ಕಾರ್ಕಳದಲ್ಲಿ ಕಾಲರಾ ಪತ್ತೆ
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಹೊಸ ಜ್ವರದ ಲಕ್ಷಣಗಳು ಕಂಡು ಬಂದಿದ್ದು ಈ ರೋಗವು ಕಾಲರಾ ರೋಗ ಲಕ್ಷಣವನ್ನು ಹೋಲಿಕೆಯಾಗುತ್ತಿದ್ದು ಆರೋಗ್ಯ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿದು ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಕಾಲರಾ ರೋಗ ಈವರೆಗೆ ದೃಢಪಡದ ಕಾರಣ ಗಂಭೀರ ಪರಿಸ್ಥಿತಿ ಎದುರಾಗಿದೆ. ಈಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು ಗ್ರಾಮದ ವ್ಯಾಪ್ತಿಯಲ್ಲಿ ಕಂಡು ಬಂದಿದ್ದು ಜಿಲ್ಲಾ ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ಈದುವಿಗೆ ಭೇಟಿ ನೀಡಿದ್ದಾರೆ.
ಈ ರೋಗ 3 ಮಂದಿಗೆ ತಗುಲಿದೆ ಎನ್ನಲಾಗಿದ್ದು, ಇವರಲ್ಲಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದ್ದು ಅವರಿಗೆ ಉಡುಪಿಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಹವಾಮಾನ ವೈಪರಿತ್ಯ, ಶುಚಿತ್ವದ ಕೊರತೆ ಹಾಗೂ ಕಲುಷಿತ ನೀರು ಆರೋಗ್ಯಕ್ಕೆ ಹಾನಿಕರಕವಾಗಿದ್ದು ಯಾರೂ ತಣ್ಣೀರು ಕುಡಿಯದೆ ಬಿಸಿ ನೀರನ್ನು ಕುಡಿದು ಆರೋಗ್ಯ ಕಾಪಾಡಿಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ.
ತಾಲೂಕಿನ ಈದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಂಕಿತ ಕಾಲರ ರೋಗ ಪತ್ತೆ ಆಗಿದೆ ಎಂಬ ಮಾಹಿತಿ ಲಭ್ಯ ಆದ ತಕ್ಷಣ ಅಲ್ಲಿನ ಗ್ರಾಮ ಪಂಚಾಯತವು ತನ್ನ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ಗ್ರಾಪಂ ಅಧ್ಯಕ್ಷರಾದ ಸದಾನಂದ ಪೂಜಾರಿ ತಿಳಿಸಿದ್ದಾರೆ.
ಈದು ಗ್ರಾಪಂನಿಂದ ನೀರು ವಿತರಣೆ ಮಾಡುವ ಎಲ್ಲಾ ನೀರಿನ ಟ್ಯಾಂಕ್ ಗಳನ್ನು ಶುಚಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಒಂದು ಹಂತದಲ್ಲಿ ಶುಚಿತ್ವ ಮಾಡಲಾಗಿದ್ದು, ಪುನಃ ಶುಚಿತ್ವ ಕ್ಕೆ ಆದ್ಯತೆ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಆಹಾರ ಸರಬರಾಜು ಮಾಡುವ ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ಕೂಡ ಶುಚಿತ್ವ ಕಾಪಾಡುವಂತೆ ಅವರು ಅಂಗಡಿ, ಹೋಟೆಲ್ ಮಾಲಕರಲ್ಲಿ ಮನವಿ ಮಾಡಿದ್ದಾರೆ. ಊರಿಗೆ ಯಾವುದೇ ಸಂಕಷ್ಟ ಬಂದರೂ ಎಲ್ಲರೂ ಒಗ್ಗೂಡಿ ಗ್ರಾಮ ಪಂಚಾಯತ್ ಮೂಲಕ ಸಮಸ್ಯೆ ಪರಿಹಾರಕ್ಕೆ ಸಹಕಾರ ನೀಡುವಂತೆ ಈದು, ನೂರಳ್ ಬೆಟ್ಟು ಗ್ರಾಮಸ್ಥರಲ್ಲಿ ಅವರು ಮನವಿ ಮಾಡಿದ್ದಾರೆ.