For the best experience, open
https://m.samyuktakarnataka.in
on your mobile browser.

ಕಾಪು ಶಾಸಕರ ಮೇಲೆ ವೈಯಕ್ತಿಕ ದ್ವೇಷ ಇಲ್ಲ

05:08 PM Aug 07, 2024 IST | Samyukta Karnataka
ಕಾಪು ಶಾಸಕರ ಮೇಲೆ ವೈಯಕ್ತಿಕ ದ್ವೇಷ ಇಲ್ಲ

ಕಾಪು: ಕಾಪು ಶಾಸಕರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಅವರಿಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ತಪ್ಪಿದಾಗ, ನಾನು ಅವರಿಗೆ ʼಮುಂದೆ ಒಳ್ಳೆದಿನ ಬರುತ್ತದೆʼ ಎಂದು ಸಾಂತ್ವನ ಹೇಳಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಅವರು ಬುಧವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಪು ಕ್ಷೇತ್ರ ನಿರ್ಲಕ್ಷ್ಯ ಆದ ಬಗ್ಗೆ ನಾನು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದೇನೆ. ಇತ್ತೀಚೆಗೆ ಕಾಪುವಿನಲ್ಲಿ ಶಾಸಕರು ಪತ್ರಿಕಾಗೋಷ್ಠಿ ಮಾಡಿ ನಾನು ಗಂಜಿ ಕೇಂದ್ರದಲ್ಲಿಲ್ಲ. ನನಗೆ ಹಲವಾರು ಉದ್ದಿಮೆ ಇದೆ. ಸೊರಕೆಯವರು ಆಸ್ತಿಯನ್ನು ಎಲ್ಲಿಂದ ಸಂಪಾದಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಎಂದರು.
ನಮ್ಮ ಕುಟುಂಬ ಭೂ ಮಾಲೀಕರ ಕುಟುಂಬದಿಂದ ಬಂದವರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಉಳುವವನೇ ಹೊಲದೊಡೆಯ ಕಾನೂನು ತಂದಾಗ, ನಾವೇ ಜಾಗವನ್ನು ಹಂಚಿದ್ದೇವೆ. ನಾನೂ ಭೂನ್ಯಾಯ ಮಂಡಳಿಯಲ್ಲಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ.
ನಾನು ಶಾಸಕನಾಗಿದ್ದಾಗ ಹತ್ತು ಹಲವು ಉತ್ತಮ ಕೆಲಸ ಮಾಡಿದ್ದೇನೆ. ನಾನು ಕೆಲಸ ಮಾಡುವಾಗ ಸ್ವಜನ ಪಕ್ಷಪಾತ ಮಾಡಿಲ್ಲ. ಲೋಕಸಭಾ ಸದಸ್ಯನಾಗಿದ್ದಾಗಲೂ ಉತ್ತಮ ಕೆಲಸ ಮಾಡಿದ್ದೇನೆ. ಕಟಪಾಡಿ, ಶಿರ್ವ, ಪಡುಬಿದ್ರಿ, ಮುದರಂಗಡಿಯಲ್ಲಿ ಮೀನು ಮಾರುಕಟ್ಟೆ ಮಾಡಿಲಾಗಿದೆ. ಕಾಪುವಿನಲ್ಲಿ ಸುನಾಮಿ ಕಟ್ಟಡ, ಆಸ್ಪತ್ರೆ ಕಟ್ಟಡ, ಐಟಿಐ ಶಾಲೆ, ಮೊರಾರ್ಜಿ ಶಾಲೆ, 52 ಕೋಟಿಯ ಸಂಶೋಧನಾ ಕೇಂದ್ರ ನಿರ್ಮಾಣ ಹಂತದಲ್ಲಿದೆ ಎಂದೂ ಸೊರಕೆ ಹೇಳಿದರು.
ಕಾಪು ಕಟ್ಟಡ ಅಭಿವೃದ್ದಿ ಮಾಡುವಾಗ ಸೊರಕೆ ಅಡ್ಡಿ ಪಡಿಸುತ್ತಾರೆ ಎಂಬ ಆರೋಪ ಹೊರಿಸಿದ್ದಾರೆ. ದಾಖಲೆ ಇದ್ದರೆ ನೀಡಲಿ. ನಾನು ಎಲ್ಲಿ ಯಾವಾಗ ಅಡ್ಡಿ ಮಾಡಿದ್ದೇನೆಂದು ಹೇಳಲಿ ಎಂದರು.
ನಾನು ಈ ತನಕ ಯಾವುದೇ ಅವ್ಯವಹಾರ ಮಾಡಿಲ್ಲ. ಇದ್ದರೆ ಸಾಬೀತು ಪಡಿಸಲಿ.
ಕಾಪು ಪುರಸಭಾ ವ್ಯಾಪ್ತಿಯ ಸಮುದ್ರ ಕಿನಾರೆಯಲ್ಲಿ 38 ಕೋಣೆಗಳ ರಿಸಾರ್ಟ್ ಆಗಿದೆ. ಸಿಆರ್ ಝಡ್‌, ಪೈರ್ ಬಿಗೇಡ್ ಪರವಾನಿಗೆ ಇದೆಯಾ. ಸೆಟ್ ಬ್ಯಾಕ್ ಬಿಟ್ಟಿದ್ದಾರೆಯೇ. ಇದೆಲ್ಲವೂ ಇಲ್ಲದೆ ವಿದ್ಯುತ್ ಇಲಾಖೆ ಪರವಾನಗಿ ಹೇಗೆ ನೀಡಿದೆ. ಇದರಲ್ಲಿ ಶಾಸಕರು ಪಾಲುದಾರಿಕೆ ಹೊಂದಿಲ್ಲವೇ. ಇಂತಹ ಹತ್ತು ಹಲವು ಕಾರಣಗಳು ನನ್ನಲ್ಲಿದೆ ಎಂದರು.
ರಾಜಕೀಯದ ನನ್ನ ಸುದೀರ್ಘ 40 ವರ್ಷ ಸೇವೆ ಮಾಢಿದ್ದೇನೆ. ನನಗೆ 80,000 ಪೆನ್ಷನ್ ಬರುತ್ತದೆ. ಉಡುಪಿಯ ಅಪಾರ್ಟ್ಮೆಂಟ್ ಒಂದನ್ನು ಹೊರತುಪಡಿಸಿ ನನ್ನಲ್ಲಿ ಏನಿದೆ. 40 ವರ್ಷದಲ್ಲಿ ಯಾವುದೇ 420 ಕೇಸ್ ಇಲ್ಲ. ನನ್ನಲ್ಲಿ ಇನ್ನೂ ಆಸ್ತಿ ಇದ್ದರೆ, ಶಾಸಕರು ಹೇಳಲಿ ಎಂದರು.
ಸರಕಾರಕ್ಕೆ ಒತ್ತಡ ಹೇರಿ ಅನುದಾನ ಬಿಡುಗಡೆ ಆಗದಂತೆ ಒತ್ತಡ ತರುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ ಮುಕ್ತ ಚರ್ಚೆಗೆ ಬರಲಿ ನಾನು ಮಾತನಾಡುತ್ತೇನೆ. ಸೋಲು ಗೆಲುವು ಸಹಜ. ಒಬ್ಬ ಸೋಲದೆ ಮತ್ತೊಬ್ಬ ಗೆಲ್ಲುವುದಿಲ್ಲ. ಆ ಬಗ್ಗೆ ನಾನು ಚಿಂತಿಸುವುದಿಲ್ಲ. ನನ್ನ ಜೀವನ ಇಡೀ ಜನಸೇವೆ ಮಾಡಿದ್ದೇನೆ. ಮುಂದೆಯೂ ಜನಸೇವೆಯೇ ನನ್ನಿಂದ ಆದಷ್ಟು ಮಾಡುತ್ತೇನೆ ಎಂದೂ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ಧೀನ್‌ ಶೇಖ್‌, ಪ್ರಚಾರ ಸಮಿತಿಯ ಜಿತೇಂದ್ರ ಫುರ್ಟಾಡೋ ಉಪಸ್ಥಿತರಿದ್ದರು.