ಕಾಸರಗೋಡು ರಸ್ತೆಗೆ ಗವಾಸ್ಕರ್ ಹೆಸರು
ಮಂಗಳೂರು: ಭಾರತೀಯ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಅವರ ಹೆಸರಿನಿಂದ ಕಾಸರಗೋಡಿನ ರಸ್ತೆಯೊಂದು ಗುರುತಿಸಲ್ಪಡಲಿದೆ.
ಕಾಸರಗೋಡು ನಗರದ ನೆಲ್ಲಿಕುಂಜೆ-ಬೀಚ್ ರಸ್ತೆಗೆ ‘ಸುನೀಲ್ ಗವಾಸ್ಕರ್ ಬೀಚ್ ರಸ್ತೆ’ ಎಂದು ಹೆಸರಿಡಲು ನಗರಸಭೆ ಸಭೆ ನಡೆಸಿ ನಿರ್ಧರಿಸಿದೆ. ತನ್ನ ಹೆಸರಿನ ರಸ್ತೆ ಉದ್ಘಾಟನೆಗೆ ಗವಾಸ್ಕರ್ ಶೀಘ್ರವೇ ಕಾಸರಗೋಡಿಗೆ ಆಗಮಿಸಲಿದ್ದಾರೆ ಎಂದು ನಗರ ಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ತಿಳಿಸಿದ್ದಾರೆ.
ತಳಂಗರೆ ನಿವಾಸಿ ಕೊಲ್ಲಿಯಲ್ಲಿ ವ್ಯಾಪಾರಿಯಾಗಿರುವ ಖಾದರ್ ತೆರುವತ್ ಆತ್ಮೀಯರಾಗಿರುವ ಗವಾಸ್ಕರ್ ಈ ತಿಂಗಳ ಅಂತ್ಯ ಅಥವಾ ನವೆಂಬರ್‌ನಲ್ಲಿ ಕಾಸರಗೋಡಿಗೆ ಆಗಮಿಸುವರು. ತೆರುವತ್ ವಿಶೇಷ ಮುತುವರ್ಜಿಯಿಂದ ರಸ್ತೆಗೆ ಗವಾಸ್ಕರ್ ಹೆಸರಿಡಲು ನಗರ ಸಭೆ ಮುಂದಾಗಿದ್ದು, ೧೯೮೩ರಲ್ಲಿ ವಿಶ್ವಕಪ್ ಗೆದ್ದ ೪೦ ವರ್ಷದ ಸಂಭ್ರಮಾಚರಣೆಗೆ ತೆರುವತ್ ಮುಂಬೈಗೆ ಆಮಂತ್ರಿತರಾಗಿದ್ದರು, ಆ ಸಂದರ್ಭ ರಸ್ತೆಗೆ ಹೆಸರಿಡುವ ಕುರಿತು ಗವಾಸ್ಕರ್ ಗಮನಕ್ಕೆ ತರಲಾಗಿತ್ತು. ವಿಶ್ವ ಪ್ರಸಿದ್ಧ ಗೆಳೆಯನನ್ನು ತನ್ನ ಹುಟ್ಟೂರಿಗೆ ಕರೆ ತರುವುದು ನನ್ನ ಕನಸು ಎಂದು ತೆರುವತ್ ತಿಳಿಸಿದ್ದಾರೆ.
ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ದೂರವಾಣಿ ಮೂಲಕ ಗವಾಸ್ಕರ್‌ರನ್ನು ಸಂಪರ್ಕಿಸಿ ಕಾಸರಗೋಡಿಗೆ ಸ್ವಾಗತ ಕೋರಿದ್ದಾರೆ. ಕುಂಬಳೆ ಪಟ್ಟಣದ ರಸ್ತೆಯೊಂದಕ್ಕೆ ವಿಶ್ವ ವಿಖ್ಯಾತ ಬೌಲರ್ ಅನಿಲ್ ಕುಂಬ್ಳೆ ಹೆಸರಿಡಲಾಗಿದೆ.