ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಾನೂನು ವೃತ್ತಿ ಕೌಶಲವಿದ್ದವರಿಗೆ ಅವಕಾಶಗಳ ಕೊರತೆ ಇಲ್ಲ

07:49 PM Nov 29, 2024 IST | Samyukta Karnataka

ಧಾರವಾಡ: ವೃತ್ತಿ ಕೌಶಲ್ಯಗಳನ್ನು ವೃದ್ಧಿಸಿಕೊಂಡರೆ ಕಾನೂನು ಪದವೀಧರರಿಗೆ ಅವಕಾಶಗಳ ಕೊರತೆಯಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಧನಂಜಯ ವೈ. ಚಂದ್ರಚೂಡ್ ಹೇಳಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ೬ನೇ ಘಟಿಕೋತ್ಸವದಲ್ಲಿ ಶುಕ್ರವಾರ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪದವಿಯ ನಂತರ ವೃತ್ತಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಹುತೇಕ ಕ್ಷೇತ್ರಗಳು ಕಾನೂನು ವ್ಯಾಪ್ತಿಗೆ ಬರುವುದರಿಂದ ಹೊಸ ಸಂಗತಿಗಳನ್ನು ಕಲಿಯುತ್ತಲೇ ಇರಬೇಕು. ಓದು ಕೇವಲ ಕಾನೂನು ಪುಸ್ತಕಗಳಿಗೆ ಸೀಮಿತವಾಗುವುದು ಬೇಡ ಎಂದು ಪದವೀಧರರಿಗೆ ಕಿವಿಮಾತು ಹೇಳಿದರು.
ಕಾನೂನು ಪದವೀಧರರಿಗೆ ಅವಕಾಶಗಳ ಕೊರತೆಯಿಲ್ಲ, ವಿಪುಲ ಅವಕಾಶಗಳಿವೆ. ಕಾನೂನು ವೃತ್ತಿಯನ್ನು ಹಳೆಯ ವೃತ್ತಿ ಎನ್ನುತ್ತಾರೆ. ಹಳೆಯ ವೃತ್ತಿಯಲ್ಲಿ ಹೊಸ ಹೊಸ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ. ಅವಕಾಶಗಳನ್ನು ಯುವ ಪದವೀಧರರು ಸದ್ಬಳಕೆ ಮಾಡಿಕೊಳ್ಳುವುದು ಅವಶ್ಯಕ. ಯುವ ಕಾನೂನು ಪದವೀಧರರು ನಿಮ್ಮ ಸಾಮರ್ಥ್ಯ ಗುರುತಿಸಿಕೊಳ್ಳಬೇಕು. ಆಸಕ್ತಿಗನುಗುಣವಾಗಿ ಸೂಕ್ತ ಕ್ಷೇತ್ರ ಆಯ್ದುಕೊಂಡು ಸಾಧನೆ ಮಾಡಬೇಕು ಎಂದರು.
ದೊಡ್ಡ ಕಾನೂನು ಮಹಾವಿದ್ಯಾಲಯಗಳಲ್ಲಿ ಪದವಿ ಪಡೆದ ಕಾರಣಕ್ಕೆ ಆದ್ಯತೆ ನೀಡುವುದು ಸರಿಯಲ್ಲ. ಉನ್ನತ ಶ್ರೇಣಿಗೆ ಪರಿಗಣಿಸುವುದು ಸೂಕ್ತವಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸಿ ಅರ್ಹರಾದವರನ್ನು ಹುದ್ದೆಗಳಿಗೆ ಪರಿಗಣಿಸಬೇಕು. ಅರ್ಹತೆ ಇದ್ದವರು ಆಯ್ಕೆಯಾಗುವುದು ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಶೋಕ ಹಿಂಚಿಗೇರಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಡಾ. ಎಚ್.ಕೆ. ಪಾಟೀಲ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ. ಸಿ. ಬಸವರಾಜು, ಕುಲಸಚಿವರಾದ ಅನುರಾಧಾ ವಸ್ತ್ರದ, ಡಾ. ರತ್ನಾ ಭರಮಗೌಡರ ಇದ್ದರು.

ನನಗೂ ಧಾರವಾಡಕ್ಕೂ ಅಪೂರ್ವ ನಂಟು
ನನಗೂ ಧಾರವಾಡಕ್ಕೂ ಅಪೂರ್ವ ನಂಟಿದೆ. ನಾನು ಹಿಂದೂಸ್ಥಾನಿ ಸಂಗೀತವನ್ನು ಇಷ್ಟಪಡುವವನು. ನನ್ನ ತಾಯಿ ಹಿಂದೂಸ್ಥಾನಿ ಗಾಯಕರು. ಖ್ಯಾತ ಗಾಯಕಿ ಕಿಶೋರಿತಾಯಿ ಅಮೋಣಕರ ಅವರ ಶಿಷ್ಯೆ. ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮಗಳ ಕಾರಣದಿಂದಾಗಿ ನಾವು ಕುಟುಂಬದ ಸದಸ್ಯರೆಲ್ಲ ಪುಣೆಯಿಂದ ಕೊಲ್ಹಾಪುರ ಮಾರ್ಗವಾಗಿ ಧಾರವಾಡಕ್ಕೆ ಬರುತ್ತಿದ್ದೆವು. ಅಂದಿನ ಧಾರವಾಡದ ಹಸಿರು ಸಮೃದ್ಧಿ ಈಗಲೂ ನನ್ನ ಮನಸಿನಲ್ಲಿ ಹಸಿರಾಗಿದೆ. ಧಾರವಾಡದಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕರನ್ನು ಭೇಟಿ ಮಾಡುವುದೇ ಒಂದು ಖುಷಿ ನೀಡುವ ಸಂಗತಿ. ಹಿಂದೂಸ್ಥಾನಿ ಸಂಗೀತ ಕೇಳುತ್ತಲೇ ನಾನು ಬೆಳೆದಿದ್ದೇನೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್ ಹೇಳಿಕೊಂಡರು.

Next Article