For the best experience, open
https://m.samyuktakarnataka.in
on your mobile browser.

ಕಾರಿಗಿಂತ ಕಾಲೇ ವಾಸಿ

03:30 AM Jan 22, 2025 IST | Samyukta Karnataka
ಕಾರಿಗಿಂತ ಕಾಲೇ ವಾಸಿ

ಬ್ಯಾಂಕಲ್ಲಿ ಕುಳಿತು ಕೆಲಸ ಮಾಡುತ್ತಿದ್ದೆ. ವಿಐಪಿ ಗ್ರಾಹಕ ಬಂದರು. ಅವರಿಗೆ ಕಾಫಿ ತರಿಸಿಕೊಡಬೇಕೆಂದು ಪ್ಯೂನ್ ರಂಗಯ್ಯನನ್ನು ಕರೆದೆ. ಅವನು ಕೆಲ್ಸಕ್ಕೆ ಸೇರಿ ಒಂದು ವಾರ ಆಗಿತ್ತು.
“ಬೇಗ ಹೋಗಿ ಬಿಸಿ ಬಿಸಿ ನಾಲ್ಕು ಕಾಫಿ ತಗೊಂಡ್ ಬಾ” ಎಂದೆ. ಅವನು ಫ್ಲ್ಯಾಸ್ಕ್ ಹಿಡಿದು,
“ಅಲ್ಲಿ ಕೊಡೋದೇ ಬಿಸಿ ಬಿಸಿ ಕಾಫಿ ಇನ್ನೇನ್ ತಣ್ಣಗಿರೋದ್ ಕೊಡ್ತಾರಾ ಸಾರ್” ಎಂದು ತರಲೆ ಮಾಡುತ್ತ್ತಾ ಸರಸರನೆ ಹೊರಟ.
“ಸೈಕಲ್ ತಗೊಂಡ್ ಹೋಗು, ಬೇಗ ಬಾ” ಎಂದೆ. ಅವನು ತಲೆ ಆಡಿಸಿ ಹೊರಟ. ಹತ್ತು ನಿಮಿಷದಲ್ಲಿ ಬರಬೇಕಾಗಿದ್ದ ಅವನು ಅರ್ಧ ಗಂಟೆ ಆದರೂ ಬರಲಿಲ್ಲ. ಆ ನಂತರ ಏದುಸಿರು ಬಿಡುತ್ತ ಬಂದು ಕಾಫಿ ಕೊಟ್ಟ. ಆ ವೇಳೆಗೆ ಗ್ರಾಹಕರ ಜೊತೆ ನಮ್ಮ ಮಾತು ಮುಗಿದಿತ್ತು, ವಿಐಪಿಗೆ ಕಾಫಿ ಕೊಟ್ಟು ಕಳುಹಿಸಿದ ಮೇಲೆ ರಂಗಯ್ಯನನ್ನು ತರಾಟೆಗೆ ತೆಗೆದುಕೊಂಡೆ.
“ನಡ್ಕೊಂಡ್ ಹೋದ್ರೂ ಹತ್ತು ನಿಮಿಷದಲ್ಲಿ ಬರಬಹುದು, ಸೈಕಲ್ ತಗೊಂಡ್ಹೋಗು ಅಂತ ಹೇಳ್ಲಿಲ್ವಾ? ಎಂದೆ.
“ಅದರಿಂದ್ಲೇ ಸಾರ್ ತೊಂದ್ರೆ ಆಗಿದ್ದು” ಎಂದ.
“ಸೈಕಲ್ ತುಳ್ಕೊಂಡ್ ಬೇಗ ಹೋಗೋಕ್ ಆಗಲ್ವಾ ?”
“ನನಗೆ ತುಳ್ಕೊಂಡ್ ಹೋಗೋಕೆ ಬರೋದಿಲ್ಲ ಸಾರ್, ನೀವು ಹೇಳಿದ್ರಿ ಅಂತ ಸೈಕಲ್ ತಳ್ಕೊಂಡ್ ಹೋಗಿ ಕಾಫಿ ತಂದೆ. ಅದಕ್ಕೆ ಬರೋದು ಲೇಟ್ ಆಯ್ತು” ಎಂದ.
ಜೊತೆಗೆ ವಾಹನ ಇದ್ದರೆ ತಡವಾಗುತ್ತದೆ ಎಂಬುದು ನನ್ನ ಅರಿವಿಗೆ ಬಂತು. ಪ್ರಸ್ತುತ ಬೆಂಗಳೂರಿನ ಟ್ರಾಫಿಕ್ ನೋಡಿದಾಗ ಇದು ನಿಜ ಎನ್ನಿಸುತ್ತಿದೆ. ನಮ್ಮ ರಾಜಧಾನಿಯಲ್ಲಿ ವಾಹನ ದಟ್ಟಣೆ ಎಷ್ಟಿದೆ ಎಂದರೆ ಇತ್ತೀಚೆಗೆ ನಮಗೆ ಆಮೆ ರೇಸ್‌ನಲ್ಲಿ ಮೂರನೇ ಸ್ಥಾನ ಸಿಕ್ಕಿದೆ. ಈ ಎಲ್ಲಾ ವಿಷಯ ವಿಶ್ವನ ಮನೇಲಿ ಕುಳಿತು ಮೆಲುಕು ಹಾಕಿದೆ.
“ನಗರದಲ್ಲಿ ಹತ್ತು ಕಿಲೋಮೀಟರ್ ದೂರ ಕರ‍್ನಲ್ಲಿ ಹೋಗೋಕೆ ಹದಿನಾಲ್ಕು ನಿಮಿಷ ಬೇಕಾಗುತ್ತೆ, ಕಾರಿಗಿಂತ ಕಾಲೇ ವಾಸಿ” ಎಂದು ವಿಶ್ವನಿಗೆ ಪತ್ರಿಕೆಯಲ್ಲಿ ಬಂದಿದ್ದ ಅಂಕಿ ಅಂಶ ತೋರಿಸಿದೆ.
“ವೆಹಿಕಲ್ಸ್ ಜಾಸ್ತಿ, ಅದರಿಂದ ಲೇಟ್ ಆಗುತ್ತೆ” ಎಂದ ವಿಶ್ವ.
“ವೆಹಿಕಲ್ಸ್ ಎಷ್ಟು ಜಾಸ್ತಿ ಆಗಿದೆ ನಿನಗೆ ಗೊತ್ತಾ ವಿಶ್ವ?”.
“ಬೆಂಗಳೂರು ನಗರದಲ್ಲಿ ಸಾವಿರ ಜನಕ್ಕೆ ೮೩೦ ವಾಹನ ಇದೆ” ಎಂಬ ಆಘಾತಕಾರಿ ಸುದ್ದಿಯನ್ನು ವಿಶ್ವ ಹೇಳಿದ.
“ಬೇರೆ ಕಡೆ ಎಷ್ಟಿದೆ ಅದೂ ನಿನಗೆ ಗೊತ್ತಾ ವಿಶ್ವ ?”
“ಮುಂಬೈಯಲ್ಲಿ ಸಾವಿರ ಮಂದಿಗೆ ೨೨೦ ವಾಹನ ಇದೆ, ದೆಹಲಿಯಲ್ಲಿ ೩೨೦ ಇದೆ ಆದರೆ ನಮ್ಮಲ್ಲಿ ೮೩೦ ವಾಹನ, ಅಂದರೆ ಮುಂಬೈ ಪ್ಲಸ್ ದೆಹಲಿಯಷ್ಟು ವಾಹನಗಳಾದವು” ಎಂದ.
ಕಾರು, ಮೋಟಾರ್ ಸೈಕಲ್‌ಗಳಿಗೆ ಸಾಲ ಕೊಡೋ ಬ್ಯಾಂಕ್‌ಗಳು ಗಲ್ಲಿಗೊಂದು ಆದಮೇಲೆ ರಸ್ತೆಯಲ್ಲಿ ಜನ ನಡೆದುಕೊಂಡು ಹೋದರೆ ಬ್ಯಾಂಕಿನವರು ಬಿಡುವುದೇ ಇಲ್ಲ.
“ಬನ್ನಿ ಸಾರ್, ಬಿಸಿಲಲ್ಲಿ ಯಾಕ್ ನಡ್ಕೊಂಡ್ ಹೋಗ್ತೀರ, ಕಾರಲ್ಲಿ ಹೋಗಿ, ಮೋಟಾರ್‌ ಬೈಕ್‌ನಲ್ಲಿ ಹೋಗಿ” ಎಂದು ಸಾಲವನ್ನು ಮಂಜೂರು ಮಾಡಿ ವೆಹಿಕಲ್ ಸಮೇತ ಕಳುಹಿಸಿ ಕೊಡುತ್ತಾರೆ. ಈ ನಡುವೆ ವಾಹನಗಳ ದಟ್ಟಣೆ ಎಷ್ಟಿದೆ ಎಂದರೆ ಫುಟ್‌ಪಾತ್ ಮೇಲೆಲ್ಲ ಮೋಟಾರ್‌ಬೈಕ್‌ಗಳು ಓಡಾಡುತ್ತಿರುತ್ತವೆ. ನಾನು ಫುಟ್‌ಪಾತ್ ಮೇಲೆ ನಿಂತು ಯಾರಿಗೋ ಫೋನ್ ಮಾಡುತ್ತಿದ್ದಾಗ ಮೋಟಾರ್‌ಬೈಕ್ ಸವಾರ ನನ್ನ ಕೈ ಕೆಳಗೆ ಗಾಡಿ ಓಡಿಸಿಕೊಂಡು ಹೋದ, ಅವನು ನನ್ನ ಗುದಿದ್ದರೆ ಏನು ಗತಿ ಎಂದು ಗಾಬರಿ ಆಗಿತ್ತು.
“ಟ್ರಾಫಿಕ್ ಕಂಜೆಷನ್‌ಗೆ ಏನು ಕಾರಣ ?” ವಿಶಾಲು ಕೇಳಿದಳು.
“ಲೇನ್ ಡಿಸಿಪ್ಲೀನ್ ನಮ್ಮಲ್ಲಿ ಇಲ್ಲ, ನೇರವಾಗಿ ಒಂದೇ ಲೇನ್‌ನಲ್ಲಿ ಹೋಗಬೇಕು ಎಂಬುದು ನಿಯಮ ಆದರೆ ಹಾವಿನಂತೆ ಜಿಗ್‌ಜ್ಯಾಗ್ ಆಗಿ ನುಗುತ್ತಿರುತ್ತಾರೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಇತರರಿಗೆ ತೊಂದರೆ, ಆ್ಯಕ್ಸಿಡೆಂಟ್‌ಗಳು ಹೆಚ್ಚು”.
“ಬೇರೆ ಇನ್ನೇನು ತೊಂದರೆ ಇದೆ ?”.
“ಒನ್ ವೇ ನಲ್ಲಿ ಬರಬಾರದು ಅಂತ ಕಾನೂನು ಇದ್ದರೂ ಎದುರಿನಿಂದ ಕಾರುಗಳು ಬೈಕ್‌ಗಳು ರಾಜಾರೋಷವಾಗಿ ನುಗುತ್ತಿರುತ್ತವೆ, ಅವರಿಗೆ ಹೆದರಿ ನಾವೇ ದಾರಿ ಬಿಟ್ಟು ಹೋಗಬೇಕು” ಎಂದೆ. ವಿಶ್ವನಿಗೆ ಆಶ್ಚರ್ಯವಾಯ್ತು.
“ಪೊಲೀಸ್‌ನವರು ಅಲ್ಲೇ ಇರ್ತಾರಲ್ಲ ಯಾಕ್ ಹಿಡಿಯೋದಿಲ್ಲ ?” ಎಂದು ಕೇಳಿದ.
“ಅವರು ತಿಂಗಳಿಗೆ ಎರಡು ದಿನ ಮಾತ್ರ ಹಿಡಿತಾರೆ, ಉಳಿದ ದಿನ ಅದರ ಸುದ್ದಿಗೆ ಬರುವುದಿಲ್ಲ, ಈ ಥರ ನುಗ್ಗೋ ಸಂಸ್ಕೃತಿ ವಿದೇಶಗಳಲ್ಲಿ ಇಲ್ಲ” ಎಂದು ಲಂಡನ್ ನಗರದ ಉದಾಹರಣೆ ಕೊಟ್ಟೆ.
“ನಾವು ಬಲಕ್ಕೆ ಅಥವಾ ಎಡಕ್ಕೆ ಹೋಗುತ್ತೇವೆ ಎಂದು ಇಂಡಿಕೇಟರ್ ಹಾಕಿದರೆ ನಮ್ಮ ಹಿಂದಿರುವ ವಾಹನಗಳೆಲ್ಲ ಅಲ್ಲಲ್ಲೇ ನಿಲ್ಲುತ್ತವೆ, ಮುಂದೆಯಿಂದ ಬರುವ ವಾಹನಗಳು ದಾರಿ ಮಾಡಿಕೊಡುತ್ತವೆ, ಸುಲಭವಾಗಿ ನಾವು ಪಕ್ಕದ ರಸ್ತೆಗೆ ಹೋಗಬಹುದು ಆದರೆ ನಮ್ಮಲ್ಲಿ ವಾಹನ ದಟ್ಟಣೆ ಇರುವಾಗ ಬಲಕ್ಕೆ ಅಥವಾ ಎಡಕ್ಕೆ ತಿರುಗುವುದು ಬಹಳವೇ ಕಷ್ಟ” ಎಂದೆ.
“ಬರೀ ಸಮಸ್ಯೆಗಳೇ ಹೇಳಿದರೆ ಹೇಗೆ ಅದಕ್ಕೆ ಪರಿಹಾರ ಬೇಡವಾ ?” ವಿಶ್ವ ಕೇಳಿದ.
“ಇದಕ್ಕೆ ಫಾಸ್ಟ್ ಟ್ರ್ಯಾಕ್ ರಸ್ತೆಗಳನ್ನು ನಿರ್ಮಿಸಬೇಕು” ಎಂದೆ.
“ಅಂದರೆ ಫ್ಲೈ ಓವರ್ ಕಟ್ಟೋದಾ ?” ಕೇಳಿದಳು ವಿಶಾಲು.
“ಹೌದು ಫ್ಲೈ ಓರ‍್ಸ್ ಜಾಸ್ತಿ ಆದರೆ ವಾಹನದ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತೆ”
“ಆದರೆ ಜನ ತಮ್ಮಲ್ಲಿರೋ ಗಾಡಿಗಳನ್ನ ನಿತ್ಯ ಆಚೆ ತೆಗೆಯೋಕೆ ಆಸೆ ಪಡ್ತಾರಲ್ಲ ?” ಎಂದ ವಿಶ್ವ.
“ಮುಂಬೈನಲ್ಲಿ ರಜಾ ದಿನಗಳಲ್ಲಿ ಮಾತ್ರ ಕಾರನ್ನ ಆಚೆಗೆ ತೆಗಿತಾರೆ, ಉಳಿದ ದಿನಗಳು ಅಲ್ಲಿನ ಜನ ಲೋಕಲ್ ಟ್ರೈನ್‌ಗಳಲ್ಲೇ ಓಡಾಡೋದು ಹೆಚ್ಚು”
“ಲೋಕಲ್ ಟ್ರೈನ್, ಬಿ.ಎಂ.ಟಿ.ಸಿ. ಎಂದರೆ ಸಮೂಹ ಸಾರಿಗೆ. ಅದರಲ್ಲಿ ಹೋಗೋಕೆ ನಾವು ಸಂಕೋಚ ಪಡ್ತೀವಿ” ಎಂದಳು ವಿಶಾಲು.
“ಅಲ್ಲೇ ನಮಗೆ ತೊಂದರೆ ಆಗ್ತಾ ಇರೋದು, ಸಮೂಹ ಸಾರಿಗೆಯಲ್ಲಿ ಹೋದರೆ ದೇಶಕ್ಕೆ ಒಳ್ಳೇಯದು, ಪೆಟ್ರೋಲ್ ಉಳಿತಾಯ ಆಗುತ್ತೆ, ಸ್ಥಳಗಳಿಗೆ ಬೇಗ ಹೋಗಿ ಸೇರೋಕೂ ಅನುಕೂಲ ಆಗುತ್ತೆ” ಎಂದೆ.
“ದೆಹಲಿಯಲ್ಲಿ ಇದ್ದಂತೆ ಸಮ ಸಂಖ್ಯೆ, ಬೆಸ ಸಂಖ್ಯೆ ಆದಾರದ ಮೇಲೆ ದಿನ ಬಿಟ್ಟು ದಿನ ಗಾಡಿಗಳನ್ನು ಹೊರಗೆ ತರುವ ಹಾಗೆ ಕಾನೂನು ಮಾಡಬಹುದಲ್ಲ ?” ವಿಶ್ವ ಕೇಳಿದ.
“ಅದು ಇನ್ನೂ ಕಷ್ಟ, ಒಂದೊಂದು ಮನೆಯಲ್ಲಿ ಕನಿಷ್ಟ ಎರಡು ಕಾರುಗಳಿರುತ್ತವೆ, ಒಂದಕ್ಕೆ ಸಮ ಸಂಖ್ಯೆ ಇರುತ್ತೆ. ಇನ್ನೊಂದಕ್ಕೆ ಬೆಸ ಸಂಖ್ಯೆ ಇರುತ್ತೆ. ಅವರಂತೂ ನಿತ್ಯ ಗಾಡಿ ತಂದೇ ತರುತ್ತಾರಲ್ಲ” ಎಂದೆ. ವಿಶಾಲು ತಂದುಕೊಟ್ಟ ಕಾಫಿಯನ್ನು ಚಪ್ಪರಿಸಿ ಹೊರಟು ನಿಂತೆ.
“ಆಟೋದಲ್ಲಿ ಹೋಗ್ತೀಯೋ ಇಲ್ಲ ಕ್ಯಾಬ್‌ನಲ್ಲಿ ಹೋಗ್ತೀಯೋ?” ಎಂದು ವಿಶ್ವ ಕೇಳಿದ.
“ಆಟೋದಲ್ಲಿ, ಕ್ಯಾಬ್‌ನಲ್ಲಿ ಹೋದರೆ ತುಂಬಾ ಲೇಟ್ ಆಗುತ್ತೆ, ಅದಕ್ಕೆ ನಡೆದುಕೊಂಡೇ ಹೋಗ್ತೀನಿ” ಎಂದು ಮನೆಯತ್ತ ಸರಸರ ಹೆಜ್ಜೆ ಹಾಕಿದೆ.