For the best experience, open
https://m.samyuktakarnataka.in
on your mobile browser.

ಹಾರಿಕೋ ಹೋಗಿ..

02:30 AM May 10, 2024 IST | Samyukta Karnataka
ಹಾರಿಕೋ ಹೋಗಿ

ಕಂಟ್ರಂಗಮ್ಮತ್ತಿಯ ಕೃಪೆಯಿಂದ ಪೊಲೀಸ್ ಕೆಲಸಕ್ಕೆ ಸೇರಿದ್ದ ತಿಗಡೇಸಿಗೆ ಕಂಟ್ರಂಗಮ್ಮತ್ತಿಯ ಮಾತೇ ಫೈನಲ್. ಆಕೆ ತಪ್ಪಾಗಿ ಹೇಳಿದರೂ ಆತನಿಗೆ ಅದೇ ಸತ್ಯ. ತನಗೆ ಪೊಲೀಸ್ ನೌಕರಿ ಸಿಕ್ಕಾಗ ಆರ್ಡರ್‌ಕಾಪಿ ಹಿಡಿದುಕೊಂಡು ಹೋಗಿ ಅದನ್ನು ಆಕೆಯ ಪಾದದ ಮೇಲಿಟ್ಟು ಆಶೀರ್ವಾದ ಪಡೆದ. ಆಗ ಕಂಟ್ರಂಗಮ್ಮತ್ತಿ ನೋಡು ನಿನ್ನ ವೃತ್ತಿ ಪಯಣದಲ್ಲಿ ಯಾರನ್ನೂ ನೋಯಿಸಬೇಡ… ಅವರಿಗೆ ಅಡ್ಡಿಯಾಗಬೇಡ ಅಂದಾಗ ಮಾತ್ರ ನಾನು ನಿನಗೆ ಕೆಲಸ ಕೊಡಿಸಿದ್ದಕ್ಕೂ ಸಾರ್ಥಕ ಎಂದು ಆಶೀರ್ವಾದ ಮಾಡಿದ್ದಳು. ಅಂದಿನಿಂದ ತಿಗಡೇಸಿಯು ಎಲ್ಲದರಲ್ಲೂ ಆಕೆಯ ಮಾತು ಪಾಲನೆ ಮಾಡುತ್ತಿದ್ದ. ತನಗೆ ಏನಾದರೂ ಬೇಕಿದ್ದರೆ ಆಕೆಯ ಕಡೆಯಿಂದ ಸಲಹೆ ಪಡೆಯುತ್ತಿದ್ದ. ಇಂತಹ ತಿಗಡೇಸಿಗೆ ಮೇಲಾಧಿಕಾರಿ ಬಹಳ ಕಿರುಕುಳ ಕೊಡುತ್ತಿದ್ದ. ಕುಂತರೆ ಕುಂತ್ಯಾಕೆ? ನಿಂತರೆ ನಿಂತ್ಯಾಕೆ ಅನ್ನುತ್ತಿದ್ದ. ದೂರದ ಕಡೆಗೆ ಬಂದೋಬಸ್ತ್ಗೆ ಹಾಕುತ್ತಿದ್ದ. ಬಿಸಿಲಲ್ಲಿ ಟೊಪ್ಪಿಗೆ ಇಲ್ಲದೇ ಟ್ರಾಫಿಕ್ ಡ್ಯೂಟಿ ಮಾಡು ಎಂದು ಅಪ್ಪಣೆ ಕೊಡುತ್ತಿದ್ದ. ಕೆಲವೊಂದು ಬಾರಿ ಆತ ಕೊಡುವ ಕಿರುಕುಳಕ್ಕೆ ಬೇಸತ್ತು ಹೋಗುತ್ತಿದ್ದ ತಿಗಡೇಸಿ ನೌಕರಿ ಬಿಡುವ ಮನಸ್ಸು ಮಾಡುತ್ತಿದ್ದ. ಆಗ ಕಂಟ್ರಂಗಮ್ಮತ್ತಿ ತಾಳ್ಮೆ..ತಾಳ್ಮೆ ಎಂದು ಬುದ್ಧಿ ಹೇಳುತ್ತಿದ್ದ. ಶಾಲಾ ಕಾಲೇಜು ಫಲಿತಾಂಶ ಬಂದಾಗಲಂತೂ ತಿಗಡೇಸಿಗೆ ಕೆರೆದಂಡೆಯ ಪಾಳೆ ಹಾಕುತ್ತಿದ್ದರು. ಫಲಿತಾಂಶದಲ್ಲಿ ಫೇಲಾಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೆರೆಗೆ ಹಾರಲು ಬರುತ್ತಾರೆ. ಅವರನ್ನು ತಡೆದು ನಿಲ್ಲಿಸಿ ವಿಚಾರಿಸಿ ಅವರನ್ನು ಕಳುಹಿಸಬೇಕು ಎಂದು ಅಪ್ಪಣೆ ಕೊಟ್ಟಿದ್ದರು. ಅವತ್ತು ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಂದಿತ್ತು. ಯಥಾಪ್ರಕಾರ ತಿಗಡೇಸಿಗೆ ಕೆರೆದಂಡೆ ಕಾಯುವ ಡ್ಯೂಟಿಗೆ ಹಾಕಿ..ನೋಡೂ ಎಸ್‌ಎಸ್‌ಎಲ್‌ಸಿ ಫೇಲಾದವರು ಕೆರೆಗೆ ಹಾರಲು ಬರುತ್ತಾರೆ ಅವರನ್ನು ಹಾರಲು ಬಿಡಬೇಡ ಎಂದು ಕಟ್ಟಪ್ಪಣೆ ಮಾಡಲಾಗಿತ್ತು. ರಣಬಿಸಿಲು… ಸಿಕ್ಕಾಪಟ್ಟೆ ಹೊಟ್ಟೆ ಹಸಿವು ಎಲ್ಲವನ್ನೂ ತಡೆದುಕೊಂಡ ತಿಗಡೇಸಿ ಕೆರೆಯ ದಂಡೆಯ ಮೇಲೆ ಇದ್ದ ಗಿಡದ ಕೆಳಗೆ ಕುಳಿತಿದ್ದ. ಆಗ ಇಬ್ಬರು ವಿದ್ಯಾರ್ಥಿಗಳು ಅಲ್ಲಿಗೆ ಆಗಮಿಸಿದರು. ಯಾಕ್ರಪ ಬಂದಿರಿ? ಎಂದು ಕೇಳಿದ. ಸಾರ್ ನಾವು ಕೆರೆಗೆ ಹಾರಲು ಬಂದಿದ್ದೇವೆ ಎಂದು ಅವರು ಹೇಳಿದರು. ನೀವು ಎಸ್‌ಎಸ್‌ಎಲ್‌ಸಿ? ಎಂದು ಕೇಳಿದ್ದಕ್ಕೆ ಆ ವಿದ್ಯಾರ್ಥಿಗಳು ಇಲ್ಲಾ ಸಾರ್ ಪಿಯುಸಿ ಅಂದರು. ..ಏನಂದ್ರೀ? ಪಿಯುಸಿನಾ? ಎಸ್‌ಎಸ್‌ಎಲ್‌ಸಿ ಅಲ್ಲ ತಾನೆ? ಎಂದು ಕೇಳಿದ ಹುಡುಗರೂ ಸಹ ಹೌದು ಸಾರ್ ಎಂದು ಜೋರಾಗಿ ಹೇಳಿದರು…ಸ್ವಲ್ಪ ಹೊತ್ತು ಸುಮ್ಮನಿದ್ದ ತಿಗಡೇಸಿ…ಪಿಯುಸಿ ಆದರೆ ಹಾರಕೋ ಹೋಗಿ ಎಂದು ಅಲ್ಲಿಂದ ಎದ್ದು ಹೋದ.