ಕಾಲ ತಡವಾಗಲು ರಾಹು ಕಾರಣ!
ಸಂಸಾರದಲ್ಲಿ ಸೋಮಾರಿತನ’ ಎಂಬ ಬೈಗುಳ ಆಗಾಗ ಬಳಕೆಯಾಗುತ್ತದೆ. ಪ್ರತಿಯೊಬ್ಬರ ದೃಷ್ಟಿಯಲ್ಲೂ ಇನ್ನೊಬ್ಬರು ಸೋಮಾರಿ. ಅದರಲ್ಲೂ ತನ್ನ ಗಂಡನಷ್ಟು ಸೋಮಾರಿ ಯಾರೂ ಇಲ್ಲ ಎಂದು ವಿಶಾಲು ಆಗಾಗ ಹೇಳುತ್ತಾಳೆ. ವಿಶ್ವನಿಗೆ ಮೈ ಮುರಿಯಲು ಸಹ ಸೋಮಾರಿತನ. ಆಕಳಿಸಲು ಬೇಸರ! ಹತ್ತಾರು ಸಲ ಈ ಜಟಾಪಟಿ ಕೇಳಿದ ನಂತರ ವಿಶ್ವ ಮನೇಲಿ ಒಂದು ಮೀಟಿಂಗ್ ಇಟ್ಟುಕೊಂಡು ನನ್ನನ್ನು ಕರೆಸಿದ್ದ. “ನನ್ನ ಹೆಂಡ್ತೀನ ನಾನು ಎಂದೂ
ಮಾರಿ’ ಅಂತ ಕರೆದಿಲ್ಲ. ಅವಳ್ಯಾಕೆ ನನ್ನ `ಸೋಮಾರಿ’ ಅನ್ನಬೇಕು? ನಂಗೆ ವಾಪಸ್ ಬೈಯೋಕೂ ಬಿಡುವಿಲ್ಲ” ಎಂದ.
“ಯಾಕ್ರೀ ವಿಶಾಲು ಹೀಗೆ ಮಾಡ್ತೀರ? ಗಂಡ ಅಂದರೆ ಪತಿದೇವರು”
“ಗೊತ್ತು, ಅದಕ್ಕೇ ಆಗಾಗ ಅವರ ಮುಖಕ್ಕೆ ಮಂಗಳಾರತಿ ಮಾಡ್ತರ‍್ರೀನಿ” ಎಂದಳು ವಿಶಾಲೂ.
“ನಿಮ್ಮ ಗಂಡನ್ನ ಸೋಮಾರಿ ಅಂತ ಯಾಕೆ ಗೋಳು ಹೊಯ್ಕೊಳ್ತರ‍್ತೀರ? ಅವನು ಆಫೀಸಲ್ಲಿ ಪಾದರಸಕ್ಕಿಂತ ಚುರುಕಾಗಿ ಕೆಲ್ಸ ಮಾಡ್ತಾನೆ” ಎಂದೆ.
“ಹೌದೌದು, ಅವರ ಪಾದ ಚುರುಕಾಗಿ ಇರೋಷ್ಟು ತಲೆ ಚುರುಕಾಗಿಲ್ಲ. ಆಫೀಸಲ್ಲಿ ಹೆಣ್ಮಕ್ಕಳು ಸುತ್ತಲೂ ರ‍್ತಾರೆ, ಅಲ್ಲಿ ಚುರುಕಾಗಿ ಕೆಲ್ಸ ಮಾಡ್ತಾರೆ. ಆದ್ರೆ ಮನೇಲಿ ಯಾಕೆ ಅದೇ ಚುರುಕುತನ ಇಲ್ಲ?” ಎಂದು ಮರು ಸವಾಲು ಎಸೆದಳು. ನನಗೆ ಅದೂ ನಿಜ ಇರಬಹುದು ಎನ್ನಿಸಿತು.
“ಮನೇಲಿ ಎಲ್ಲಿ ಸೋಮಾರಿತನ ಪಟ್ಟಿದ್ದಾನೆ?” ಎಂದು ವಿಶಾಲೂನ ಕೆಣಕಿದೆ.
“ಬೆಳಗ್ಗೆ ೬ ಗಂಟೆಗೆ ಏಳಿ ಅಂತೀನಿ, ಅವರು ಏಳೋದೇ ೭ ಗಂಟೆಗೆ. ೬ಕ್ಕೆ ಏಳ್ಬೇಕು”
“ಅದ್ಹೆಂಗಾಗುತ್ತೆ ವಿಶಾಲು? ೬ಕ್ಕೆ ಏಳ್ಬೇಕಾದ್ರೆ ೭ಕ್ಕೆ ಎಂಟು ಬೇಕಾಗುತ್ತೆ. ೮ಕ್ಕೆ ಒಂಬತ್ತು ಬೇಕಾಗುತ್ತೆ” ಎಂದು ಕೈಲಾಸಂ ಜೋಕನ್ನು ನೆನಪು ಮಾಡಿದೆ.
“ನಿಮಗೆ ನಿಮ್ಮ ಫ್ರೆಂಡ್ ಬಗ್ಗೆ ಪಾರ್ಟಿ ಫೀಲಿಂಗ್ಸ್ ಜಾಸ್ತಿ. ತಪ್ಪಿದ್ದರೂ ಅವರಿಗೆ ಸಪೋರ್ಟ್ ಮಾಡ್ತಾ ಇದ್ದೀರ” ಎಂದು ಗೊಣಗುತ್ತಾ ವಿಶಾಲು ಕಾಫಿ ತರಲು ಒಳಗಡೆ ಹೋದಳು. ವಿಶ್ವ ನನ್ನ ಮುಖ ನೋಡಿದ.
“ಯಾಕೋ ಉಗಿಸ್ಕೋತೀಯ ನಿತ್ಯ? ಬೇಗ ಏಳೋಕೆ ಏನು ಕಷ್ಟ?” ಎಂದೆ.
“ರಾತ್ರಿ ಮಲಗೋದೇ ಲೇಟಾದ್ರೆ ಬೆಳಗ್ಗೆ ಬೇಗ ಏಳೋಕೆ ಹೆಂಗಾಗುತ್ತೆ?”
“ರಾತ್ರಿ ಯಾಕೆ ಲೇಟಾಗುತ್ತೆ?”
“ಪ್ರತಿ ರಾತ್ರಿ ಮಲಗೋ ಮೊದಲು ೩೦ ನಿಮಿಷ ಜಗಳ ಮಾಡೋ ಅಭ್ಯಾಸ ನನ್ನ ಹೆಂಡ್ತಿಗೆ. ಸಮಯಕ್ಕೆ ಸರಿಯಾಗಿ ಮನೆಗೆ ದಿನಸಿ ತಂದ್ಹಾಕೊಲ್ಲ ಅಂತ ಜಗಳ ಶುರುವಾಗುತ್ತೆ. ಹಬ್ಬಕ್ಕೆ ಮುಂಚಿತವಾಗಿ ಬಟ್ಟೆ ಕೊಳ್ಳೊಲ್ಲ ಅಂತ ರೇಗಾಡ್ತಾಳೆ”
“ತಡವಾದ್ರೆ ಅದರಿಂದ ಏನಾಗುತ್ತೆ?” ಎಂದೆ.
“ಹಬ್ಬಕ್ಕೆ ಮುಂಚಿತವಾಗಿ ಸೀರೆ ಕೊಳ್ಳಲಿಲ್ಲ ಅಂದ್ರೆ ಬ್ಲೌಸ್ ರೆಡಿಯಾಗೊಲ್ವಂತೆ. ಬ್ಲೌಸ್ ರೆಡಿಯಾಗೋಕೆ ಒಂದು ತಿಂಗಳು ಬೇಕಂತೆ” ಎಂದು ವಿಶ್ವ ನಿಟ್ಟುಸಿರಿಟ್ಟ.
ವಿಶಾಲು ಕಾಫಿ ತಂದು ಮುಂದಿಟ್ಟಳು. ಅವಳಿಗೆ ನಮ್ಮ ಮಾತು ಕೇಳಿಸಿತ್ತು.
“ಹೌದು, ಬ್ಲೌಸ್ ಹೊಲಿಯೋಕೆ ಒಂದು ತಿಂಗಳು ಬೇಕಾಗುತ್ತೆ” ಎಂದಳು.
“ಅಲ್ಲ, ಬ್ಲೌಸ್‌ನ ಅಳತೇನೇ ಒಂದಡಿ. ಅದಕ್ಕೆ ಯಾಕೆ ಒಂದು ತಿಂಗಳು ಬೇಕಾಗುತ್ತೆ? ಒಂದು ತಿಂಗಳಲ್ಲಿ ನಾಲ್ಕು ಚದರದ ಮನೆ ಕಟ್ಟಿ ಗೃಹಪ್ರವೇಶ ಮಾಡಬಹುದು” ಎಂದೆ.
“ಮನೆ ಕಟ್ಟಬಹುದು, ಆದ್ರೆ ಬ್ಲೌಸ್ ಹೊಲಿಯೋಕೆ ಆಗೋದಿಲ್ಲ. ನಿಮಗೆ ಸಾಹಿತ್ಯದಲ್ಲಿರೋ ಪ್ರಕಾರಗಳು ಮಾತ್ರ ಗೊತ್ತು. ಬ್ಲೌಸ್ ಫ್ಯಾಷನ್ ಪ್ರಕಾರಗಳು ಗೊತ್ತಾ?”
ಇಂಥ ಪ್ರಶ್ನೆ ಯಾರೂ ಹಾಕಿರಲಿಲ್ಲ. ನಾನು ಸೋಲುತ್ತಿರುವೆ ಎನ್ನಿಸಿತು. ಗೊತ್ತಿಲ್ಲ ಎಂದು ತಲೆ ಆಡಿಸಿದೆ. ವಿಶಾಲೂ ವಿವರಿಸಿದಳು.
“ಬೋಟ್ ನೆಕ್, ಬೋ ನೆಕ್, ಹೈ ನೆಕ್, ಕಾಲರ್ ನೆಕ್, ಸ್ಟಾರ್ ನೆಕ್ ಪ್ರಕಾರಗಳು ಗೊತ್ತಾ ?” ಎಂದು ಸವಾಲೆಸೆದಳು.
ಗೊತ್ತಿಲ್ಲವೆಂದು ತಲೆ ಆಡಿಸಿದೆ.
“ಕಠೋರಿ ಬ್ಲೌಸ್, ರಾಗ್‌ಲಾನ್, ಪಫ್ ಹ್ಯಾಂಡ್, ಬ್ಯಾಕ್‌ಟೈ, ಕಿಟಕಿ ಸರಳು ಬ್ಲೌಸು” ಎಂದು ಹೇಳುತ್ತಾ ಹೋದಾಗ ನನಗೆ ಆಶ್ಚರ್ಯವಾಯಿತು.
“ಎಂಬ್ರಾಯಿಡರಿ, ಸ್ಮಾಕಿಂಗು, ಥ್ರಿಲ್ಲು, ಲೈನಿಂಗು ಅಂತ ತುಂಬಾ ಕೆಲ್ಸ ಇರುತ್ತೆ. ಒಂದು ಬ್ಲೌಸ್ ಹೊಲಿಯೋ ಟೈಮಲ್ಲಿ ನಿಮ್ಮ ೧೦ ಷರಟು ಹೊಲಿದು ಎಸೆಯಬಹುದು” ಎಂದಳು.
ಜಗಳದ ಟಾಪಿಕ್ ಬ್ಲೌಸ್‌ಗೆ ವಿಷಯಾಂತರ ಆಗ್ತಿದೆ ಎನ್ನಿಸಿ ಮತ್ತೆ ಲೈನಿಗೆ ಎಳೆದೆ.
“ವಿಶ್ವ ಎಲ್ಲೆಲ್ಲಿ ತಡ ಮಾಡ್ತಾನೆ?” ಎಂದು ಕೇಳಿದೆ.
“ನಿಮ್ಮ ಫ್ರೆಂಡು ಕಳೆದ ಭಾನುವಾರ ಸಂಜೆ ೪ ಗಂಟೆಗೆ ಒಂದು ಸಿನಿಮಾಗೆ ರ‍್ಕೊಂಡ್ಹೋಗ್ತೀನಿ ಅಂತ ಅಂದಿದ್ರು. ಅವರು ಬಂದಿದ್ದೇ ರಾತ್ರಿ ಏಳೂವರೆ ಗಂಟೆಗೆ. ಯಾಕೆ ಅಂತ ನೀವೇ ಕೇಳಿ” ಎಂದಳು.
“ವಿಶ್ವ, ಹೀಗೆಲ್ಲಾ ಮಾಡ್ಬರ‍್ದು. ೪ ಗಂಟೆಗೆ ಪ್ರಾಮಿಸ್ ಮಾಡಿ ನೀನು ಏಳೂವರೆ ಗಂಟೆಗೆ ಬರೋಕೆ ಮಂತ್ರೀನಾ, ಎಂ.ಎಲ್.ಎ.ನಾ? ಮತದಾರನಾಗಲಿ, ಮಡದಿಯಾಗಲಿ ನಿನ್ನ ಕ್ಷಮಿಸೊಲ್ಲ” ಎಂದೆ.
ಆಗ ವಿಶ್ವ ನೈಜ ಕಾರಣ ಹೇಳಿದ.
“ನಾನು ನನ್ನ ಫ್ರೆಂಡ್ ಮೋಹನನ ಮನೆಗೆ ಹೋಗಿದ್ದೆ. ಭಾನುವಾರದ ದಿನ ಸಂಜೆ ೪.೩೦ ಗಂಟೆಗೆ ರಾಹುಕಾಲ ಶುರುವಾಗುತ್ತೆ. ಅವನ ಹೆಂಡ್ತಿ ವಾಪಸ್ ಮನೆಗೆ ಹೋಗಲು ಬಿಡ್ಲಿಲ್ಲ. ಈಗ ರಾಹುಕಾಲ ಶುರುವಾಗಿದೆ. ಆಚೆಕಡೆ ಹೋಗ್ಬೇಡಿ, ಒನ್ ವೇನಲ್ಲಿ ರಾಂಗ್‌ಸೈಡಲ್ಲಿ ವೆಹಿಕಲ್ಸ್ ಬಂದು ಗುದ್ದಿದ್ರೆ ಕಷ್ಟ ಆಗುತ್ತೆ. ರಾಹುಕಾಲದಲ್ಲೇ ಆ್ಯಕ್ಸಿಡೆಂಟ್‌ಗಳು ಜಾಸ್ತಿ ಆಗೋದು ಅಂತೆಲ್ಲಾ ಹೆದರಿಸಿದ್ಲು. ವಿಶಾಲು ಮಾಂಗಲ್ಯ ಭದ್ರಪಡಿಸೋದು ನನ್ನ ಆದ್ಯ ಕರ್ತವ್ಯ ಅನ್ನಿಸಿ ರಾಹುಕಾಲ ಮುಗಿಯೋವರೆಗೂ ಅಲ್ಲೇ ಇದ್ದೆ. ತಡ ಆಯ್ತು”
“ಆಯ್ತು, ೪.೩೦ ಯಿಂದ ೬ರವರೆಗೆ ರಾಹುಕಾಲ. ೬ ಗಂಟೆ ಮುಗಿದ ತಕ್ಷಣ ಬರ‍್ಬೇಕಲ್ಲ?”
ವಿಶ್ವನ ಬಳಿ ಅದಕ್ಕೂ ಉತ್ತರ ಸಿದ್ಧವಾಗಿತ್ತು.
“೬ಕ್ಕೇ ನಾನು ಹೊರಟೆ. ಆದ್ರೆ ನನ್ನಂತೆ ತುಂಬಾ ಜನ ರಾಹುಕಾಲ ಮುಗಿಸ್ಕೊಂಡು ೬ಕ್ಕೇ ಗಾಡೀನ ರಸ್ತೆಗೆ ಇಳಿಸಿ ವಿಪರೀತ ಟ್ರಾಫಿಕ್ ಜಾಂ ಮಾಡಿದ್ರು” ಎಂದ. ವಿಶಾಲು ಒಪ್ಪಲಿಲ್ಲ.
“ಪ್ರತಿ ಐದು ನಿಮಿಷಕ್ಕೂ ಒಂದೊಂದು ಏರೋಪ್ಲೇನು ಟೇಕಾಫ್ ಆಗ್ತಾ ಇರುತ್ತೆ. ರಾಹುಕಾಲ ನೋಡ್ತಿದ್ರೆ ಏರೋಪ್ಲೇನ್ ಓಡ್ಸೋಕೆ ಆಗೋದೇ ಇಲ್ಲ” ಎಂದು ಆಕಾಶಯಾನದ ಉದಾಹರಣೆ ಕೊಟ್ಟಳು. ನಾನು ವಿಶ್ವನಿಗೆ ಸಮಾಧಾನ ಮಾಡಿದೆ.
“ಸರಿಯಾದ ಟೈಮ್ಗೆ ನಿನ್ನ ಮನೆಗೆ ನೀನು ಬಂದ್ಬಿಡಪ್ಪ” ಎಂದಾಗ ಅವನು ಮತ್ತೆ ಹಳೇ ವಿಷ್ಯಕ್ಕೇ ಜೋತುಬಿದ್ದ.
“ನೋಡು, ನಾನು ಒಳ್ಳೇ ಟೈಮಿಗೆ ಬಂದಾಗ್ಲೇ ಜಗಳ ಆಗುತ್ತೆ. ಇನ್ನು ರಾಹುಕಾಲದಲ್ಲಿ ಬಂದ್ರೆ ಜಗಳ ಆಗೊಲ್ವ?” ಎಂದ.
ಜಗಳ ಬಗೆಹರಿಯುವಂತೆ ಕಾಣಲಿಲ್ಲ. ಮಂಗಳವಾರ ಮಧ್ಯಾಹ್ನದ ಸಮಯ ೩ ಗಂಟೆ ಆಗ್ತಿತ್ತು.
“ನಾನು ಹೊರಡ್ತೀನಿ ೩ ಗಂಟೆ ಆಗ್ತಿದೆ” ಎಂದೆ.
“ಟಿಫನ್ ಮಾಡ್ಕೊಂಡು ಹೋಗಿ” ಎಂದಳು ವಿಶಾಲು.
“ಇಲ್ಲ, ಮಂಗಳವಾರ ೩ ಗಂಟೆಗೆ ರಾಹುಕಾಲ ಶುರುವಾಗುತ್ತೆ, ತಡ ಮಾಡಿದ್ರೆ ನಿಮ್ಮ ಹಾಗೆ ನನ್ನ ಹೆಂಡ್ತಿ ಬೈತಾಳೆ” ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡೆ.