For the best experience, open
https://m.samyuktakarnataka.in
on your mobile browser.

ಕಾಮಗಾರಿಗೆ ಮಂಜೂರಾಗದ ಬಿಲ್: ಗುತ್ತಿಗೆದಾರ ಆತ್ಮಹತ್ಯೆ

07:37 PM May 31, 2024 IST | Samyukta Karnataka
ಕಾಮಗಾರಿಗೆ ಮಂಜೂರಾಗದ ಬಿಲ್  ಗುತ್ತಿಗೆದಾರ ಆತ್ಮಹತ್ಯೆ

ದಾವಣಗೆರೆ: ಕೌಟುಂಬಿಕ ಆಸ್ತಿ ವಿವಾದ ಹಾಗೂ ಕೃಷಿ ಇಲಾಖೆಯಲ್ಲಿ ಮಾಡಿದ ಕಾಮಗಾರಿಗೆ ಬಿಲ್ ಮಂಜೂರಾಗದ ಕಾರಣ ದಾವಣಗೆರೆ ಮೂಲದ ಗುತ್ತಿಗೆದಾರರೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ಸಂತೆಬೆನ್ನೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪಿ.ಎಸ್.ಗೌಡರ್(೪೮) ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ. ಇವರು ಕಳೆದ ವರ್ಷ ಫೆಬ್ರವರಿಯಲ್ಲಿ ಸಂತೆಬೆನ್ನೂರಿನ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೆಲ ಕಾಮಗಾರಿ ಪೂರ್ಣಗೊಳಿಸಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಇನ್ನೂ ಬಿಲ್ ಕ್ಲಿಯರ್ ಮಾಡಿರಲಿಲ್ಲ. ಅಲ್ಲದೆ, ಸಹೋದರರು ಇವರಿಗೆ ಪೂರ್ವಜರ ಆಸ್ತಿಯನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ ಎನ್ನಲಾಗಿದೆ. ಈ ಎಲ್ಲಾ ಆರ್ಥಿಕ ಹಾಗೂ ಮಾನಸಿಕ ಒತ್ತಡಗಳು ಇಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿವೆ. ನನ್ನ ಸಾವಿಗೆ ಅಣ್ಣ ಜಿ.ಎಸ್.ನಾಗರಾಜ್, ಕಿರಿಯ ಸಹೋದರ ಗೌಡರ್ ಶ್ರೀನಿವಾಸ್ ಮತ್ತು ಕರ್ನಾಟಕ ರೂರಲ್ ಇನಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್(ಕೆಆರ್‌ಐಡಿಎಲ್) ಕಾರಣ ಎಂಬುದಾಗಿ ಪಿ.ಎಸ್.ಗೌಡರ್ ಡೆತ್‌ನೋಟ್‌ನಲ್ಲಿ ಬರೆದಿಟ್ಟು ಮೇ 26ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ವಸಂತ ಕುಮಾರಿ ನೀಡಿದ ದೂರಿನ ಮೇರೆಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುತ್ತಿಗೆದಾರ ಪಿ.ಎಸ್.ಗೌಡರ್ ಡೆತ್‌ನೋಟ್‌ನಲ್ಲಿ ಪ್ರಸ್ತಾಪಿಸಿರುವ ವಿಷಯಗಳು ರಾಜ್ಯ ಸರ್ಕಾರಕ್ಕೆ ಇನ್ನಷ್ಟು ಮುಜುಗರ ತಂದೊಡ್ಡಿವೆ.