ಕಾವೇರಿ ನದಿಗಿಳಿದು ರೈತರ ಪ್ರತಿಭಟನೆ
ಶ್ರೀರಂಗಪಟ್ಟಣ : ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು ಹರಿಸುತ್ತಿರುವುದಾಗಿ ಆರೋಪಿಸಿ ರೈತರು ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.
ಭೂಮಿತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದ 50 ಕ್ಕೂ ಹೆಚ್ಚು ರೈತರು, ರಾಜ್ಯ ಸರ್ಕಾರ ತಮಿಳುನಾಡಿನ ಓಲೈಕೆಗಾಗಿ ರಾಜ್ಯದ ರೈತರ ಬದುಕಿಗೆ ಚಪ್ಪಡಿ ಕಲ್ಲು ಎಳೆಯಲು ಮುಂದಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಇಲ್ಲಿನ ರೈತರ ಬೆಳೆಗಳಿಗೆ, ಜನ- ಜಾನುವಾರುಗಳಿಗೆ ಕುಡಿಯಲು ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರಿಲ್ಲ. ಅಂತರ್ ಜಲ ತೀವ್ರ ಪ್ರಮಾಣದಲ್ಲಿ ಕುಸಿದು ಬೋರ್ ಗಳಲ್ಲಿ ನೀರು ಬತ್ತಿ ಹೋಗಿ ಬರಗಾಲದ ಪರಿಸ್ಥಿತಿ ನಿರ್ಮಾಣಗೊಂಡು ರೈತರು ಕಂಗಾಲಾಗಿದ್ದಾರೆ.
ರೈತರ ಬೆಳೆಗಳ ರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸದ ಸರ್ಕಾರ, ತಮಿಳುನಾಡಿಗೆ ನೀರು ಹರಿಸಿ ರೈತ ವಿರೋಧಿ ಎನಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರುಗಳಿಗೆ ರಾಜ್ಯ ಮತ್ತು ಜಿಲ್ಲೆಯ ರೈತರ ಬಗ್ಗೆ ಕಾಳಜಿಯಿಲ್ಲ.
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಚಣವೇ ನಿಲ್ಲಿಸಬೇಕು. ಬೆಳೆದು ನಿಂತಿರುವ ಬೆಳೆಗಳನ್ಬು ರಕ್ಷಿಸಿಕೊಳ್ಳಲು ಹಾಗೂ ಜನ - ಜಾನುವಾರುಗಳಿಗೆ ಕುಡಿಯಲು ತಕ್ಷಣವೇ ಎಲ್ಲಾ ನಾಲೆಗಳಿಗೂ ನೀರು ಹರಿಸಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.