ಕಾಫಿನಾಡಿನಲ್ಲಿ ಮಳೆಯ ಆರ್ಭಟ
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಲೆನಾಡು ಭಾಗದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆ ಭಾರೀ ಮಳೆಯಾಗಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮನೆಯೊಂದರ ಮೇಲೆ ಮರಬಿದ್ದಿದೆ. ಭೂ ಕುಸಿತ ಉಂಟಾಗಿದ್ದು, ರಸ್ತೆಯೇ ಕೊಚ್ಚಿಹೋಗಿದೆ. ತುಂಗಾನದಿ ಉಕ್ಕಿಹರಿದಿದ್ದರಿಂದ ಶೃಂಗೇರಿಯ ಕಪ್ಪೆಶಂಕರ ದೇವಾಲಯ ಆವರಣ ಮತ್ತು ಗಾಂಧಿಮೈದಾನ ಜಲಾವೃತಗೊಂಡಿದೆ.
ಭಾರೀ ಮಳೆಗೆ ಭದ್ರಾ ನದಿ ತುಂಬಿ ಹರಿದು ಕಳಸ-ಹೊರನಾಡು ಸಂಪರ್ಕ ಹೆಬ್ಬಾಳೆ ಸೇತುವೆ ಸೋಮವಾರ ಕಡಿತಗೊಂಡಿದ್ದರೆ, ಈಗ ಪರಿಸ್ಥಿತಿ ಸುಧಾರಿಸಿದೆ. ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ನೆರೆ ಉಂಟಾಗಿ ವಾಹನಗಳ ಪಾರ್ಕಿಂಗ್ ಜಾಗ ಜಲಾವೃತಗೊಂಡಿವೆ. ಇನ್ನೂ ಜಯಪುರ-ಕೊಪ್ಪ ಸಂಪರ್ಕ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು ಮೂಡಿಗೆರೆ-ಬೇಲೂರು ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. ಕೊಟ್ಟಿಗೆಹಾರ ಬಸ್‌ನಿಲ್ದಾಣದ ಆವರಣ ಗೋಡೆ ಕುಸಿದಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಆರು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.ಮಲೆನಾಡು ಭಾಗದಲ್ಲಿ ನಿರಂತವಾಗಿ ಮಳೆಯಾಗುತ್ತಿರುವುದರಿಂದ ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿವೆ. ಕುದುರೆಮುಖ, ಕಳಸ ಭಾಗದಲ್ಲಿ ಭಾರೀ ಮಳೆಯಾಗಿದ್ದರಿಂದ ಭದ್ರಾ ನದಿ ತುಂಬಿ ಹರಿಯುತ್ತಿದೆ. ಇದರಿಂದ ಕಳಸ-ಹೊರನಾಡು ಸಂಪರ್ಕ ಸೇತುವೆ ನದಿ ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಸಂಪರ್ಕ ಕಡಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಳಸ ಪೊಲೀಸರು ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಿಸಿ ಬ್ಯಾರಿಕೇಡ್ ಹಾಕಿ ಕಾವಲಿದ್ದಾರೆ.
ಗಾಂಧಿ ಮೈದಾನದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳನ್ನು ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಟ್ರಾಕ್ಟರ್ ಮೂಲಕ ಎಳೆದು ಹೊರಗೆ ತಂದಿದ್ದಾರೆ.ಇಲ್ಲಿನ ಅಂಗಡಿಗಳಿಗೂ ನೀರು ನುಗ್ಗಿದೆ. ಶೃಂಗೇರಿ ಯ ಪರ್ಯಾಯ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಬ್ಯಾರಿಕೇಡ್ ಹಾಕಲಾಗಿದೆ.