ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ಮೂವರ ಬಂಧನ
ವಿಜಯಪುರ: ಇಟ್ಟಿಗೆ ಭಟ್ಟಿ ಮಾಲೀಕ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕರಣ ಕುರಿತಂತೆ ಇಟ್ಟಿಗೆ ಬಟ್ಟಿ ಮಾಲೀಕ ಖೇಮು ರಾಠೋಡ್, ಸಚಿನ್ ಮಾನವರ್, ವಿಶಾಲ್ ಜುಮನಾಳ್ ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ. ಇತ್ತ ಘಟನೆ ಬಳಿಕ ಖೇಮು ರಾಠೋಡ್ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಾಪಸ್ ತೆರಳಿದ್ದಾರೆ. ಈ ಮೂವರು ಕಾರ್ಮಿಕರು ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದವರಾಗಿದ್ದು, ಸಂಕ್ರಾಂತಿ ಹಬ್ಬಕ್ಕೆ ಎಂದು ಮನೆಗೆ ತೆರಳಿದ್ದರು. ಹಬ್ಬ ಮುಗಿಸಿಕೊಂಡು ವಾಪಸ್ ಬರೋದು ವಿಳಂಭವಾಗಿದೆ. ಅಡ್ವಾನ್ಸ್ಡ್ ಹಣ ಪಡೆದು ಕೆಲಸಕ್ಕೆ ವಿಳಂಬ ಮಾಡಿದ್ದೀರಿ ಎಂದು ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ನಿರ್ದಾಕ್ಷಿಣ್ಯ ಕ್ರಮ ಸಚಿವ ಎಂ.ಬಿ. ಪಾಟೀಲ ಸೂಚನೆ: ಇಟ್ಟಿಗೆ ಭಟ್ಟಿ ಮಾಲೀಕ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕರಣ ಕುರಿತಂತೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯೆ ನೀಡಿದ್ದು ವಿಜಯಪುರ ನಗರದ ಹೊರಭಾಗದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಮೂವರು ಕಾರ್ಮಿಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡನೀಯ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದಾಕ್ಷಿಣ್ಯ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಿರುವೆ. ಆರೋಪಿಗಳನ್ನು ತ್ವರಿತವಾಗಿ ಬಂಧಿಸಿ, ಕಾನೂನು ಪ್ರಕ್ರಿಯೆಯ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ ಎಂದಿದ್ದಾರೆ.
ಗರಿಷ್ಠ ಶಿಕ್ಷೆಗೆ ಕ್ರಮ- ಸಿಎಂ ಸಿದ್ದರಾಮಯ್ಯ: ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ನಡೆದ ಹಲ್ಲೆ ಅಮಾನವೀಯ ಮಾತ್ರವಲ್ಲ, ಘೋರ ಅಪರಾಧವೂ ಹೌದು. ಬಡ ಕೂಲಿಕಾರ್ಮಿಕರ ಮೇಲೆ ಹಲ್ಲೆ ಮಾಡಿದ ದುರುಳರನ್ನು ಈಗಾಗಲೇ ಬಂಧಿಸಲಾಗಿದ್ದು, ಸೂಕ್ತ ತನಿಖೆ ನಡೆಸಿ, ಅಪರಾಧಿಗಳನ್ನು ಗರಿಷ್ಠ ಶಿಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.