'ಕಾವೇರಿ ಕಪ್' ಮಲ್ಫೆ ಮಡಿಲಿಗೆ
ಶ್ರೀರಂಗಪಟ್ಟಣ: ಡಿ.08 ರಿಂದ 10 ರ ವರೆಗೆ ಪಟ್ಟಣದ ಶ್ರೀರಂಗನಾಥ ದೇಗುಲದ ಆವರಣದಲ್ಲಿ ಸ್ಮಾಷರ್ಸ್ ಕ್ರಿಕೆಟರ್ಸ್ ವತಿಯಿಂದ ನಡೆದ ರಾಷ್ಡ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ "ಕಾವೇರಿ ಕಪ್ 2023' ಉಡುಪಿಯ ಮಲ್ಫೆ ತಂಡದ ಪಾಲಾಯಿತು.
ಭಾನುವಾರ ರಾತ್ರಿ ತೀವ್ರ ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡವನ್ನು ಮಣಿಸಿದ ಮಲ್ಫೆ ಅರಫಾ ರಿಯಲ್ ವಾರಿಯರ್ಸ್ ಕ್ರಿಕೆಟರ್ಸ್ ತಂಡ ಚಾಂಪಿಯನ್ ಆಗಿ ಗೆಲುವಿನ ನಗೆ ಬೀರಿತು.
ಟೂರ್ನಿಯಲ್ಲಿ ಮೈಸೂರು, ಪಾಂಡವಪುರ, ಬೆಂಗಳೂರು, ಮಂಗಳೂರು, ಉಡುಪಿ, ನಂಜನಗೂಡು, ತಮಿಳುನಾಡು ಸೇರಿದಂತೆ ಪ್ರಮುಖ 14 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಅಂತಿಮವಾಗಿ ಸೆಮಿಫೈನಲ್ ನಲ್ಲಿ ಅರಫಾ ರಿಯಲ್ ಫೈಟರ್ ತಂಡ ಬೆಂಗಳೂರಿನ ಜಯಕರ್ನಾಟಕ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರೆ, ಬೆಂಗಳೂರಿನ ಮೈಟಿ ಕ್ರಿಕೆಟರ್ಸ್ ಅನ್ನು ಮಣಿಸಿ ಫ್ರೆಂಡ್ಸ್ ಕ್ರಿಕೆಟರ್ಸ್ ಫೈನಲ್ ಗೆ ಲಗ್ಗೆಯಿಟ್ಟಿತ್ತು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅರಫಾ ರಿಯಲ್ ವಾರಿಯರ್ಸ್ ತಂಡ ನಿಗಧಿತ 08 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 58 ರನ್ ಸೇರಿಸಿ 59 ರನ್ ಗಳ ಗುರಿಯನ್ನು ಫ್ರೆಂಡ್ಸ್ ಕ್ರಿಕೆಟರ್ಸ್ ಗೆ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಫ್ರೆಂಡ್ಸ್ ಕ್ರಿಕೆಡರ್ಸ್ ಆರಂಬದಲ್ಲಿ ಅಬ್ಬರಿಸಿ ಗೆಲುವಿನ ಮುನ್ಸೂಚನೆ ನೀಡಿತ್ತಾದರೂ, ಪ್ರಮುಖ ದಾಂಡಿಗ ಸಾಗರ್ ಭಂಡಾರಿ ವಿಕೆಟ್ ಪತನವಾಗುತ್ತಿದ್ದಂತೆಯೇ ಗೆಲುವಿನ ಕನಸು ಕಮರಿ ಹೋದಂತಾಯಿತು. ಅಂತಿಮವಾಗಿ ಮಲ್ಫೆ ಕ್ರಿಕೆಟಿಗರ ಕರಾರುವಾಕ್ ಬೌಲಿಂಗ್ ಧಾಳಿಗೆ ನಲುಗಿದ ಫ್ರೆಂಡ್ಸ್ ಕ್ರಿಕೆಟರ್ಸ್ ಎಂಟು ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಕೇವಲ 42 ರನ್ ಗಳಿಸುವ ಮೂಲಕ 18 ರನ್ ಗಳ ಸೋಲನೊಂದಿಗೆ ಟೂರ್ನಿಯಲ್ಲಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಸೋಲಿನಲ್ಲೂ ದಾಖಲೆ ಬರೆದ ಫ್ರೆಂಡ್ಸ್ ಕ್ರಿಕೆಟರ್ಸ್ ನ ಪ್ರಮುಖ ದಾಂಡಿಗ ಸಾಗರ್ ಭಂಡಾರಿ ತಾನಾಡಿದ ಐದು ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆಯುವುದರ ಜೊತೆಗೆ ಬ್ಯಾಟಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ 'ಮ್ಯಾನ್ ಆಫ್ ದಿ ಸೀರೀಸ್" ಪ್ರಶಸ್ತಿಯೊಂದಿಗೆ ಆಕರ್ಷಕ ಟ್ರೋಫಿ, ಕ್ರೀಡಾ ಸೈಕಲ್ ಜೊತೆಗೆ 10 ಸಾವಿರ ನಗದನ್ನು ತನ್ನದಾಗಿಸಿಕೊಂಡರು.ಪ್ರಥಮ ಸ್ಥಾನ ಪಡೆದ ಮಲ್ಫೆ ತಂಡ 3 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ ಪಡೆದರೆ, ದ್ವಿತೀಯ ಸ್ಥಾನ ಪಡೆದ ಬೆಂಗಳೂರು ತಂಡ 1.5 ಲಕ್ಷ ನಗದು ಹಾಗೂ ಟ್ರೋಫಿ ಪಡೆದು ಸಂಭ್ರಮಿಸಿದರು.ಇದಕ್ಕೂ ಮುನ್ನ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಪ್ರತ್ಯೇಕವಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಆಟಗಾರರಿಗೆ ಹಾಗೂ ಆಯೋಜಕರಿಗೆ ಶುಭ ಹಾರೈಸಿ ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಕ್ರೀಡಾಸ್ಪೂರ್ತಿ ಮೆರೆಯುವಂತೆ ಕಿವಿ ಮಾತು ಹೇಳಿದರು.
ಪುರಸಭಾ ಸದಸ್ಯರಾದ ಎಸ್.ಪ್ರಕಾಶ್, ಎಂ.ಎಲ್.ದಿನೇಶ್, ಎಸ್.ಟಿ.ರಾಜು ಸೇರಿದಂತೆ ಟೂರ್ನಿಯ ಆಯೋಜಕರುಗಳಾದ ಎಸ್.ಜಯಸಿಂಹ, ಎಸ್.ಜಿ.ವೆಂಕಟರಾಮು ಬಾಲರಾಜ್, ಮಹದೇವು, ಸುಬ್ರಹ್ಮಣ್ಯ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.