For the best experience, open
https://m.samyuktakarnataka.in
on your mobile browser.

ಕಾಶ್ಮೀರ: ಸುಪ್ರೀಂ ಕೋರ್ಟ್ ಆಶಯ ಈಡೇರಬೇಕಿದೆ

10:54 AM Dec 12, 2023 IST | Samyukta Karnataka
ಕಾಶ್ಮೀರ  ಸುಪ್ರೀಂ ಕೋರ್ಟ್ ಆಶಯ ಈಡೇರಬೇಕಿದೆ

ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದನ್ನು ಎತ್ತಿಹಿಡಿದು ರಾಜ್ಯ ವಿಧಾನಸಭೆಗೆ ತ್ವರಿತಗತಿಯಲ್ಲಿ ಚುನಾವಣೆ ನಡೆಸಬೇಕೆಂದು ತಾಕೀತು ಮಾಡಿದೆ.ಕೇಂದ್ರ ಇದನ್ನು ಅಕ್ಷರಶಃ ಪಾಲಿಸಬೇಕು.

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲು ಅಧಿಕಾರವಿದೆ. ಜನ ಪ್ರತಿನಿಧಿಗಳಿರುವ ಸರ್ಕಾರ ರಚನೆಯಾಗಲು ಮುಂದೂಡಿರುವುದು ಸರಿಯಲ್ಲ. ಮುಂದಿನ ವರ್ಷ ಸೆಪ್ಟೆಂಬರ್ ೩೦ ರೊಳಗೆ ಚುನಾವಣೆ ನಡೆಸುವಂತೆ ಆಯೋಗಕ್ಕೆ ನೇರವಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆಗಸ್ಟ್೫, ೨೦೧೯ ರಂದು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಸಂಸತ್ತು ಹಿಂದಕ್ಕೆ ಪಡೆಯಿತು. ಇದನ್ನು ಪ್ರಶ್ನಿಸಿ ೩೭ ಜನ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ೫ ನ್ಯಾಯಮೂರ್ತಿಗಳ ಸಂವಿಧಾನ ಪೀಠ ೧೬ ದಿನ ವಿಚಾರಣೆ ನಡೆಸಿ ಸಂವಿಧಾನದ ೩೭೦ ನೇ ವಿಧಿ ರದ್ದತಿಯನ್ನು ಒಪ್ಪಿಕೊಂಡಿದೆ. ಪ್ರತ್ಯೇಕ ರಾಜ್ಯವಾಗಿ ಅದಕ್ಕೆ ಜನಪ್ರತಿನಿಧಿಗಳಿರುವ ಶಾಸನಸಭೆ ರಚಿಸಬೇಕು. ಅದಕ್ಕೆ ಕೂಡಲೇ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
೧೯೪೭ ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಕಾಶ್ಮೀರದ ರಾಜ ಹರಿಸಿಂಗ್ ಭಾರತದಲ್ಲಿ ಸೇರ್ಪಡೆಗೊಳ್ಳಲು ಒಪ್ಪಿರಲಿಲ್ಲ. ೧೯೪೯ ರಲ್ಲಿ ಪಾಕ್ ಪ್ರೇರಿತ ಆದಿವಾಸಿಗಳು ದಂಡೆತ್ತಿ ಬಂದರು. ಆಗ ರಾಜನಿಗೆ ಭಾರತದ ಸೇನೆಯ ನೆರವು ಬೇಕಾಯಿತು. ಭಾರತದ ಸೇನೆಯಿಂದ ಕಾಶ್ಮೀರದ ಈಗಿನ ಭಾಗ ಉಳಿದುಕೊಂಡಿತು. ಕಾಶ್ಮೀರವನ್ನು ಭಾರತದೊಂದಿಗೆ ಸೇರ್ಪಡೆ ಮಾಡಲು ಹರಿಸಿಂಗ್ ಕೆಲವು ಷರತ್ತುಗಳನ್ನು ವಿಧಿಸಿದರು. ಅದರ ಪ್ರಭಾವದಿಂದ ಭಾರತದ ಸಂವಿಧಾನದಲ್ಲಿರದ ವಿಧಿ ೩೭೦ ಸೇರ್ಪಡೆ ಮಾಡಲಾಯಿತು. ಇದನ್ನು ತಾತ್ಕಾಲಿಕ ಎಂದು ಆಗಲೇ ನಮೂದಿಸಲಾಗಿತ್ತು. ೨೦೧೯ ರಲ್ಲಿ ಇದು ರದ್ದಾಯಿತು. ಕಾಶ್ಮೀರದಲ್ಲಿ ಮುಸ್ಲಿಮರು, ಜಮ್ಮುವಿನಲ್ಲಿ ಹಿಂದುಗಳು, ಲಡಾಖ್‌ನಲ್ಲಿ ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ವಾತಂತ್ರ್ಯ ಬಂದ ದಿನದಿಂದ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಹೇಳುತ್ತಿದ್ದರೂ ಪಾಕ್ ತನ್ನ ಪ್ರಯತ್ನವನ್ನು ಕೈಬಿಟ್ಟಿಲ್ಲ. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಯ ಸಿಕ್ಕಾಗಲೆಲ್ಲ ಕಾಶ್ಮೀರ ಪ್ರಸ್ತಾಪಿಸುವುದನ್ನು ಕೈಬಿಟ್ಟಿಲ್ಲ. ಕಾಶ್ಮೀರದಲ್ಲಿ ಜನಜೀವನ ಸಹಜಸ್ಥಿತಿಗೆ ಮರಳಬೇಕು ಎಂದರೆ ವಿಧಾನಸಭೆಗೆ ಚುನಾವಣೆ ನಡೆಯಬೇಕು. ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರಗಳು ನಡೆದರೂ ಚುನಾವಣೆ ನಡೆಯುತ್ತದೆ. ಕಾಶ್ಮೀರದಲ್ಲಿ ಮಾತ್ರ ಕೇಂದ್ರಕ್ಕೆ ಚುನಾವಣೆ ನಡೆಸಲು ಮನಸ್ಸಿಲ್ಲ. ಅಲ್ಲಿಯ ನಾಯಕರಿಗೆ ಓಡಾಡಲು ಮುಕ್ತ ಅವಕಾಶವಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಇಂಟರ್‌ನೆಟ್ ಸಂಪರ್ಕ ಕಡಿತ ಹಾಗೂ ಸೇನೆಯ ಕಾರ್ಯಾಚರಣೆ ನಡೆಯುತ್ತಿರುವುದು ಅಲ್ಲಿ ಇನ್ನೂ ಶಾಂತಿ ನೆಲೆಸಿಲ್ಲ ಎಂಬುದನ್ನು ಸ್ಪಷ್ಟ. ಜನಪ್ರತಿನಿಧಿಗಳು ಚುನಾಯಿತರಾಗಿ ಬಂದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬಹುದು. ಅಲ್ಲಿಯ ನಾಯಕರು ಕೂಡ ಭಾರತಕ್ಕೆ ಸೇರ್ಪಡೆಗೊಂಡಿರುವುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಬೇಕು. ವಿಶೇಷ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ನೆರವು ಕೇಳಬಹುದು. ಆದರೆ ಹೊರಗಿನ ಶಕ್ತಿಗಳಿಗೆ ಬೆಂಬಲ ನೀಡುವುದನ್ನು ಮೊದಲು ನಿಲ್ಲಿಸಬೇಕು. ಗುಂಡಿನ ಶಬ್ದ ನಿಂತಲ್ಲಿ ಪ್ರೇಮ ಕಾಶ್ಮೀರಕ್ಕೆ ಬರಲು ಜನ ಹಿಂಜರಿಯುವುದಿಲ್ಲ. ಈಗ ಕಾಶ್ಮೀರದಲ್ಲಿ ಶ್ಮಶಾನ ಮೌನ ಆವರಿಸಿದೆ. ಅದು ಹೋಗಬೇಕು. ಅದಕ್ಕೆ ಜನಪ್ರಿಯ ಸರ್ಕಾರ ಬರಬೇಕು. ಕೇಂದ್ರ ಸರ್ಕಾರ ಚುನಾವಣೆ ನಡೆಸಲು ಮುಕ್ತ ಅವಕಾಶ ನೀಡಬೇಕು. ಆಗ ಜನರಲ್ಲಿ ದೇಶೀಯ ಮನೋಭಾವ ಬೆಳೆಯುತ್ತದೆ. ಈಗ ಸೇನೆ, ಪೊಲೀಸರ ಆಡಳಿತದಿಂದ ಅಲ್ಲಿಯ ಜನರಿಗೆ ನಿಜವಾದ ಸ್ವಾತಂತ್ರö್ಯ ಸಿಕ್ಕಿಲ್ಲ. ಅಲ್ಲಿಯ ಯುವ ಜನಾಂಗ ಹೂವು ಅರಳುವುದನ್ನು ನೋಡಿಲ್ಲ. ಬಂದೂಕಿನ ಸದ್ದುಗಳಲ್ಲಿ ಭಯಭೀತರಾಗಿ ಮನೆಯಲ್ಲೇ ಜೀವನ ಕಂಡುಕೊಳ್ಳಬೇಕಾದ ದುರ್ಬರ ಸ್ಥಿತಿ ಬಂದಿದೆ. ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸಾಬೀತು ಪಡಿಸುವುದರಲ್ಲಿ ಸಫಲವಾಗಿದೆ. ಚುನಾವಣೆ ನಡೆಸಿದ್ದಲ್ಲಿ ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಸ್ಥಾಪನೆಗೊಳ್ಳಲಿದೆ.
ಜನಪ್ರಿಯ ಸರ್ಕಾರ ಬಂದಲ್ಲಿ ಮಾತ್ರ ಅಲ್ಲಿಯ ಜನ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಕಾಣಲು ಸಾಧ್ಯ. ಎಲ್ಲ ರಾಜ್ಯಗಳ ಹಾಗೆ ಕಾಶ್ಮೀರವೂ ಸಮಾನ ಸವಲತ್ತು ಪಡೆಯುವುದರಿಂದ ಬೇರೆ ರಾಜ್ಯದವರು ಅಲ್ಲಿಗೆ ಹೋಗಿ ನೆಲೆಸಬಹುದು. ಅದೇರೀತಿ ಅಲ್ಲಿಯ ನಿವಾಸಿಗಳು ಬೇರೆ ರಾಜ್ಯದಲ್ಲಿ ನೆಲೆಸಬಹುದು. ಇದು ರಾಷ್ಟ್ರೀಯ ಭಾವೈಕ್ಯತೆಗೆ ಕಾರಣವಾಗಲಿದೆ. ಇದೆಲ್ಲವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಚುನಾವಣೆ ನಡೆಸಲು ಸ್ಪಷ್ಟ ಸೂಚನೆ ನೀಡಿದೆ.