ಕಾಲುಜಾರಿ ನದಿಗೆ ಬಿದ್ದು ಮಹಿಳೆ ಮೃತ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರೀ ಮಳೆಗೆ ಮೊದಲ ಬಲಿ ಭದ್ರಾ ನದಿಯಲ್ಲಿ ಬಿದ್ದಿದೆ. ನದಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಕಳಸ ತಾಲೂಕಿನಿಂದ ವರದಿಯಾಗಿದೆ
ಆಸ್ಪತ್ರೆಗೆ ಹೋಗಿ ಬರುವುದಾಗಿ ತೆರಳಿದ್ದ ಶಾರದಾ ಎಂಬಾಕೆ ಶವವಾಗಿ ಸಿಕ್ಕಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆ ಭದ್ರಾ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಜಿಲ್ಲೆಯ ಕಳಸ ಪಟ್ಟಣ ಸಮೀಪದ ಗೇರುತೋಟ ಎಂಬಲ್ಲಿ ಘಟನೆ ನಡೆದಿದ್ದು, ಅದೇ ಗ್ರಾಮದ ನಿವಾಸಿ ಶಾರದಾ(55) ಮೃತ ಮಹಿಳೆಯಾಗಿದ್ದಾರೆ. ಜುಲೈ 16 ರಂದು ಶಾರದಾ ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದರು. ಆದರೆ ಶಾರದಾ ಮತ್ತೆ ಮನೆಗೆ ಹಿಂದಿರುಗಿರಲಿಲ್ಲ, ಕುಟುಂಬಸ್ಥರು ಕಳಸ ಪೊಲೀಸರಿಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇಂದು ಬೆಳಗ್ಗೆ ಗೇರು ತೋಟ ಸಮೀಪದಲ್ಲಿ ಹರಿಯುವ ಭದ್ರಾ ನದಿಯಲ್ಲಿ ಮಹಿಳೆಯ ಶವವನ್ನುಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಧರ್ಮಸ್ಥಳ ವಿಪತ್ತು ನಿರ್ವಹಣ ತಂಡದವರ ನೆರವಿನಿಂದ ನದಿಯಲ್ಲಿದ್ದ ಶವವನ್ನು ಹೊರ ತೆಗೆದಿದ್ದಾರೆ. ಆಸ್ಪತ್ರೆಗೆ ಹೋಗಿ ಹಿಂದಿರುಗುವಾಗ ಮಹಿಳೆ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.