ಕಾಶ್ಮೀರ ಕಣಿವೆ ಅರಳಿದ ಪ್ರಜಾತಂತ್ರ
ಕಾಶ್ಮೀರ ಕಣಿವೆಯಲ್ಲಿ ಕಳೆದ ೧೦ ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ಈಗ ಮೂರು ಹಂತಗಳಲ್ಲಿ ಮತದಾನ ಮುಕ್ತಾಯಗೊಂಡಿದೆ. ಉಗ್ರವಾದಿಗಳು ಅಲ್ಲಲ್ಲಿ ಘರ್ಷಣೆಗೆ ಕಾರಣವಾಗಿದ್ದನ್ನು ಬಿಟ್ಟರೆ ಚುನಾವಣೆ ಪ್ರಚಾರದಲ್ಲಿ ಎಲ್ಲೂ ಹಿಂಸಾಕೃತ್ಯ ನಡೆದಿಲ್ಲ ಎಂದ ಮೇಲೆ ಜನ ಪ್ರಜಾತಂತ್ರದ ಪರವಾಗಿದ್ದಾರೆ ಎಂಬುದು ಸ್ಪಷ್ಟ. ಶೇಕಡ ೬೩.೫ ಜನ ಮತ ಚಲಾಯಿಸಿದ್ದಾರೆ. ೨೦೧೪ ರಲ್ಲಿ ನಡೆದ ಚುನಾವಣೆಯಲ್ಲಿ ಶೇ. ೬೫.೭ ರಷ್ಟು ಜನ ಜನಾದೇಶ ನೀಡಿದ್ದರು. ಈ ಬಾರಿ ಕಡಿಮೆ ಮತದಾನ ಎಂದರೂ ಬದಲಾದ ಸನ್ನಿವೇಶದಲ್ಲಿ ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿರುವುದು ಶುಭ ಸೂಚನೆ. ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಶ್ಮೀರ ಕಣಿವೆ ಶಾಂತಿಯನ್ನು ಕಂಡಿರಲಿಲ್ಲ. ಪಾಕ್ ಉಗ್ರವಾದಿಗಳು ಕಾಶ್ಮೀರ ಕಣಿವೆ ಪ್ರೇಮಿಗಳ ಸ್ವರ್ಗವಾಗದಂತೆ ರಕ್ತ ಹರಿಸುತ್ತಲೇ ಬಂದಿದ್ದರು. ಈಗ ಇದಕ್ಕೆ ಪೂರ್ಣ ವಿರಾಮ ಬೀಳುವ ಕಾಲ ಸನ್ನಿಹಿತ. ಇದಕ್ಕೆ ಪ್ರಮುಖ ಕಾರಣ ಎಂದರೆ ಪಾಕ್ ಆರೋಪಗಳಿಗೆ ಬೇರೆ ಯಾವ ದೇಶವೂ ಬೆಂಬಲ ನೀಡುತ್ತಿಲ್ಲ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದು ಇಂದಿನ ಜನಾದೇಶದಿಂದ ಇಡೀ ಜಗತ್ತಿಗೆ ಬಹಿರಂಗಗೊಂಡಿದೆ. ಮತ ಎಣಿಕೆಯಲ್ಲಿ ಯಾವುದೇ ಪಕ್ಷ ಬಹುಮತ ಬಂದರೂ ಚಿಂತೆ ಇಲ್ಲ. ಕಾಶ್ಮೀರದ ಜನ ಈಗ ಮುಕ್ತವಾಗಿ ದೇಶದ ಇತರ ಭಾಗಗಳಲ್ಲಿ ಮುಕ್ತವಾಗಿ ಸಂಚರಿಸಬಹುದು ಹಾಗೂ ನೆಲೆಸಬಹುದು. ಅದೇರೀತಿ ಇತರ ರಾಜ್ಯಗಳ ಜನ ಕಾಶ್ಮೀರಕ್ಕೆ ಹೋಗಿ ಬರಬಹುದು. ಈ ಬದಲಾವಣೆಗೆ ಈಗ ಜನ ತಮ್ಮ ಮತಗಳ ಮೂಲಕ ಅಂಗೀಕಾರದ ಮುದ್ರೆ ಒತ್ತಿರುವುದು ಬಹಿರಂಗಗೊಳ್ಳಲಿದೆ.
ಹಿಂದೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಸಂವಿಧಾನವನ್ನು ಕಲ್ಪಿಸಲಾಗಿತ್ತು. ಇದನ್ನು ಕೈಬಿಡಬೇಕು ಎಂಬುದು ಹಲವು ದಶಕಗಳ ಕನಸು. ಅದನ್ನು ನನಸು ಮಾಡಿದ್ದಲ್ಲದೆ ಎಲ್ಲ ರಾಜ್ಯಗಳ ಹಾಗೆ ಇಲ್ಲೂ ಸ್ಥಳೀಯ ರಾಜ್ಯ ರಚನೆಗೊಳ್ಳುವಂತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಆಡಳಿತ ನಡೆಸುವುದರಿಂದ ಜನರಿಗೆ ಪ್ರಜಾತಂತ್ರ ಲಾಭ ಸಿಗಲಿದೆ. ಈ ಬದಲಾವಣೆ ಮುಂದಿನ ದಿನಗಳಲ್ಲಿ ಕಾಶ್ಮೀರದ ಚಿತ್ರವನ್ನೇ ಬದಲಿಸಲಿದೆ. ಬೇರೆ ರಾಜ್ಯಗಳ ಜನ ಅಲ್ಲಿ ನೆಲೆಸಲು ಆರಂಭಿಸಿದಾಗ ಉಗ್ರ ಸಂಘಟನೆಗಳಿಗೆ ಸ್ಥಳೀಯ ಬೆಂಬಲ ಸಿಗುವುದಿಲ್ಲ. ಜನ ಈ ಸಂಘಟನೆಗಳನ್ನು ದೂರವಿಡುವ ಕಾಲ ದೂರವಿಲ್ಲ. ಏಕೆಂದರೆ ಈ ಸಂಘಟನೆಗಳಿಗೆ ಹಿಂಸಾಚಾರವೇ ಮೂಲ ಮಂತ್ರ. ಇದು ಹೆಚ್ಚು ದಿನ ನಡೆಯುವುದಿಲ್ಲ ಎಂಬುದು ಎಲ್ಲೆಲ್ಲಿ ಉಗ್ರ ಸಂಘಟನೆಗಳು ತಲೆ ಎತ್ತಿವೆಯೋ ಅಲ್ಲೆಲ್ಲ ಸಾಬೀತಾಗಿ ಹೋಗಿದೆ. ಹಿಂಸಾಕೃತ್ಯದ ಮೂಲಕ ಸಾಮಾಜಿಕ ಬದಲಾವಣೆ ತರುತ್ತೇವೆ ಎಂದು ಭಾವಿಸುವುದು ನಾಚಿಕೆಗೇಡಿನ ಸಂಗತಿ. ಉಗ್ರವಾದಿಗಳು ಹೆಚ್ಚು ಸಂಘರ್ಷ ನಡೆಸಿದ್ದ ಶೋಪಿಯಾನ್, ಕುಲಗಾಂ, ಪುಲ್ವಾಮಾ, ಬಾರಾಮುಲ್ಲಾ ಗಳಲ್ಲೇ ಹೆಚ್ಚಿನ ಮತದಾನ ನಡೆದಿರುವುದೇ ಇದಕ್ಕೆ ಸಾಕ್ಷಿ. ಸ್ಥಳೀಯ ರಾಜಕೀಯ ಪಕ್ಷಗಳು ತಮ್ಮ ಹಿಂದಿನ ನೀತಿ-ಧೋರಣೆಗಳಿಗೆ ಜನ ಬೆಲೆ ಕೊಡುತ್ತಿಲ್ಲ ಎಂಬುದನ್ನು ಅರಿತರೆ ಒಳಿತು. ದೂರದ ಹಿಜ್ಬುಲ್ಲಾ ನಾಯಕನ ಹತ್ಯೆಗೆ ಇಲ್ಲಿ ಕಣ್ಣೀರು ಸುರಿಸಿದರೆ ಪ್ರಯೋಜನವಾಗುವುದಿಲ್ಲ. ಹಿಂದೆ ಭಾರತದ ಧ್ವಜ ಹಾರಿಸುವುದೇ ಕಷ್ಟವಾಗಿತ್ತು. ಈಗ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತಿದೆ. ಅಲ್ಲದೆ ಸ್ವತಂತ್ರ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆ ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆ. ಸ್ಥಳೀಯ ನಾಯಕರು ಯಾವುದೇ ಪಕ್ಷದಲ್ಲಿರಲಿ ಜನರ ಆಶೋತ್ತರಗಳಿಗೆ ಅನುಗುಣವಾಗಿ ತನ್ನ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವುದು ಸೂಕ್ತ. ಹೊಸ ಪೀಳಿಗೆ ಹಿಂದಿನ ಹೋರಾಟ ಅರ್ಥಹೀನ ಎಂಬುದನ್ನು ಮನದಟ್ಟು ಮಾಡಿಕೊಂಡಿದೆ. ಇಡೀ ದೇಶದಲ್ಲಾಗುತ್ತಿರುವ ಆರ್ಥಿಕ ಸಾಮಾಜಿಕ ಬದಲಾವಣೆಯಲ್ಲಿ ಕಾಶ್ಮೀರದ ಜನ ಸಕ್ರಿಯವಾಗಿ ಪಾಲ್ಗೊಳ್ಳಲು ಬಯಸುವುದು ಸ್ಪಷ್ಟ. ಇದಕ್ಕೆ ಸೂಕ್ತ ಅವಕಾಶ ಕಲ್ಪಿಸಿಕೊಡುವುದು ರಾಜಕೀಯ ನಾಯಕರ ಕರ್ತವ್ಯವೂ ಹೌದು. ಜನಮಾನಸದ ಇಚ್ಛೆಗೆ ವಿರುದ್ಧವಾಗಿ ಹೋಗುವ ಯಾವುದೇ ಸಂಘಟನೆ ಹೆಚ್ಚು ದಿನ ಉಳಿಯಲಾರದು. ಸ್ಪಷ್ಟ ಆರ್ಥಿಕ-ಸಾಮಾಜಿಕ ಧೋರಣೆ ಹೊಂದಿದ್ದ ನಕ್ಸಲ್ ವಾದಕ್ಕೆ ಜನ ಬೆಂಬಲ ಕುಸಿಯುತ್ತಿದೆ ಎಂದ ಮೇಲೆ ಉಗ್ರವಾದಕ್ಕೆ ಬೆಂಬಲ ಕಾಲಕ್ರಮೇಣ ಇಳಿಮುಖಗೊಳ್ಳುವುದು ದೊಡ್ಡ ಸಂಗತಿ ಏನಲ್ಲ. ಜನ ಈಗಿನ ನಾಯಕರನ್ನು ಕೈಬಿಡುವ ಮುನ್ನ ತಮ್ಮ ನಿಲುವನ್ನು ಬದಲಿಸಿಕೊಂಡಲ್ಲಿ ಉಳಿದುಕೊಳ್ಳಬಹುದು. ಇಲ್ಲವೆ ಜನ ಹೊಸ ನಾಯಕರನ್ನು ಕಂಡು ಕೊಳ್ಳುತ್ತಾರೆ. ಇದಕ್ಕೆ ಅಕ್ಟೋಬರ್ ೮ ರಂದು ಪ್ರಕಟಗೊಳ್ಳುವ ಜನಾದೇಶ ನಾಂದಿಯಾಗಲಿದೆ. ಹೊಸ ಪೀಳಿಗೆಗೆ ಇಡೀ ವಿಶ್ವವೇ ಕಣ್ಣ ಮುಂದೆ ಇರುವಾಗ ಪ್ರತ್ಯೇಕತಾವಾದ, ಮತೀಯವಾದಗಳು ಕ್ಷುಲ್ಲಕವಾಗಿ ಕಂಡಲ್ಲಿ ಆಶ್ಚರ್ಯವೇನೂ ಇಲ್ಲ. ಮುಂಬರುವ ವಿಧಾನಸಭೆ ಹೊಸ ಪೀಳಿಗೆಯ ಆಶಯಕ್ಕೆ ಸರಿಯಾಗಿ ಸ್ಪಂದಿಸುವುದು ಅಗತ್ಯ. ಭಾರತ ಇರುವುದೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಂಬುದು ಸ್ಪಷ್ಟ. ಅದನ್ನು ಅಳಿಸಲು ಬರುವುದಿಲ್ಲ. ಪಾಕ್‌ನಲ್ಲಿರುವ ಕೆಲವು ಶಕ್ತಿಗಳ ಕನಸು ಕೇವಲ ಕನಸಾಗೇ ಉಳಿಯುತ್ತದೆ.