ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಾಶ್ಮೀರದ ಜನಾದೇಶ ಹರಿಯಾಣ ಫಲಿತಾಂಶ ವಿಭಿನ್ನ

02:30 AM Oct 09, 2024 IST | Samyukta Karnataka

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾದ ಮೇಲೆ ಮೊದಲ ವಿಧಾನಸಭೆ ಚುನಾವಣೆ ನಡೆದಿದ್ದರಿಂದ ಜನ ಸಹಜವಾಗಿ ಸ್ಥಳೀಯ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಅದು ಕಾಶ್ಮೀರದ ಎಲ್ಲ ಸಮಸ್ಯೆಗಳಿಗೆ ಜನಮತಗಣನೆ ಆಗುವುದಿಲ್ಲ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದು ಸಂಸತ್ತು. ಅದಕ್ಕೆ ಅನುಮೋದನೆ ನೀಡಿರುವುದು ಸುಪ್ರೀಂ ಕೋರ್ಟ್. ಮತದಾನದ ಮೂಲಕ ಅದನ್ನು ಪ್ರಶ್ನಿಸಲು ಬರುವುದಿಲ್ಲ. ಈಗ ಚುನಾವಣೆಯಲ್ಲಿ ಜನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದರೂ ಗಡಿ ರಕ್ಷಣೆ ಮತ್ತು ಕಾನೂನು ಪರಿಪಾಲನೆ ಕೇಂದ್ರದ ಕೈಯಲ್ಲೇ ಇರುತ್ತದೆ ಎಂದು ಲೆಫ್ಟಿನೆಂಟ್ ಗೌರ್ನರ್ ಸ್ಪಷ್ಟಪಡಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಲೆಫ್ಟಿನೆಂಟ್ ಗೌರ್ನರ್‌ಗೆ ಇನ್ನುಮುಂದೆ ಕೆಲಸ ಇರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಸೇನೆ ರಾಜ್ಯದ ಆಡಳಿತಕ್ಕೆ ಬರುವುದಿಲ್ಲ. ಕಾಶ್ಮೀರದಲ್ಲಿ ಸೇನೆ ಯಾವ ರೀತಿ ಇರಬೇಕೆಂದು ಶಾಸಕರು ನಿರ್ಧರಿಸಲು ಬರುವುದಿಲ್ಲ. ೯೦ ಶಾಸಕರು ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ನೋಡಿಕೊಳ್ಳಬೇಕೆ ಹೊರತು ಗಡಿ ರಕ್ಷಣೆಯ ವಿಷಯದಲ್ಲಿ ಕೈಹಾಕಲು ಬರುವುದಿಲ್ಲ. ಈಗ ಅಲ್ಲಿಯ ಜನ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದಕ್ಕೂ ವಿಧಿ ೩೭೧ ರದ್ದಾಗಿರುವುದಕ್ಕೂ ಸಂಬಂಧವಿಲ್ಲ.
ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಹೆಚ್ಚಿನ ಸೀಟು ಲಭಿಸಿದ್ದರೆ ಜಮ್ಮುವಿನಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಕಂಡು ಬಂದಿದೆ. ಯಾವುದೇ ರಾಜಕೀಯ ಪಕ್ಷ ಸರ್ಕಾರ ರಚಿಸಿದರೂ ದೇಶದ ರಕ್ಷಣೆಯ ಹೊಣೆಗಾರಿಕೆಯೂ ಇದ್ದೇ ಇರುತ್ತದೆ. ಈ ವಿಷಯದಲ್ಲಿ ಪಕ್ಷ ರಾಜಕಾರಣ ಬರಬಾರದು. ಅಲ್ಲದೆ ಈ ವಿಷಯದಲ್ಲಿ ವಾಕ್ ಸ್ವಾತಂತ್ರ್ಯದ ಮಾತು ಬರುವುದಿಲ್ಲ. ಕೇಂದ್ರದ ನೀತಿ ನಿಯಮಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಬಹುದು. ಆದರೆ ದೇಶದ ರಕ್ಷಣೆ ವಿಷಯ ಬಂದಾಗ ಒಂದು ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು. ಈಗ ಕಾಶ್ಮೀರ ದೇಶದ ಅವಿಭಾಜ್ಯ ಅಂಗ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ವಿಷಯದಲ್ಲಿ ಬೇರೆ ದೇಶದವರು ಮೂಗು ತೂರಿಸಲು ಅವಕಾಶ ನೀಡುವುದಿಲ್ಲ. ಅದೇರೀತಿ ನಮ್ಮ ದೇಶದೊಳಗೆ ಇರುವ ರಾಜಕೀಯ ಪಕ್ಷಗಳೂ ನಮ್ಮ ದೇಶದ ಗಡಿ ರಕ್ಷಣೆ ವಿಷಯದಲ್ಲಿ ಒಂದೇ ನಿಲುವು ತಳೆಯಬೇಕು. ಇದರಲ್ಲಿ ಮುಕ್ತ ವೈಚಾರಿಕತೆ ಮತ್ತಿತರ ಮಾತುಗಳಿಗೆ ಅವಕಾಶ ಇರುವುದಿಲ್ಲ. ಕಾಶ್ಮೀರದಲ್ಲಿ ಚುನಾವಣೆಯ ಮೂಲ ಉದ್ದೇಶ ಜನ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ದಿನನಿತ್ಯ ಆಡಳಿತ ನೋಡಿಕೊಳ್ಳುವುದಕ್ಕೆ ಹೊರತು ಗಡಿ ರಕ್ಷಣೆಯಲ್ಲ. ಅದು ಸೇನೆಗೆ ಬಿಟ್ಟ ವಿಷಯ. ಅದರಲ್ಲಿ ಜನಪ್ರತಿನಿಧಿಗಳ ಪಾತ್ರ ಏನೂ ಇರುವುದಿಲ್ಲ.
ಕಾಶ್ಮೀರದ ಚುನಾವಣೆಯೇ ಬೇರೆ ಹರಿಯಾಣ ಮತದಾನವೇ ಬೇರೆ. ಹರಿಯಾಣದಲ್ಲಿ ಬಿಜೆಪಿ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ೨೦೧೯ರಲ್ಲಿ ಶೇ. ೩೬.೫ರಷ್ಟು ಮತಗಳಿಸಿತ್ತು. ಈಗ ಶೇ.೩೯ ರಷ್ಟು ಮತಗಳಿಸಿದೆ. ಹರಿಯಾಣದಲ್ಲಿ ಜಾಟ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಕಾಂಗ್ರೆಸ್ ಪಕ್ಷ ಈ ಸಮುದಾಯವನ್ನು ನಂಬಿಕೊಂಡಿತ್ತು. ಬಿಜೆಪಿ ಜಾಟ್ ಸಮುದಾಯವನ್ನು ಹೊರತುಪಡಿಸಿ ಉಳಿದ ಸಮುದಾಯಗಳಾದ ಪಂಜಾಬಿ. ಒಬಿಸಿ, ರಜಪೂತ್, ಬನಿಯಾ ಸಮುದಾಯಗಳ ಬೆಂಬಲ ಪಡೆದುಕೊಂಡಿದೆ. ಮನೋಹರ್ ಲಾಲ್ ಕಟ್ಟರ್, ನಾಯಬ್ ಸಿಂಗ್ ಸೈನಿ ಹರಿಯಾಣ ನಾಯಕರು. ತಮ್ಮ ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಸಫಲರಾಗಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟುಗಳಿಸಲು ಸಾಧ್ಯವಾಗಿರಲಿಲ್ಲ. ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ವಿರುದ್ಧ ಇದ್ದವು. ಈಗ ರಾಜಕೀಯ ಲೆಕ್ಕಾಚಾರ ಬದಲಾಗಿದೆ. ಹರಿಯಾಣದಲ್ಲಿ ಇಂಡಿಯಾ ಒಕ್ಕೂಟದ ಇತರ ಪಕ್ಷಗಳು ಒಮ್ಮತದಿಂದ ಕೆಲಸ ಮಾಡಲಿಲ್ಲ ಎಂಬುದೂ ನಿಜ. ಆಮ್ ಆದ್ಮಿ ಪಕ್ಷ ಸ್ಪರ್ಧಿಸಿದ್ದು ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳು ಸೋಲಲು ಕಾರಣವಾಯಿತು ಎಂದು ಎಎಪಿ ಸಂಸದರೇ ಬಹಿರಂಗವಾಗಿ ಹೇಳಿದ್ದಾರೆ. ಇದು ಇಂಡಿಯಾ ಒಕ್ಕೂಟಕ್ಕೆ ಪಾಠ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಗೆ ಹರಿಯಾಣ ಗೆಲುವು ಮುಂಬರುವ ಮಹಾರಾಷ್ಟ್ರ. ಜಾರ್ಖಂಡ್, ದೆಹಲಿ ಚುನಾವಣೆಗಳು ಸಹಕಾರಿಯಾಗಬಹುದು. ಕಾಂಗ್ರೆಸ್‌ಗೆ ಕಾಶ್ಮೀರದ ಗೆಲುವನ್ನು ಅಸ್ತçವಾಗಬಹುದು. ವಿಧಾನಸಭೆಗೆ ಜನ ತಮಗೆ ಬೇಕಾದ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇರೀತಿ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಗಳು ವಿವಿಧ ದೃಷ್ಟಿಕೋನದಲ್ಲಿ ನಡೆಯುತ್ತವೆ. ರಾಷ್ಟ್ರೀಯ ಪಕ್ಷಗಳಿಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಜನರ ಬೆಂಬಲ ವಿಭಿನ್ನವಾಗಿರುತ್ತದೆ. ಹರಿಯಾಣದಲ್ಲೇ ಜನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಒಲವು ತೋರಿರಲಿಲ್ಲ. ಈಗ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ವಕ್ತಪಡಿಸಿದ್ದಾರೆ.

Next Article