ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಾರಂತರ ಚೋಮನ ದುಡಿ ಈ ಹೊತ್ತಿನ ಓದು

05:04 PM Nov 10, 2023 IST | Samyukta Karnataka

ಅಕ್ಟೋಬರ್ ಶಿವರಾಮ ಕಾರಂತರು ಜನಿಸಿದ ತಿಂಗಳು. ಕರ್ನಾಟಕದಲ್ಲಿ ಕಾರಂತರ ಜನ್ಮದಿನದ ಸಂಭ್ರಮ, ಸಡಗರ ಕೇಳಿಸುವುದೂ ಇಲ್ಲ, ಕಾಣಿಸುವುದೂ ಇಲ್ಲ. ಶಿವರಾಮ ಕಾರಂತರು ಆಧುನಿಕ ಕನ್ನಡ ಸಾಹಿತ್ಯವನ್ನು ನಿರ್ಮಿಸಿದ ಕೆಲವೇ ಪ್ರಮುಖ ಲೇಖಕರಲ್ಲಿ ಒಬ್ಬರು. ಕಾದಂಬರಿ ಅವರ ಬರಹದ ಎಲ್ಲ ಶಕ್ತಿ-ಸಾಮರ್ಥ್ಯವನ್ನು ಬಳಸಿಕೊಂಡು ಸಮೃದ್ಧ ಮತ್ತು ಲೋಕಪ್ರಿಯ ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದಿತು.
ಕಾರಂತರ ಬದುಕು ಚಲನಶೀಲವಾಗಿತ್ತು. ಅವರು ತಮ್ಮ ಇಡೀ ಬದುಕನ್ನು ಬೆಟ್ಟದ ಮೇಲೆ, ಬೆಟ್ಟದ ಕೆಳಗೆ ಕಾಲ್ನಡಿಗೆಯಲ್ಲಿ ತಿರುಗುತ್ತ ಕಳೆದವರು. ಕಂಡ ಬದುಕನ್ನು ಅನುಭವಿಸಿ, ಅದಕ್ಕೆ ಕಲೆಯ ಕಾವು ಕೊಟ್ಟು ಕನ್ನಡ ಓದುಗರ ಅರಿವನ್ನು ವಿಸ್ತರಿಸಿದವರು, ಕನ್ನಡ ಓದುಗರನ್ನು ಸೃಷ್ಟಿಸಿ ಸೃಜನಶೀಲ ಬರಹದ ಸುಖವನ್ನು ನೀಡಿದವರು. ಇಂಥ ಗಮನಾರ್ಹ ಲೇಖಕರು ಯಾವತ್ತೂ ವಿಸ್ಮೃತಿಗೆ ಒಳಗಾಗಬಾರದು.
ಕಾರಂತರು ನನ್ನ ಬಹಳ ಇಷ್ಟದ ಕನ್ನಡ ಲೇಖಕರಲ್ಲಿ ಒಬ್ಬರು. ನನ್ನ ಕನ್ನಡ ಸಾಹಿತ್ಯದ ಓದು ಶುರುವಾದದ್ದು ಎಸ್.ಎಲ್. ಭೈರಪ್ಪನವರ ಧರ್ಮದರ್ಶಿ' ಕಾದಂಬರಿಯಿಂದ. ಆಮೇಲೆ ಕಾರಂತರ ಕಾದಂಬರಿಗಳ ಜೊತೆ ಎರಡು ವರ್ಷ ಕಳೆದೆ. ನಂತರ ಕುವೆಂಪುರವರ ಎರಡು ಬೃಹತ್ ಕಾದಂಬರಿಗಳನ್ನು ಪಟ್ಟುಹಿಡಿದು ಓದಿದೆ. ಆಮೇಲೆ ಕನ್ನಡದ ಎಲ್ಲಾ ಪ್ರಾತಿನಿಧಿಕ ಕಾದಂಬರಿಗಳನ್ನು ಓದಲು ಸಾಧ್ಯವಾಯಿತು. ಮರಳಿ ಮಣ್ಣಿಗೆ' ಕಾರಂತರ ಮೇರುಕೃತಿ. ಯಾವುದೇ ಭಾಷೆ, ನಾಡು ಹೆಮ್ಮೆಪಡುವಂಥ ಕೃತಿ. ಅಳಿದ ಮೇಲೆ' ನನ್ನ ಅರಿವಿನ ವಿಸ್ತಾರವನ್ನು ಎತ್ತರಕ್ಕೆ ತೆಗೆದುಕೊಂಡು ಹೋದ ಕೃತಿ. ತಾತ್ವಿಕವಾಗಿ ಈ ಕಾದಂಬರಿ ಕಾರಂತರ ಬಹುದೊಡ್ಡ ಸಾಧನೆ.ಚೋಮನ ದುಡಿ' ಕಾರಂತರ ಹೆಚ್ಚು ಚರ್ಚಿತ ಕೃತಿ. ಈ ಕೃತಿಯ ಕುರಿತು ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾದಂಬರಿಯ ಕುರಿತು ಕೆಲವು ವಿಚಾರಗಳನ್ನು ಚರ್ಚಿಸಬಹುದು.
ಚೋಮ ಸಂಕಪ್ಪಯ್ಯರವರ ಮನೆಯಲ್ಲಿ ಜೀತದಾಳಾಗಿ ಕೆಲಸ ಮಾಡುತ್ತಿರುತ್ತಾನೆ. ಅವನಿಗೆ ಎರಡು ಆಕರ್ಷಣೆಗಳಿರುತ್ತವೆ ಮತ್ತು ಒಂದು ಆಸೆ, ಮಹತ್ವಾಕಾಂಕ್ಷೆ ಇರುತ್ತದೆ. ದುಡಿ ಮತ್ತು ಸಿಂದಿ ಸೇವನೆ ಅವನಿಗಿರುವ ಎರಡು ಬಹುದೊಡ್ಡ ಆಕರ್ಷಣೆಗಳು. ಸಿಂದಿ ಸೇವನೆ ಆಕರ್ಷಣೆ ಮಾತ್ರವಲ್ಲ, ಅವನ ದೌರ್ಬಲ್ಯವೂ ಆಗಿರುತ್ತದೆ. ಸ್ವಂತ ಭೂಮಿ ಹೊಂದಿ, ಹೊಲ ಮಾಡಿ, ಬಿತ್ತಿ, ಬೆಳೆದು ಬೇಸಾಯಗಾರನಾಗಬೇಕೆಂಬುದು ಅವನ ಮಹತ್ವಾಕಾಂಕ್ಷೆ ಆಗಿರುತ್ತದೆ. ಅವನಿಗೆ ಮೂರು ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ಬೇಸಾಯ ಮಾಡಲು ಎರಡು ಎತ್ತುಗಳನ್ನು ಸಾಕಿರುತ್ತಾನೆ. ಅವನಿಗೆ ಭೂಮಿ ಒಂದೇ ಕೊರತೆಯಾಗಿ ಕಾಡುತ್ತದೆ. ತನ್ನ ಒಡೆಯನಿಂದ ಒಂದು ತುಣುಕು ಭೂಮಿ ಸಿಗಬಹುದೆಂಬ ಬಲವಾದ ಆಸೆ ಇಟ್ಟುಕೊಂಡಿರುತ್ತಾನೆ. ಅವಕಾಶ ಸಿಕ್ಕಾಗೆಲ್ಲ ಒಡೆಯನಿಗೆ ಭೂಮಿ ನೀಡುವಂತೆ ಪ್ರಾರ್ಥಿಸುತ್ತಾನೆ.
ಒಡೆಯ ಸಂಕಪಯ್ಯನಿಗೆ, ಚೋಮನಿಗೆ ಒಂದು ಚೂರು ಭೂಮಿ ಕೊಡುವ ಮನಸ್ಸಿದ್ದರೂ ತನ್ನ ವಯಸ್ಸಾದ ತಾಯಿಯ ಮನಸ್ಸು ನೋಯಿಸಬಾರದೆಂದು ಭೂಮಿ ಕೊಡಲು ಒಪ್ಪುವುದಿಲ್ಲ. ಭೂಮಿಯ ಒಡೆತನದ ಪ್ರಶ್ನೆಯೇ ಈ ಕಾದಂಬರಿಯ ಕೇಂದ್ರ ಸಮಸ್ಯೆ. ಕೆಳಜಾತಿಯವರು ಭೂಮಿಯ ಒಡೆಯರಾಗಬಾರದು ಎಂಬುದು ಸಂಕಪಯ್ಯನ ತಾಯಿಯ ನಿಲುವು. ಚೋಮನಿಗೆ ಭೂಮಿ ಕೊಡುವ ಮನಸ್ಸಿದ್ದರೂ ವಯಸ್ಸಾದ ತಾಯಿಯ ನಂಬಿಕೆಗೆ ಪೆಟ್ಟು ಹಾಕಬಾರದು ಎಂಬುದು ಸಂಕಪ್ಪಯ್ಯನ ವಾದ. ಹೇಗಾದರೂ ಮಾಡಿ ಒಡೆಯನಿಂದ ಭೂಮಿಯನ್ನು ಪಡೆದುಕೊಂಡು ಬೇಸಾಯಗಾರನಾಗಿ ಸ್ವಂತ ಭೂಮಿಯಲ್ಲಿ ಬೇಸಾಯ ಮಾಡಿ ಸ್ವತಂತ್ರವಾದ ಜೀವನ ನಡೆಸಬೇಕೆಂಬುದು ಚೋಮನ ಆಸೆ, ಕನಸು.
ಏತನ್ಮಧ್ಯೆ ಚೋಮ ತಾನು ಹಿಂದೆ ತೋಟದ ಒಡೆಯನ ಹತ್ತಿರ ಮಾಡಿದ ಸಾಲವನ್ನು ತೀರಿಸುವಂತೆ ಮನ್ವೇಲ ಒತ್ತಾಯಿಸುತ್ತಾನೆ. ಅದಕ್ಕಾಗಿ ಅವನ ಇಬ್ಬರು ಮಕ್ಕಳನ್ನು ದುಡಿಯಲು ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಇಬ್ಬರೂ ಕುಡಿತದ ದಾಸರಾಗುತ್ತಾರೆ. ಒಬ್ಬನಂತೂ ಒಂದು ಹುಡುಗಿಯನ್ನು ಪ್ರೀತಿಸಿ ಅವಳೊಂದಿಗೆ ಹೊರಟು ಹೋಗುತ್ತಾನೆ.
ಇತ್ತ ಚೋಮ ಸಾಕಿದ ಎರಡು ಎತ್ತುಗಳನ್ನು ತನಗೆ ಮಾರುವಂತೆ ಸಂಕಪಯ್ಯ ಒತ್ತಾಯಿಸುತ್ತಾನೆ. ಇದರಿಂದ ಚೋಮ ತಾಳ್ಮೆಗೆಡುತ್ತಾನೆ. ಕಂಠಪೂರ್ತಿ ಕುಡಿದು ದುಡಿ ಬಾರಿಸುತ್ತ ತನ್ನ ಜೊತೆ ಹೆಜ್ಜೆ ಹಾಕುವಂತೆ ಎತ್ತುಗಳನ್ನು ಪೀಡಿಸಿ, ಹತಾಶೆ, ನಿರಾಸೆ, ವಿಷಾದ ಮತ್ತು ದುಃಖದಿಂದ ತನ್ನ ಎರಡೂ ಎತ್ತುಗಳ ಕಾಲು ಮುರಿದು ಒಂದು ರೀತಿಯಲ್ಲಿ ತನ್ನ ಒಡೆಯನ ವಿರುದ್ಧ ಪ್ರತಿಭಟಿಸುತ್ತಾನೆ.
ತಾನು ಮಾಡಿದ ಸಾಲವನ್ನು ತೀರಿಸಲು ತನ್ನ ಮಕ್ಕಳನ್ನು ಕಳಿಸುವಂತೆ ಮತ್ತೆ ಮನ್ವೇಲ ಕಾಣಿಸಿಕೊಳ್ಳುತ್ತಾನೆ. ಆಗ ಚೋಮ ತನ್ನ ಪ್ರೀತಿಯ ಮಗಳು ಬೆಳ್ಳಿಯನ್ನು ಕಳಿಸಬೇಕಾದ ಪ್ರಸಂಗ ಬರುತ್ತದೆ. ಬೆಳ್ಳಿ ದೂರದ ಊರಿನ ತೋಟದಲ್ಲಿ ಕೆಲಸ ಮಾಡುತ್ತ ಮನ್ವೇಲನ ಕಾಮದ ಜಾಲಕ್ಕೆ ಸಿಕ್ಕಿ ಬೀಳುತ್ತಾಳೆ. ಈ ವಿಷಯ ಅವನ ದೊರೆಗೆ ತಿಳಿದಾಗ ಬೆಳ್ಳಿಯನ್ನು ಅವರ ಬಳಿ ಕಳಿಸಿಕೊಡುತ್ತಾನೆ. ತೋಟದಲ್ಲಿ ಬೆಳ್ಳಿ ಪಡೆದದ್ದು ಕಡಿಮೆ, ಕಳೆದುಕೊಂಡಿದ್ದೇ ಹೆಚ್ಚು. ಕೊನೆಗೆ ಕಡೆಯ ಮಗ ನೀರಿನಲ್ಲಿ ಬಿದ್ದು ಸಾಯುತ್ತಾನೆ. ಬೆಳ್ಳಿ ತನ್ನ ಚಿನ್ನದಂತಹ ಬದುಕನ್ನು ಕಳೆದುಕೊಂಡದ್ದು ಚೋಮನಿಗೆ ತಿಳಿಯುತ್ತದೆ. ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡ ಚೋಮ ಹತಾಶೆಯಿಂದ ತನ್ನ ದುಃಖ, ನೋವು ಅಪಮಾನವನ್ನು, ಮೈಮರೆತು ದುಡಿ ಬಾರಿಸುವುದರ ಮೂಲಕ ವ್ಯಕ್ತಪಡಿಸುತ್ತಾನೆ. ಇದು ಕಾದಂಬರಿಯ ಕಥಾವಸ್ತು.
ಸಂಕಪಯ್ಯ ಚೋಮನಿಗೆ ಭೂಮಿ ಕೊಡದಿರಲು ಜಾತಿಯೇ ಕಾರಣ. ಮೇಲು ಜಾತಿಗೆ ಸೇರಿದ ಸಂಕಪಯ್ಯ ಕೆಳಜಾತಿಗೆ ಸೇರಿದ ಚೋಮನಿಗೆ ಭೂಮಿ ಕೊಡಲು ನಿರಾಕರಿಸಿದ ಎಂಬುದು ಕೆಲವರ ಆರೋಪ. ಇದು ಅತ್ಯಂತ ಸರಳೀಕೃತವಾದ ಆರೋಪ ಮತ್ತು ಇದು ಅಷ್ಟೇ ರಾಜಕೀಯಪ್ರೇರಿತ. ಕೇವಲ ಜಾತಿಯ ಕಾರಣಕ್ಕಾಗಿ ಸಂಕಪಯ್ಯ ಚೋಮನಿಗೆ ಭೂಮಿ ನೀಡಲಿಲ್ಲ ಎಂಬ ತರ್ಕ ಅವೈಜ್ಞಾನಿಕವಾದುದು. ಮನುಷ್ಯ ಬದುಕಿನ ಸಂಕೀರ್ಣತೆ, ಅಧಿಕಾರ, ಕ್ರೌರ್ಯದ ಬಗೆಗೆ ಅರಿವು ಇಲ್ಲದವರು, ಬದುಕಿನ ಮತ್ತು ಸಾಹಿತ್ಯದ ಸೂಕ್ಷ್ಮತೆ ಗೊತ್ತಿರದವರು ಮಾಡಬಹುದಾದ ಟೀಕೆ ಇದಾಗಿದೆ.
ಇದಕ್ಕೆ ಎರಡು ಕಾರಣಗಳನ್ನು ನೀಡಬಹುದು. ಒಂದು, ಭೂ ಒಡೆಯ ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿರಲಿ ಅವನು ಭೂರಹಿತ ವ್ಯಕ್ತಿಗೆ ತನ್ನ ಒಡೆತನದ ಚೂರು ಭೂಮಿಯನ್ನು ಕೊಡಲು ಒಪ್ಪುವುದಿಲ್ಲ. ಅಧಿಕಾರದ ರುಚಿ ಉಂಡವರು ಬೇರೆಯವರಿಗೆ ತಮಗೆ ಸಿಕ್ಕ ಅಧಿಕಾರದಲ್ಲಿ ಭಾಗ ಕೊಡಲು ಅಥವಾ ತಾವು ಅನುಭವಿಸಿದ ಅಧಿಕಾರವನ್ನು ಬೇರೆಯವರಿಗೆ ಬಿಟ್ಟು ಕೊಡಲು ಸಾಮಾನ್ಯವಾಗಿ ಮನಸ್ಸು ಮಾಡುವುದಿಲ್ಲ. ಇಡೀ ದೇಶ ಕುಟುಂಬ ಪ್ರಣೀತ ರಾಜಕಾರಣದ ಅಪಾಯವನ್ನು ಎದುರಿಸುತ್ತಿದೆ. ಇದಕ್ಕಿಂತ ಬೇರೆ ಜೀವಂತ ನಿದರ್ಶನ ಬೇಕೆ? ವಿಭಿನ್ನ ಜಾತಿಗಳ ನಡುವೆ ಒಡೆತನಕ್ಕಾಗಿ ಇಂಥ ಘಟನೆಗಳು ಜರಗುತ್ತವೆ ಎಂದು ಭಾವಿಸೋಣ. ಆದರೆ ಉಳ್ಳವನು ತನ್ನದೇ ಜಾತಿ, ಉಪಜಾತಿಗೆ ಸೇರಿದ ಬಡವನಿಗೆ ತನ್ಮ ಒಡೆತನದ ಆಸ್ತಿ ಬಿಟ್ಟು ಕೊಡುತ್ತಾನೆಯೆ? ಒಂದೇ ಜಾತಿ ಬೇಡ ಬಿಡಿ. ಒಂದೇ ಕುಟುಂಬದಲ್ಲಿ ಅಣ್ಣ ತನ್ನ ಪಾಲಿನ ಆಸ್ತಿಯಲ್ಲಿ ತಮ್ಮನಿಗೆ ಅಥವಾ ತಮ್ಮ ಅಣ್ಣನಿಗೆ ಆಸ್ತಿ ಬಿಟ್ಟು ಕೊಡುತ್ತಾನೆಯೆ? ಇಲ್ಲ. ಇದು ನಿಜವಾದ ಸಮಸ್ಯೆ. ಈ ಸಮಸ್ಯೆಯ ಬಗ್ಗೆ ಕಾದಂಬರಿ ಮಾತನಾಡುತ್ತದೆ. ಆದರೆ ಇಂಥ ಸೂಕ್ಷ್ಮ ತಾತ್ವಿಕ ಬಿಕ್ಕಟ್ಟು ತಿಳಿಯದಿದ್ದಾಗ ರಾಜಕಾರಣದ ಒರಸೆಯನ್ನು ಹಿಡಿದು ನಿಲ್ಲುತ್ತೇವೆ.
ಎರಡು, ಶಿವರಾಮ ಕಾರಂತರು ಬ್ರಾಹ್ಮಣರು. ಈ ಕಾದಂಬರಿಯಲ್ಲಿ ಬರುವ ಸಂಕಪಯ್ಯ ಕೂಡ ಬ್ರಾಹ್ಮಣ. ಹೀಗಾಗಿ ಕಾರಂತರು ಕೆಳಜಾತಿಯ ಚೋಮನಿಗೆ ಭೂಮಿ ಸಿಗದಂತೆ ನೋಡಿಕೊಂಡರು' ಎಂದು ಕೆಲವರು ಹೇಳುತ್ತಾರೆ. ಇದು ಅತ್ಯಂತ ಹಾಸ್ಯಾಸ್ಪದ ಮತ್ತು ಬೇಜವಾಬ್ದಾರಿಯ ಮಾತು. ಕಾರಂತರ ಈ ಕಾದಂಬರಿಯ ನಾಯಕ ಸಂಕಪಯ್ಯ ಅಲ್ಲ, ಚೋಮ. ಓದುಗರ ಮನಸ್ಸಿನಲ್ಲಿ ಉಳಿಯುವವ ಚೋಮನೆ ಹೊರತು ಸಂಕಪಯ್ಯ ಅಲ್ಲ. ನಮ್ಮ ಸಹಾನುಭೂತಿ, ಸಾಂತ್ವನ ಚೋಮನ ಪರವಾಗಿಯೇ ಹೋಗುತ್ತದೆ. ಇದು ಈ ಕಾದಂಬರಿಯ ಗೆಲುವು. ಇದನ್ನು ಮಾಡಿದವರು ಕಾರಂತರೇ ಅಲ್ಲವೆ? ಇಲ್ಲಿ ಜಾತಿಯ ಅಥವಾ ಬ್ರಾಹ್ಮಣ್ಯದ ಪ್ರಶ್ನೆ ಏಕೆ ಬರುವುದಿಲ್ಲ? ಚೋಮನ ದುಡಿ' ಕಾದಂಬರಿಯ ತಾತ್ವಿಕ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಕೆಲವರು ಸೋತಿದ್ದಾರೆ. ಈ ಕಾದಂಬರಿಯ ಕಲಾತ್ಮಕತೆಯನ್ನು ಅರ್ಥಮಾಡಿಕೊಳ್ಳದವರೂ ಇದ್ದಾರೆ.
ಚೋಮನಿಗೆ ಭೂಮಿ ಕೊಡದಿರುವುದೇ ಈ ಕಾದಂಬರಿಯ ಕೇಂದ್ರ ಸಮಸ್ಯೆ. ಸಂಕಪಯ್ಯ ಚೋಮನಿಗೆ ಭೂಮಿ ಕೊಟ್ಟಿದ್ದಿದ್ದರೆ ಕಾದಂಬರಿ ಶುರುವಾಗುತ್ತಲೇ ಮುಗಿದು ಹೋಗಿರುತ್ತಿತ್ತು ಅಥವಾ ಕಾದಂಬರಿ ಬರೆಯುವ ಅಗತ್ಯವೇ ಬೀಳುತ್ತಿರಲಿಲ್ಲ. ಚೋಮನ ದುಡಿ' ಒಂದು ದುರಂತ ಕಾದಂಬರಿ, ಚೋಮನೆ ದುರಂತ ನಾಯಕ. ಅವನಿಗೆ ಭೂಮಿ ಸಿಕ್ಕಿದ್ದರೆ ಚೋಮ ದುರಂತ ನಾಯಕ ಆಗುತ್ತಿರಲಿಲ್ಲ. ಭೂಮಿಯ ಪ್ರಶ್ನೆ ಬಗೆಹರಿಯದಿರುವುದರಲ್ಲಿಯೇ ಈ ಕಾದಂಬರಿಯ ಶ್ರೇಷ್ಠತೆ ಇದೆ. ಇಲ್ಲದಿದ್ದರೆ ಇದೊಂದು ಸಾಮಾನ್ಯ ಕೃತಿಯಾಗಿರುತ್ತಿತ್ತು. ಇಂಥ ಕೃತಿಯನ್ನು ಜಾತಿಯ ನೆಲೆಯಿಂದ ನೋಡಿದರೆ ನಮಗೆ ಸತ್ಯದ ಸಂಪೂರ್ಣ ದರ್ಶನ ಆಗುವುದಿಲ್ಲ. ಅದನ್ನು ಅಧಿಕಾರದ ನೆಲೆಯಿಂದ, ಮನಶ್ಯಾಸ್ತ್ರೀಯ ನೆಲೆಯಿಂದ ನೋಡಿದಾಗ ಸತ್ಯದ ಅನೇಕ ಚಹರೆಗಳು ನಮಗೆ ಕಾಣಿಸುತ್ತವೆ. ಪ್ರತಿಯೊಂದನ್ನು ಜಾತಿಯ ನೆಲೆಯಿಂದ ನೋಡಿ ಭಾರತೀಯ ಪರಂಪರೆಯನ್ನು ತಪ್ಪಾಗಿ ಅರ್ಥೈಸುವ ಕೆಲಸ ಬಹಳ ದಿನಗಳಿಂದ ನಡೆದುಕೊಂಡು ಬಂದಿದೆ. ಈ ಮಾತುಗಳುಚೋಮನ ದುಡಿ' ಕಾದಂಬರಿಯನ್ನೂ ಒಳಗೊಂಡಂತೆ ನಮ್ಮ ಮಹಾಕಾವ್ಯಗಳನ್ನು ಓದುವ ಹೊಸ ಸಾಧ್ಯತೆಗಳ ಕಡೆಗೆ ನಮ್ಮ ಗಮನಸೆಳೆಯಬಹುದು. ಅಧಿಕಾರ ಕೈಗೆ ಸಿಕ್ಕಾಗ ಜವಾಬ್ದಾರಿಯಿಂದ ವರ್ತಿಸುವವರು, ಅಧಿಕಾರದ ಸದ್ಬಳಕೆ ಮಾಡಿಕೊಂಡು ಲೋಕಕಲ್ಯಾಣ ಮಾಡಲು ಪ್ರಯತ್ನಿಸುವವರು ಬಹಳ ಕಡಿಮೆ. ಹೀಗಾಗಿ ಶೋಷಣೆಗೂ ಜಾತಿಗೂ ಧರ್ಮಕ್ಕೂ ಧರ್ಮ ಗ್ರಂಥಗಳಿಗೂ ತಳಕು ಹಾಕುವುದು ಸರಿಯಾದ ಕ್ರಮವಲ್ಲ, ಇದು ರಾಜಕೀಯಪ್ರೇರಿತ ನಡೆ. ಒಂದು ಕಾಲಕ್ಕೆ ಅಧಿಕಾರ ಮೇಲು ಜಾತಿಗಳ ಪುರುಷರಲ್ಲಿ ಕೇಂದ್ರೀಕೃತವಾಗಿತ್ತು. ಆಗ ಕೆಳಜಾತಿಗಳ ಮತ್ತು ಸ್ತ್ರೀಯರ ಮೇಲೆ ಶೋಷಣೆ ಆಗುವ ಸಾಧ್ಯತೆ ಇತ್ತು. ಆದರೆ ಇದಕ್ಕೆ ಸಮಾಜದ ಮನ್ನಣೆ ಇತ್ತು, ಧಾರ್ಮಿಕ ನಿಯಮವಾಗಿತ್ತು ಎಂದು ಹೇಳುವುದು, ಇದನ್ನು ಒಂದು ನಿರ್ದಿಷ್ಟ ಸಮುದಾಯದ ಮತ್ತು ಒಂದು ನಿರ್ದಿಷ್ಟ ಧರ್ಮಕ್ಕೆ ತಳಕು ಹಾಕುವುದು ಸರಿಯಾದ ಕ್ರಮವಲ್ಲ.
ಈ ಪ್ರಮೇಯವನ್ನು ಸಮಕಾಲೀನ ಸಂದರ್ಭಕ್ಕೆ ಅನ್ವಯಿಸಬೇಕು. ಈಗ ಅಧಿಕಾರ ವಿಕೇಂದ್ರೀಕರಣವಾಗಿದೆ. ವಿಶೇಷ ಹಕ್ಕುಗಳನ್ನು ಮತ್ತು ಕಾನೂನುಗಳನ್ನು ಕೆಲವು ವರ್ಗಗಳಿಗೆ ನೀಡಲಾಗಿದೆ. ಅಧಿಕಾರ ಮೇಲು-ಕೀಳೆನ್ನದೆ, ಗಂಡು-ಹೆಣ್ಣೆನ್ನದೆ ಹೆಚ್ಚು ಕಡಿಮೆ ಪ್ರತಿಯೊಬ್ಬರಿಗೂ ದಕ್ಕಿದೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳುತ್ತಾರೆ
ಯೆ? ತಮಗೆ ಸಿಕ್ಕ ಅಧಿಕಾರದ, ಕಾನೂನಿನ ದುರ್ಬಳಕೆ ಮಾಡಿಕೊಂಡು ಎಷ್ಟು ಜನ ಸ್ತ್ರೀಯರು ಎಷ್ಟು ಜನ ಅಮಾಯಕ ಪುರುಷರ ಮೇಲೆ ಲೈಂಗಿಕ ಕಿರುಕುಳದ ಖೊಟ್ಟಿ ಪ್ರಕರಣಗಳನ್ನು ದಾಖಲಿಸಿಲ್ಲ? ಎಷ್ಟು ಜನ ದಲಿತರು ಖೊಟ್ಟಿ ಜಾತಿನಿಂದನೆಯ ಪ್ರಕರಣಗಳನ್ನು ದಾಖಲಿಸಿಲ್ಲ? ಆದರೆ ಇಂಥ ಪ್ರಕರಣಗಳು ನಡೆದಿವೆ ಎಂದ ಮಾತ್ರಕ್ಕೆ ಎಲ್ಲಾ ಸ್ತ್ರೀಯರು ಹೀಗೇ ಮಾಡುತ್ತಾರೆ, ಎಲ್ಲಾ ದಲಿತರು ಹೀಗೇ ಮಾಡುತ್ತಾರೆ ಎಂದು ಹೇಳಬಹುದೆ? ಇಲ್ಲ. ಹೇಳಲಾಗುವುದಿಲ್ಲ.
ಏಕೆಂದರೆ ಕೆಲವು ಸ್ತ್ರೀಯರು ಮತ್ತು ಕೆಲವು ದಲಿತರು ಸಂವಿಧಾನದತ್ತ ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಇಡೀ ಸ್ತ್ರೀ ಸಮುದಾಯದ ಅಥವಾ ಇಡೀ ದಲಿತ ಸಮುದಾಯದ ಒಪ್ಪಿಗೆ ಇದೆ ಎಂದು ಅರ್ಥವಲ್ಲ. ಒಂದು ಕಾಲಕ್ಕೆ ಅಸ್ಪೃಶ್ಯತೆ ಇತ್ತು. ಆದರೆ ಅದಕ್ಕೆ ಎಲ್ಲರ ಒಪ್ಪಿಗೆ ಇತ್ತು ಎಂಬ ಸರಳ ತೀರ್ಮಾನಕ್ಕೆ ಬರುವುದು ತಪ್ಪು. ಜಾತೀಯತೆಗೆ ಸನಾತನ ಧರ್ಮವೇ ಹೊಣೆ, ಸನಾತನ ದೇವರುಗಳೇ ಹೊಣೆ, ಸನಾತನ ಧರ್ಮಗ್ರಂಥಗಳೇ ಹೊಣೆ ಎಂದು ಹೇಳುವುದು ಸರಿಯಲ್ಲ.
ಕಾರಂತರ ಕಾದಂಬರಿ ಇಂಥ ಸೂಕ್ಷ್ಮವಾದ ತಾತ್ವಿಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಜಾತೀಯತೆ ಮತ್ತು ಅಸಮಾನತೆಗಳಂಥ ಸಮಸ್ಯೆಗಳನ್ನು ಸಮುದಾಯಕೇಂದ್ರಿತ, ಜಾತಿಕೇಂದ್ರಿತ ದೃಷ್ಟಿಯಿಂದ ಪರೀಕ್ಷಿಸಬಾರದು. ಅಧಿಕಾರಕೇಂದ್ರಿತ, ಪ್ರವೃತ್ತಿಕೇಂದ್ರಿತ ಮತ್ತು ಮನೋವೃತ್ತಿ ಕೇಂದ್ರಿತ ನೆಲೆಗಳಿಂದ ಅಧ್ಯಯನ ಮಾಡಬೇಕು.
ಇಲ್ಲದಿದ್ದರೆ ಈ ಸಮಸ್ಯೆಗೆ ಇಂಥ ಸಮುದಾಯ ಅಥವಾ ಜಾತಿ ಹೊಣೆ, ಆ ಸಮಸ್ಯೆಗೆ ಅಂಥ ಜಾತಿ ಅಥವಾ ಸಮುದಾಯ ಹೊಣೆ ಎಂಬ ರಾಜಕೀಯಪ್ರೇರಿತ ಸರಳ ತೀರ್ಮಾನಕ್ಕೆ ಬರುತ್ತೇವೆ. ವಸುಧೈವ ಕುಟುಂಬಕಂ' ಮತ್ತುಸರ್ವೇಜನಃ ಸುಖಿನೋ ಭವಂತು' ಎಂಬುದು ಸನಾತನ ಧರ್ಮದ ಆಶಯ ಮತ್ತು ಕನಸುಗಾರಿಕೆ. ಈ ಆಶಯ ಮತ್ತು ಕನಸುಗಾರಿಕೆಗೆ ಕವಿಗಳು ಮತ್ತು ಶರಣರು `ಮನುಷ್ಯ ಜಾತಿ ತಾನೊಂದೆ ವಲಂ,' ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ' ಎಂದು ಹೊಸ ಶಕ್ತಿಯನ್ನು ತುಂಬಿದ್ದಾರೆ.
ಒಂದು ಸಾಹಿತ್ಯದ ಪಠ್ಯವನ್ನು, ಒಂದು ಸಾಮಾಜಿಕ, ತಾತ್ವಿಕ, ಧಾರ್ಮಿಕ ಸಮಸ್ಯೆಯನ್ನು ನೋಡುವ ನಮ್ಮ ಕ್ರಮ ಬದಲಾಗಬೇಕು. ನೋಟ ಬದಲಾಗದ ಹೊರತು ಸತ್ಯವನ್ನು ಗ್ರಹಿಸಲು ಮತ್ತು ಪ್ರತಿಪಾದಿಸಲು ಆಗದು. ಆಗ ನಮ್ಮ ಮಾತು ಮತ್ತು ಬರಹ ಸತ್ಯದ ಅಣಕವಾಗಿ ಕಾಣುತ್ತದೆ.

Next Article