For the best experience, open
https://m.samyuktakarnataka.in
on your mobile browser.

ಸೋದಿ ಮಾಮಾ ನಕ್ಕರೆ ಸಿಟ್ಯೂರಪ್ಪಗೆ ಸಕ್ಕರೆ

02:30 AM Apr 18, 2024 IST | Samyukta Karnataka
ಸೋದಿ ಮಾಮಾ ನಕ್ಕರೆ ಸಿಟ್ಯೂರಪ್ಪಗೆ ಸಕ್ಕರೆ

ಕವಿ ಹೃದಯದ ತಿಗಡೇಸಿ ಕವನ ಬರೆಯುವ ಹುಚ್ಚು. ಏನೇ ಕಾರ್ಯಕ್ರಮ ಆಗಲಿ.. ಯಾವುದೇ ವ್ಯಕ್ತಿಯ ಬಗ್ಗೆ ನಿಂತ ನಿಂತಲ್ಲೇ ಕವನ ಬರೆದು ಅದನ್ನು ಅದ್ಭುತ ಕಂಠದಿಂದ ಓದುತ್ತಾನೆ. ಅದನ್ನು ಕೇಳಿದವರು ಅಕಸ್ಮಾತ್ ವಾವ್ ಅಂದರೆ ಸಾಕು ಮತ್ತೆ ಅದಕ್ಕೆ ಏನಾದರೂ ಜೋಡಿಸಿ ಓದುತ್ತಾನೆ. ಈಗ ಚುನಾವಣೆ ಸಮಯ.
ಎಲ್ಲ ನಾಯಕರನ್ನು ನೋಡಿ ಅವರ ಮೇಲೆ ಯಾಕೆ ಕವನ ರಚಿಸಬಾರದು ಎಂದು ತಲೆಯಲ್ಲಿ ಬಂದ ತಕ್ಷಣವೇ ಆತನ ಕವಿ ಮನಸ್ಸು ಹಾಳೆ ಪೆನ್ನು ಹುಡುಕಿತು. ಕವನ ಬರೆಯಲು ಹಚ್ಚಿತು.
ಸೋದಿ ಮಾಮಾ ನಕ್ಕರೆ
ಸಿಟ್ಯೂರಪ್ಪಗೆ ಸಕ್ಕರೆ
ಕೇಸ್ವರಪ್ಪಗೆ ಭಕ್ಕರೆ
ಸೋನಮ್ಮಾರು ನಕ್ಕರೆ
ಮದ್ರಾಮಣ್ಣಗೆ ಸಕ್ಕರೆ..
ಬಂಡೇಸಿಗೆ ಕೊಕ್ಕರೆ
ರಿಲೇಷನ್ನು ನಾವೆಲ್ಲ
ನಿಮಗಿಂತ. ಬೇರೆ ಇಲ್ಲ
ನಾವು ಅಪ್ಪನ ಮಕ್ಕಳು
ಉಳಿದವರು ಬೇರೆ ಮಕ್ಕಳು
ಹೀಗೆ ಕವನ ಬರೆದು ನಾಲ್ಕು ಮಂದಿ ನಿಂತಲ್ಲಿ. ಶೇಷಮ್ಮನ ಹೋಟ್ಲಲ್ಲಿ. ಜಾಲಿ ಗಿಡದ ಕೆಳಗೆ…. ಮುದೆಪ್ಪನ ಕೊಲುಮೆ ಹೀಗೆ ಎಲ್ಲ ಕಡೆ ತಿರುಗಾಡಿ ಕವನ ಓದಿದ…. ಎಲ್ಲರೂ ವೆರೀಬೆಸ್ಟ್ ಅನ್ನ ತೊಡಗಿದರು. ಈಗ ತಿಗಡೇಸಿ ಪೂರ್ಣಪ್ರಮಾಣದ ಕವಿಯಾದ. ಜನರು ಆತನನ್ನು ಕಂಡ ಕೂಡಲೇ ಜಾಗ ಖಾಲಿ ಮಾಡುತ್ತಿದ್ದಾರೆ.