ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಿವಿಗೆ ಸೈಲೆನ್ಸರ್ ಬೇಕು

03:36 AM Nov 27, 2024 IST | Samyukta Karnataka

ಮಾತಾಡಿದ್ದು ಕೇಳಿಸುತ್ತಿಲ್ಲ. ಇದು ಕಿವಿ ತಮಟೆಯ ಸಮಸ್ಯೆ ಅಲ್ಲ. ರಸ್ತೆ ತಮಟೆಯ ಸದ್ದೂ ಅಲ್ಲ. ಹೊರಗಡೆ ಬೈಕುಗಳ ವಿಪರೀತ ಶಬ್ದಕ್ಕೆ ವಿಶ್ವ ಮಾತಾಡಲಾಗದೆ ಒದ್ದಾಡುತ್ತಿದ್ದ.
“ಏನು, ಈಪಾಟಿ ಶಬ್ದ?” ಎಂದು ಕೇಳಿದೆ.
“ಯುವಕರು ಸೈಲೆನ್ರ‍್ರು ಕಿತ್ಹಾಕಿ ಮೋಟರ್‌ಬೈಕ್ ಓಡಿಸ್ತಾ ಇದ್ದಾರೆ. ನಮ್ ತಲೆ ಮೇಲೇ ರಾಕೆಟ್ ಹೋದ್ಹಂಗೆ ಆಗ್ತಿದೆ” ಎಂದು ಶಬ್ದ ಕಡಿಮೆ ಆದ ಸಮಯ ಹೊಂದಿಸಿ ಹೇಳಿದ.
“ಅವರ ಕಿವಿಗಳಿಗೆ ಏನೂ ಆಗೊಲ್ವಾ?” ಎಂದೆ.
“ಸೈಲೆನ್ಸರ್ ಬೈಕ್ ಹಿಂದೆ ಇರೋದ್ರಿಂದ ಶಬ್ದ ಮತ್ತು ಹೊಗೆ ಬೇರೆಯವರಿಗೆ ಬಿಡ್ತಾರೆ. ಅವರು ಜುಂ ಅಂತ ಮುಂದೆ ಹೋಗ್ತಾ ರ‍್ತಾರೆ” ಎಂದ.
“ಸೈಲೆನ್ಸರ್ ಬದಲಿಸಿ ಗಾಡಿ ಓಡಿಸೋಕೆ ಏನು ಕಾರಣ ವಿಶ್ವ?” ಎಂದು ಬೇಕಾಗಿ ಕೇಳಿದೆ.
“ಯೌವನದ ಮದ. ಹುಡ್ಗಿರ‍್ನ ಅಟ್ರ್ಯಾಕ್ಟ್ ಮಾಡೋ ಚಟ!” ಎಂದ.
“ಅಪ್ಪ ಫೈನಾನ್ಷಿಯರ್ ಆದ್ರೆ ಮಗ ಸೈಲೆನ್ಸರ್ ಇಲ್ದೆ ಗಾಡಿ ಓಡಿಸ್ತಾನೆ” ಎಂದು ಹೇಳುತ್ತಾ ವಿಶಾಲು ಪಾಯಸದ ಬಟ್ಟಲುಗಳು ಹಿಡಿದು ಬಂದಳು.
“ಪೊಲೀಸ್ರು ಇಂಥ ಬೈಕ್‌ಗಳ ಶಬ್ದ ನಿಯಂತ್ರಣ ಮಾಡೋಕೆ ಅಂತ ಪ್ರಯತ್ನ ಮಾಡ್ತಾರೆ. ಆದ್ರೆ ಹಿಡಿಯೋಕೆ ಆಗ್ತಾ ಇಲ್ಲ” ಎಂದೆ.
“ಪಾಯಸ ತಗೊಳ್ಳಿ, ರುಚಿಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿರಬಹುದು, ದಯವಿಟ್ಟು ಹೊಟ್ಟೆಗೆ ಹಾಕ್ಕೊಳ್ಳಿ” ವಿಶಾಲು ಪಾಯಸದ ಬಟ್ಟಲುಗಳನ್ನು ಮುಂದಿಟ್ಟು ಕೈ ಮುಗಿದಳು.
“ಪಾಯಸಾನಾ ಇದು? ಹಸಿಮೆಣಸಿನಕಾಯಿ, ಸಾಸುವೆ ತೇಲ್ತಾ ಇದೆ!” ಆಶ್ಚರ್ಯದಿಂದ ಕೇಳಿದೆ.
“ಪಾಯಸಕ್ಕೆ ಒಗ್ಗರಣೆ ಹಾಕಿದ್ದೀಯಾ? ಏನಿದು ನಿನ್ತಲೆ?” ಎಂದ ವಿಶ್ವ.
“ನನ್ನ ತಲೆ ಅಲ್ಲ, ನನ್ನ ಕಿವಿ ಬೆರ‍್ತು. ಪಾಯಸ ಅಂತಾನೇ ಮಾಡಿದ್ದುರೀ, ಅಕ್ಕಿ ಮತ್ತು ಹಾಲನ್ನ ಚೆನ್ನಾಗಿ ಕುದಿಸಿ ಕುದಿಸಿ ರುಚಿಯಾದ ಪಾಯಸ ಮಾಡ್ದೆ”
“ಅದಕ್ಕೆ ಒಗ್ಗರಣೆ ಯಾಕೆ ಹಾಕ್ದೆ?” ವಿಶ್ವ ರೇಗಿದ.
“ನಾನೆಲ್ಲಿ ಹಾಕ್ದೆ? ಪಕ್ಕದ ಬರ್ನರ್ ಮೇಲಿದ್ದ ಹುರುಳೀಕಾಯಿ ಪಲ್ಯಕ್ಕೆ ಒಗ್ಗರಣೆ ಹಾಕೋಕೆ ಅಂತ ಹೋದೆ. ಅಷ್ಟರಲ್ಲಿ ಏನಾಯ್ತು ಗೊತ್ತಾ?”
ಮನೆ ಮುಂದೆ ಸಿಡಿಲು ಗುಡುಗುತ್ತಾ ಹೋದಂತಾಗಿ ವಿಶಾಲೂ ಕಿವಿ ಮುಚ್ಚಿಕೊಂಡಳು. ಮೋಟರ್‌ಬೈಕ್‌ನ ಶಬ್ದಕ್ಕೆ ಮನೆಯ ಷೋಕೇಸ್ ಗಡಗಡ ನಡುಗಿತು. ಕಿವಿಯಲ್ಲಿ ನವೆ ಶುರುವಾಯಿತು.
“ಶಬ್ದ ನಿಲ್ತು. ಈಗ ಹೇಳು ವಿಶಾಲು” ಎಂದ ವಿಶ್ವ.
“ಒಂದ್ಕಡೆ ಹುರುಳೀಕಾಯಿ ಪಲ್ಯ, ಇನ್ನೊಂದು ಕಡೆ ಪಾಯಸ ಒಟ್ಟಿಗೆ ಮಾಡ್ತಾ ಇದ್ದೆ. ಗಾಡಿ ಶಬ್ದಕ್ಕೆ ಕೈ ನಡುಗಿ ಪಾಯಸಕ್ಕೆ ಒಗ್ಗರಣೆ ಬಿತ್ತು” ಎಂದಳು. ನಾನು ಜೋರಾಗಿ ನಕ್ಕೆ. ಆದರೆ ವಿಶ್ವ ನಗಲಿಲ್ಲ.
“ಸ್ಸಾರಿ ಕಣ್ರೀ, ನಾನು ಬೇಕಾಗಿ ಹಾಕಿಲ್ಲ. ಶಬ್ದ ದಿಢೀರ್ ಅಂತ ಬಂದಾಗ ಹೆದರಿಕೆ ಆಯ್ತು” ವಿಶಾಲು ತಪ್ಪಿತಸ್ಥಳಂತೆ ಹೇಳಿದಾಗ ನಾನು ಆಕೆಯ ಸಪೋರ್ಟ್‌ಗೆ ಬಂದೆ.
“ನೋಡು ವಿಶ್ವ, ನಿನ್ನ ಹೆಂಡ್ತಿ ಹೇಳ್ತಾ ಇರೋದು ಕರೆಕ್ಟು. ದೀಪಾವಳಿ ಸಮಯದಲ್ಲಿ ನಾನು ಒಂದು ಕಟ್ಟಿಂಗ್ ಶಾಪಲ್ಲಿ ಶೇವಿಂಗ್‌ಗೆ ಕೂತಿದ್ದೆ. ಕೆನ್ನೆಗೆ ಸೋಪ್ ಹಾಕಿ ಅವನು ಇನ್ನೇನು ಚಾಕು ಇಡ್ಬೇಕು, ಅಷ್ಟರಲ್ಲಿ ಯಾರೋ ರಸ್ತೇಲಿ ಆಟಂ ಬಾಂಬು ಹಚ್ಚಿದ್ರು. ಆ ಶಬ್ದಕ್ಕೆ ಚಾಕು ನನ್ನ ಕೆನ್ನೆಗೆ ಗೀರಿ ಬಳಬಳ ರಕ್ತ ಬಂದಿತ್ತು” ಎಂದೆ.
“ಆದ್ರೆ ನಾನು ಮುಖಕ್ಕೆ ಸೋಪ್ ಹಾಕಿ ತೊಳೆದ ಮೇಲೆ ಪೌಡರ್ ಹಾಕ್ಕೊಂಡಿದ್ದೆ” ಎಂದಳು ವಿಶಾಲೂ.
“ಈ ಶಬ್ದ ಮಾಲಿನ್ಯ ತಪ್ಸೋಕೆ ಆಗೊಲ್ವಾ?” ಎಂದು ವಿಶ್ವ ನನ್ನನ್ನು ಕೇಳಿದ.
“ನಮ್ಮಲ್ಲಿ ಅನೇಕ ಕಾನೂನುಗಳಿವೆ. ಸೈಲೆನ್ಸರ್ ಕಿತ್ಹಾಕಿ ಕೆಲವು ತರಲೆ ಹುಡುಗ್ರು ಗಾಡಿ ಓಡಿಸ್ತಾರೆ. ಭಯಂಕರ ಶಬ್ದ ಮಾಡ್ತಾ ಒಂದು ಸೆಕೆಂಡಲ್ಲಿ ಪಾಸ್ ಆಗಿ ಬಿಡ್ತಾರೆ. ಅವರ‍್ನ ತಡೆಯೋಕೂ ಆಗೊಲ್ಲ, ಹಿಡಿಯೋಕೂ ಆಗೊಲ್ಲ. ಎಲ್ಲಿ ಮಾಯ ಆಗ್ತಾರೋ ಪೊಲೀಸರಿಗೇ ಗೊತ್ತು” ಎಂದೆ.
“ಇದರಿಂದ ಕಿವಿಗೆ ತುಂಬಾ ತೊಂದ್ರೆ ಆಗ್ತಾ ಇದೆ” ಎಂದ ವಿಶ್ವ.
“ಕಿವಿಗೆ ಮಾತ್ರವಲ್ಲ, ಇಡೀ ಶರೀರಕ್ಕೆ ತೊಂದ್ರೆ ಆಗ್ತಿದೆ. ನಾನು ಒಬ್ಬ ಕಿವಿ ಡಾಕ್ಟರ್‌ನ ಕೇಳಿದ್ದೆ. ಅವರು ಏನ್ಹೇಳಿದ್ರು ಗೊತ್ತಾ? ಮಾಮೂಲಾಗಿ ಮನೇಲಿ ಮಾತಾಡೋ ಶಬ್ದ ೬೦ ಡೆಸಿಬಲ್‌ನಲ್ಲಿ ಇರುತ್ತಂತೆ”
“ನನ್ನ ಹೆಂಡ್ತಿ ನನ್ನ ಜೋರಾಗಿ ಬೈದಾಗ?” ಎಂದ ವಿಶ್ವ.
“ಅದು ೬೫ ರಿಂದ ೭೦ ಡೆಸಿಬಲ್ ಇರಬಹುದು” ಎಂದೆ. ವಿಶಾಲೂ ಗಂಡನತ್ತ ನೋಡಿ ಮೂತಿ ಲೆಫ್ಟ್‌ಗೆ ತಿರುಗಿಸಿದಳು.
“ಮಾಮೂಲಾಗಿ ಮೋಟರ್‌ಬೈಕ್ ಓಡಿಸಿದ್ರೆ ೯೦ ಡೆಸಿಬಲ್ ಶಬ್ದ ಬರುತ್ತೆ. ಪಡ್ಡೆ ಹುಡುಗರು ಸೈಲೆನ್ಸರ್ ಕಿತ್ಹಾಕಿ ಓಡಿಸಿದಾಗ ೧೩೦ ಡೆಸಿಬಲ್ ದಾಟುತ್ತೆ. ಆಗ್ಲೇ ಎಲ್ಲ ಥರದ ತೊಂದ್ರೆ ಆಗೋದು” ಎಂದೆ.
“ನಮ್ಮ ಕಿವಿಗೆ ಶಬ್ದ ಎಷ್ಟಿದ್ದರೆ ಸರಿ?”
“೧೨೦ ಡೆಸಿಬಲ್ ಒಳಗಡೆ ಇದ್ರೆ ಕಿವಿ ಹೇಗೋ ತಡ್ಕೊಳ್ಳುತ್ತೆ. ೧೨೦ ಡೆಸಿಬಲ್ ದಾಟಿದ ಕೂಡ್ಲೇ ಕಿವಿ ತಮಟೆಗೆ ತೊಂದ್ರೆ, ದೇಹದ ಉಸಿರಾಟದಲ್ಲಿ ವ್ಯತ್ಯಾಸ, ಪಲ್ಸ್ ರೇಟ್ ಜಾಸ್ತಿ ಆಗಿ ತಲೆನೋವು ಸಹ ಬರಬಹುದು” ಎಂದಾಗ ವಿಶಾಲೂ ನಿಜ ಎಂದು ತಲೆ ಆಡಿಸಿದಳು.
“ನೆನ್ನೆ ರಜಾ ಇತ್ತಲ್ಲ, ಬೈಕುಗಳನ್ನ ಓಡಿಸ್ತಿದ್ರು, ವಿಪರೀತ ಶಬ್ದಕ್ಕೆ ತಲೆ ಕಡಿದು ನಮ್ಮ ಯಜಮಾನರ ಪಾದಕ್ಕೆ ಒಪ್ಸೋಣ ಅನ್ನಿಸಿತ್ತು” ಎಂದಳು ವಿಶಾಲೂ.
“ಎಲ್ಲಾ ಬಿಟ್ಟು ನಿಮ್ಮನೆ ಮುಂದೇನೇ ಯಾಕೆ ಇಂಥ ಬೈಕುಗಳು ಹೋಗಬೇಕು?” ಎಂದು ವಿಶ್ವನನ್ನು ಕೇಳಿದೆ.
“ನಮ್ಮ ಮನೆ ಮುಂದಿನ ರಸ್ತೇಲಿ ವೆಹಿಕಲ್ಸು ಕಡಿಮೆ. ಇದು ರೆಸಿಡೆನ್ಷಿಯಲ್ ಏರಿಯಾ. ಜನ ರಸ್ತೆಗೆ ಬರೋದೂ ಕಡಿಮೆ. ಅದಕ್ಕೆ ಹುಡುಗರು ಗಾಡಿಗಳ್ನ ಯದ್ವಾತದ್ವಾ ಓಡಿಸ್ತಾರೆ, ಹೈವೇನಲ್ಲಿ ಓಡಿಸ್ತಾರಲ್ಲ, ಹಾಗೆ!” ಎಂದ ವಿಶ್ವ.
“ಅವರು ಸಿಕ್ಕಿಬಿದ್ರೆ ಲೈಸೆನ್ಸ್ ಕ್ಯಾನ್ಸಲ್ ಆಗುತ್ತೆ. ಆರ್.ಸಿ.ಬುಕ್‌ನ ಸೀಜ್ ಮಾಡ್ತಾರೆ. ಎಲ್ಲಾ ಶಿಕ್ಷೆ ಇದೆ. ಆದ್ರೆ ಸಿಕ್ಕಿ ಬೀಳೊಲ್ವೇ?” ಎಂದು ಮರುಗಿದೆ.
“ಯಾಕೆ ಸಿಕ್ಕಿ ಬೀಳೊಲ್ಲ?” ಎಂದ ವಿಶ್ವ.
“ಸಾಹುಕಾರಿ ಮಕ್ಕಳು, ಕೆಲವು ಸಲ ರಾಜಕಾರಣಿಗಳ ಮಕ್ಕಳೇ ಇದ್ರಲ್ಲಿ ಇನ್ವಾಲ್ವ್ ಆಗರ‍್ತಾರೆ. ಮಗನಿಗೆ ಮೂರು ಲಕ್ಷದ ಬೈಕ್ ಕೊಡಿಸ್ಬೇಕಾದ್ರೆ ಅಪ್ಪ ಇನ್ನೆಷ್ಟು ಜೋರಾಗರ‍್ಬೇಕು? ಪೊಲೀಸ್ ಹಿಡಿದ್ರೂ ಯಾರದೋ ಒತ್ತಡಕ್ಕೆ ಮಣಿದು ಬಿಟ್ಟು ಬಿಡ್ತಾರೆ. ಹೊಟ್ಟೆಪಾಡಿಗೆ ಸೈಲೆನ್ಸರ್ ಬದಲಿಸಿ ಕೊಟ್ಟ ಗ್ಯಾರೇಜ್‌ನವನ ಮೇಲೆ ಮುಗಿಬೀಳ್ತಾರೆ” ಎಂದೆ.
ವಿಶಾಲೂ ಕೊಟ್ಟ ಪಾಯಸವನ್ನು ಸ್ಪೂನಿನಿಂದ ತಿನ್ನಲು ಶುರು ಮಾಡಿದೆ. ಅದೊಂದು ರೀತಿಯಲ್ಲಿ ಹೊಸ ರುಚಿಯಾಗಿತ್ತು. ಸಿಹಿಯಾದ ಪಾಯಸಕ್ಕೆ ಸೊಗಸಾದ ಒಗ್ಗರಣೆ!
“ವಿಶಾಲೂ ಅವರೇ, ಇದು ಹೊಸ ರುಚಿ ಕಣ್ರೀ. ಖಾರ ಪಾಯಸದ ಈ ರೆಸಿಪೀನ ಪೇಪರ್‌ಗೆ ಕಳಿಸಿದ್ರೆ ನಿಮ್ಗೆ ಪ್ರೈಜ್ ಬರುತ್ತೆ. ಇನ್ನೊಂದು ಕಪ್ ತಗೊಂಡು ಬನ್ನಿ” ಎಂದೆ.

Next Article