸಿದ್ದೆವು. ಆದರೆ ಅವರೆಲ್ಲ ಮುಖ್ಯಮಂತ್ರಿ ಬರಬೇಕೆಂದು ಪಟ್ಟು ಹಿಡಿದರು, ನಾವು ಸಚಿವರನ್ನು ಪ್ರತಿಭಟನೆ ಸ್ಥಳಕ್ಕೆ ಕಳಿಸಿದಾಗಲೂ ಅವರು ಒಪ್ಪಲಿಲ್ಲ. ಹೋರಾಟಗಾರರು ತಾವೇ ಮೊದಲು ಚಪ್ಪಲಿ, ಕಲ್ಲು ಎಸೆದರು. ಸ್ವಾಮೀಜಿ ಸೇರಿದಂತೆ ಹಲವರು ಕಾನೂನು ಕೈಗೆತ್ತಿಕೊಂಡರು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಾಗ ತಡೆಯುವುದು ಅನಿವಾರ್ಯ ಆಗಿತ್ತು. ಒಂದು ಹೋರಾಟಗಾರಿಗೆ ಹೀಗೆ ಮುತ್ತಿಗೆ ಹಾಕಲು ಅವಕಾಶ ನೀಡಿದರೆ, ನಾಳೆ ಎಲ್ಲರೂ ಮುತ್ತಿಗೆ ಹಾಕಲು ಬರುತ್ತಾರೆ. ಕೋರ್ಟ್ ತಡೆಯಾಜ್ಞೆ ಇದ್ದಾಗಲೂ ನಿರ್ಬಂಧದ ನಿಯಮಗಳನ್ನು ಸ್ವಾಮೀಜಿ ಸೇರಿದಂತೆ ಎಲ್ಲರೂ ಮುರಿದ್ದಾರೆ. ಕಲ್ಲು ಎಸೆಯೋಕೆ ಶುರು ಮಾಡಿದ್ರು. ಬ್ಯಾರಿಕೇಡ್ ಎಳೆದು ಹಾಕಿದ್ರು. ಇದೆಲ್ಲವಕ್ಕೂ ನಮ್ಮ ಬಳಿ ದಾಖಲೆಗಳಿವೆ. ಇದಕ್ಕೆ ಸಂಬಂಧಿಸಿ ನಮ್ಮ ಬಳಿಯೂ ವೀಡಿಯೋ ದಾಖಲೆಗಳು ಫೋಟೋಗಳು ಇವೆ. ಬ್ಯಾರಿಕೇಡ್ ಮುರಿದು ಹಾಕಿದಾಗ ಪೊಲೀಸರು ಸುಮ್ಮನಿರೋಕೆ ಸಾಧ್ಯವಾಗುತ್ತಾ?" ಸುಖಾ ಸುಮ್ಮನೆ ನಾವು ಲಾಠಿ ಚಾರ್ಜ್ ಮಾಡಿಲ್ಲ" ಎಂದರು.