ಕಿಡ್ನಿ ಕಾಯಿಲೆ ಸೈಲೆಂಟ್ ಕಿಲ್ಲರ್….!
ಹುಬ್ಬಳ್ಳಿ: ಕಿಡ್ನಿಯಲ್ಲಿ ಸಮಸ್ಯೆ ಇದ್ದರೂ ಅದು ಗೊತ್ತಾಗುವುದೇ ಇಲ್ಲ. ಬೇರೆ ಕಾಯಿಲೆ ತಪಾಸಣೆ ಮಾಡಿಕೊಳ್ಳಲು ಬಂದಾಗಲೇ ಕಿಡ್ನಿಯಲ್ಲೂ ಸಮಸ್ಯೆ ಇದೆ ಎನ್ನುವುದು ಗೊತ್ತಾಗುತ್ತದೆ. ಹೀಗಾಗಿ ಕಿಡ್ನಿ' ಅದೊಂದು ರೀತಿಯ ಸೈಲಂಟ್ ಕಿಲ್ಲರ್.... ಬಹುಪಾಲು ಜನರನ್ನು ಕಾಡುವ ಬಿಪಿ ಮತ್ತು ಸಕ್ಕರೆ ಕಾಯಿಲೆಗೆ ನೇರ ಸಂಬಂಧ ಹೊಂದಿರುವ ಕಿಡ್ನಿಗೆ ಹೇಗೆ ಹಾನಿಯಾಗುತ್ತದೆ, ಯಾವಾಗ ಅರಿವಿಗೆ ಬರುತ್ತದೆ, ವೈದ್ಯರ ಬಳಿ ಯಾವಾಗ ಬರಬೇಕು ಏನೇನು ಚಿಕಿತ್ಸೆ, ಈ ಕಾಯಿಲೆಯಿಂದ ಪಾರಾಗುವುದು ಹೇಗೆ.... ಹೀಗೆ ಕಿಡ್ನಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಮಾಹಿತಿ, ಸಲಹೆ ನೀಡಿದ ಬೆಂಗಳೂರಿನ ನಾರಾಯಣ ಹೆಲ್ತ್ ಆರೋಗ್ಯ ಸಂಸ್ಥೆಯ ಕಿಡ್ನಿ ಸ್ಪೆಷಲಿಸ್ಟ್ ಡಾ.ಗಣೇಶ ಶ್ರೀನಿವಾಸ ಪ್ರಸಾದ, ಸೈಲೆಂಟ್ ಕಿಲ್ಲರ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿ ಹೇಳಿದರು.
ಆರೋಗ್ಯ ಹಬ್ಬದ' ಕೊನೆಯ ದಿನದಂದು ಉಪನ್ಯಾಸ ನೀಡಿದ ಅವರು, ಕೊನೆ ಹಂತದಲ್ಲಿ ರೋಗಿಗಳು ವೈದ್ಯರ ಬಳಿ ಬರುತ್ತಾರೆ. ಆಗ ಕಿಡ್ನಿಗೆ ಬಹುಪಾಲು ಹಾನಿಯಾಗಿರುತ್ತದೆ. ಒಟ್ಟು ಐದು ಹಂತದಲ್ಲಿ ಕಿಡ್ನಿ ತೊಂದರೆ ವಿಂಗಡಿಸಬಹುದಾಗಿದ್ದು, ಮೂರನೇ ಹಂತದವರೆಗೂ ಪತ್ತೆಯಾದರೆ ಅಪಾಯ ತಪ್ಪಿಸಬಹುದು. ೪ನೇ ಹಂತದಲ್ಲಿ ತಿಳಿದು ಬಂದರೆ ಸರಿ ಮಾಡಲು ಆಗಲ್ಲ ಎಂದು ಎಂದು ಡಾ.ಪ್ರಸಾದ ಎಚ್ಚರಿಸಿದರು.
ಸಕ್ಕರೆ ಕಾಯಿಲೆ ಮತ್ತು ಬಿಪಿಯಿಂದಲೇ ಕಿಡ್ನಿಗೆ ಹೆಚ್ಚು ಸಮಸ್ಯೆ. ಹೀಗಾಗಿ ಸಕ್ಕರೆ ರೋಗಿಗಳು ತಮ್ಮ ಕಾಯಿಲೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ನಿಯಮಿತವಾಗಿ ಪರೀಕ್ಷೆ ಮಾಡಿಕೊಳ್ಳಬೇಕು. ವಿಶೇಷವಾಗಿ ಬಿಪಿಗೂ ಹಾಗೂ ಕಿಡ್ನಿಗೂ ನೇರ ಲಿಂಕ್ ಇರುವುದರಿಂದ ಅಧಿಕ ರಕ್ತದೊತ್ತಡ ಇರುವವರು ಎಚ್ಚರದಿಂದ ಇರಬೇಕು. ತಮ್ಮ ಬಿಪಿ ನಿಯಂತ್ರಣದಲ್ಲಿಡಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ೩೦ ವರ್ಷದವರಿಗೂ ಅಧಿಕ ರಕ್ತದೊತ್ತಡ ಸಮಸ್ಯೆ ಕಂಡು ಬರುತ್ತಿದೆ. ಕಿಡ್ನಿಯಲ್ಲಿ ಸಮಸ್ಯೆ ಇರುವುದೂ ರಕ್ತದೊತ್ತಡ ಹೆಚ್ಚಲು ಒಂದು ಕಾರಣವಾಗುತ್ತದೆ. ಬೊಜ್ಜು ಇರುವವರಿಗೂ ಕಿಡ್ನಿ ಅಪಾಯ ಇರುತ್ತದೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಪ್ರಮಾಣದಲ್ಲಿ, ಹೆಚ್ಚು ದಿನ ನೋವು ನಿವಾರಕ ಮಾತ್ರೆ ತೆಗೆದುಕೊಂಡರೆ ಅದರಿಂದಲೂ ಕಿಡ್ನಿಗೆ ಅಪಾಯವಿದೆ. ಮಂಡಿ ನೋವಿಗೆ ಸತತ ನೋವು ನಿವಾರಕ ತೆಗೆದುಕೊಂಡರೆ ಕಿಡ್ನಿ ಹಾಳಾಗುವ ಸಂಭವ ಹೆಚ್ಚು ಎಂದು ಎಚ್ಚರಿಸಿದರು.
ನಾಲ್ಕು ಜನರ ಒಂದು ಕುಟುಂಬ ದಿನಕ್ಕೆ ೪ ಚಮಚ ಅಂದರೆ ೨೦ ಗ್ರಾಂ ಉಪ್ಪು ಸೇವಿಸಬೇಕು. ಒಬ್ಬ ವ್ಯಕ್ತಿ ದಿನಕ್ಕೆ ೫ರಿಂದ ೬ ಗ್ರಾಂ ಉಪ್ಪು ಸೇವನೆ ಮಾಡಬೇಕು. ಅಡುಗೆಯಲ್ಲಿ ಬಳಸುವುದನ್ನು ಬಿಟ್ಟು ನೇರವಾಗಿ ಉಪ್ಪು ಸೇವನೆ ಅಪಾಯಕಾರಿ. ಉಪ್ಪು ಕಡಿಮೆ ತಿಂದರೆ ಅಪಾಯವೂ ಕಡಿಮೆ. ದಿನಕ್ಕೆ ೨ ರಿಂದ ೩ ಲೀಟರ್ ನೀರು ಕುಡಿದರೆ ಉತ್ತಮ ಎಂದು ಸಲಹೆ ನೀಡಿದರು.