ಕಿತ್ತು ಹೋದ ರಸ್ತೆಯಲ್ಲಿ ಮುಂದುವರೆದ ಸಂಚಾರ!
ಬಾಗಲಕೋಟೆ(ಕುಳಗೇರಿ ಕ್ರಾಸ್): ನವಿಲುತೀರ್ಥ ಜಲಾಶಯ ಸಂಪೂರ್ಣ ಭರ್ತಿ ಹಂತಕ್ಕೆ ತಲುಪಿದ್ದು ಸತತವಾಗಿ ಹರಿಬಿಟ್ಟ ಪ್ರವಾಹದ ನೀರಿಗೆ ಮಲಪ್ರಭಾ ಹಳೆ ಸೇತುವೆ ರಸ್ತೆ ಕಿತ್ತು ಹೋಗಿದೆ.
ಸದ್ಯ ಪ್ರವಾಹ ಇಳಿಮುಖವಾಗಿದ್ದು ಜಲಾವೃತಗೊಂಡ ಸೇತುವೆ ಸಂಚಾರ ಪ್ರಾರಂಭವಾಗಿದೆ. ಆದರೆ ನೀರಿನ ರಭಸಕ್ಕೆ ಕಿತ್ತುಹೋದ ರಸ್ತೆಯಲ್ಲಿಯೇ ಕೆಲವರು ನಡೆದುಕೊಂಡು ತಮ್ಮ ಗ್ರಾಮಗಳಿಗೆ ಹೋಗುತ್ತಿದ್ದಾರೆ. ಇದೇ ಅಪಾಯಕಾರಿ ರಸ್ತೆಯಲ್ಲಿಯೇ ಕೆಲವರು ತಮ್ಮ ವಾಹನ ಸಂಚಾರ ಪ್ರಾರಂಭಿಸಿ ಹರಸಾಹಸ ಪಡುತ್ತಿದ್ದಾರೆ.
ಕೋಟಿ ರೂ. ನೀರಲ್ಲಿ ಹೋಮ: ಹಿಂದಿನ ಶಾಸಕರಾಗಿದ್ದ ಸಿಎಂ ಸಿದ್ಧರಾಮಯ್ಯನವರು ಈ ರಸ್ತೆ ಮರು ನಿರ್ಮಾಣಕ್ಕೆ ಕಳೆದ ಬಾರಿ ಕೋಟಿ ಅನುದಾನ ನೀಡಿದ್ದರು. ಆದರೆ ಗುತ್ತಿಗೆದಾರ ಕಳಪೆ ರಸ್ತೆ ನಿರ್ಮಿಸಿ ಕೈ ತೊಳೆದುಕೊಂಡಿದ್ದು ಕಾಮಗಾರಿ ಮುಗಿದ ಒಂದೇ ವರ್ಷದಲ್ಲಿ ನಿರ್ಮಿಸಿದ ರಸ್ತೆ ಹಾಳಾಗಿದೆ. ನಿರ್ಮಾಣಗೊಂಡ ಸೇತುವೆಗಳು ಸಹ ಮುರಿದು ಬಿದ್ದು ವಾಹನಗಳ ಸಂಚಾರವೂ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ವರ್ಷದಲ್ಲಿ ೮ ರಿಂದ ೧೦ ತಿಂಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ: ಕಳೆದ ವರ್ಷ ಕೋಟಿ ಅನುದಾನ ಬಳಸಿ ನೂತನ ರಸ್ತೆ ನಿರ್ಮಾಣ ಮಾಡಿದ್ದರೂ ನೂರಾರು ವರ್ಷಗಳ ಹಿಂದೆಯೇ ನಿರ್ಮಿಸಿದ ರಸ್ತೆಯಂತಾಗಿದೆ. ಪಿಡಬ್ಲೂಡಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದರಿಂದ ಕಳಪೆ ರಸ್ತೆ ನಿರ್ಮಿಸಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.
ಪ್ರತಿ ವರ್ಷ ಪ್ರವಾಹ ಬಂದಾಗ ಜನಪ್ರತಿನಿಧಿಗಳ ಜೊತೆ ಪಿಡಬ್ಲೂಡಿ ಅಧಿಕಾರಿಗಳು ಸಹ ಬರ್ತಾರೆ, ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಸ್ತಾರೆ ಕಂಡು ಕಾಣದಂತೆ ಇಲ್ಲಿ ಏನೂ ನಡದೆ ಇಲ್ಲ ಎಂಬಂತೆ ವರ್ತಿಸುತ್ತಾರೆ ಎಷ್ಟು ಬಾರಿ ಮನವಿ ಮಾಡಿಕೊಂಡರೂ ಈ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಅಧಿಕಾರಿಗಳ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದ ನಮ್ಮೂರ ರಸ್ತೆ ಹಾಳಾಗಿದೆ. ಲೋಕೋಪಯೋಗಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಈ ಬಾರಿ ಗುಣಮಟ್ಟದ ಕಾಮಗಾರಿ ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.