ಕಾಲಿಗೆ ಗುಂಡು ಹಾರಿಸಿ ನಟೋರಿಯಸ್ ರೌಡಿ ಸೆರೆ
ಮಂಗಳೂರು: ನಟೋರಿಯಸ್ ರೌಡಿ ಆಕಾಶಭವನ್ ಶರಣ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಇಂದು ನಗರದ ಜೆಪ್ಪು ಕುದ್ಪಾಡಿಯಲ್ಲಿ ನಡೆದಿದೆ.
ಶರಣ್ ಕುದ್ಪಾಡಿಯಲ್ಲಿ ಸಾಗುತ್ತಿದ್ದಾಗ ಆತನ ಬಂಧಿಸಲು ಪೊಲೀಸರು ಯತ್ನಿಸಿದಾಗ ಆತ ಪೊಲೀಸರ ಮೇಲೆ ಮರು ದಾಳಿಗೆ ಯತ್ನಿಸಿದ್ದು, ಈ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಜ. ೫ರಂದು ರಾತ್ರಿ ಮಂಗಳೂರಿನ ಸಿಸಿಬಿ ಪೊಲೀಸರು ಕಾವೂರಿನಲ್ಲಿ ರೌಡಿಯನ್ನು ಹಿಡಿಯಲು ಯತ್ನಿಸಿದಾಗ ಕಾರನ್ನು ಹಾಯಿಸಿ ಕೊಲೆಗೆ ಯತ್ನಿಸಿದ ಬಗ್ಗೆ ಕಾವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆಕಾಶಭವನ್ ಶರಣ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಇಂದು ಮಧ್ಯಾಹ್ನ ಆರೋಪಿ ಜಪ್ಪು ಕುದ್ಪಾಡಿಯಲ್ಲಿದ್ದಾನೆಂಬ ಮಾಹಿತಿ ಹಿನ್ನೆಲೆಯಲ್ಲಿ ಬಂಧನಕ್ಕೆ ಯತ್ನಿಸಿದ್ದರು.
ಆಕಾಶಭವನ್ ಶರಣ್ ಮೇಲೆ ಮಂಗಳೂರು, ಉಡುಪಿಯಲ್ಲಿ ೨೦ಕ್ಕೂ ಹೆಚ್ಚು ಪ್ರಕರಣಗಳಿದ್ದು, ನಟೋರಿಯಸ್ ರೌಡಿಯಾಗಿದ್ದಾನೆ. ಫೈನಾನ್ಸರ್ ಸುರೇಂದ್ರ ಬಂಟ್ವಾಳ್ ಪ್ರಕರಣದಲ್ಲಿ ಜೈಲಿನಲ್ಲಿದ್ದುಕೊಂಡೇ ಸುಪಾರಿ ಪಡೆದು ತನ್ನ ಸಹಚರರ ಮೂಲಕ ಕೊಲೆ ನಡೆಸಿದ್ದ. ಸುಳ್ಯದಲ್ಲಿ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದಲ್ಲಿಯೂ ಸುಪಾರಿ ಪಡೆದು ತನ್ನ ಸಹಚರರ ಮೂಲಕ ಮಾಡಿಸಿದ್ದ ಎನ್ನುವುದು ತನಿಖೆಯಲ್ಲಿ ಸಾಬೀತಾಗಿತ್ತು.