ಕಾರ್ಯಕರ್ತರ ಮೇಲೆ ಪದೇ ಪದೇ ದೌರ್ಜನ್ಯ
ಬೆಂಗಳೂರು: ಬಿಜೆಪಿ ಕಾರ್ಯಕರ್ತರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿರುವ ಘಟನೆಗಳು ನಿಲ್ಲದಿದ್ದರೆ ನನ್ನನ್ನೂ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸುತ್ತಿದ್ದ ನಮ್ಮ ಪಕ್ಷದ ಮಹಿಳಾ ಕಾರ್ಯಕರ್ತೆ ಛಾಯಾ ಅವರನ್ನು ಅನಾವಶ್ಯಕವಾಗಿ ಪೊಲೀಸರು ಪ್ರಶ್ನಿಸಿ ನಡುರಾತ್ರಿ ವರೆಗೂ ಠಾಣೆಯಲ್ಲಿ ಕೂರಿಸಿಕೊಂಡು ದಬ್ಬಾಳಿಕೆ ನಡೆಸಿರುವ ಘಟನೆ ಅಕ್ಷಮ್ಯ ಅಪರಾಧ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿರುವ ಘಟನೆಗಳು ನಿಲ್ಲದಿದ್ದರೆ ನನ್ನನ್ನೂ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ. ನಿನ್ನೆ ನಮ್ಮ ಕಾರ್ಯಕರ್ತೆಯನ್ನು ಅನಾವಶ್ಯಕವಾಗಿ ತೊಂದರೆ ನೀಡಲೆಂದೇ ಉದ್ದೇಶಪೂರ್ವಕವಾಗಿ ಅಪಮಾನಿಸಿ, ದಬ್ಬಾಳಿಕೆ ನಡೆಸಿರುವ ಪೊಲೀಸರ ವಿರುದ್ಧ ತತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರನ್ನು ಆಗ್ರಹಿಸುತ್ತೇನೆ. ಈ ರೀತಿಯ ಘಟನೆಗಳು ಮರುಕಳಿಸಿದ್ದೇ ಆದಲ್ಲಿ ಮುಂದಾಗುವ ಪರಿಣಾಮಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾದೀತು ಎಚ್ಚರ ಎಂದಿದ್ದಾರೆ.