ಕುಂಕುಮದ ಬದಲು ಸಿದ್ದರಾಮಯ್ಯಗೆ ಟೋಪಿ ಹಾಕಿ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯೇ ಹೋದರೂ ಹಣೆಗೆ ಕುಂಕುಮ ಹಚ್ಚದಂತೆ ರಾಜ್ಯದ ಜನರಲ್ಲಿ ಶಾಸಕ ಅರವಿಂದ ಬೆಲ್ಲದ ಮನವಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲಿನಿಂದಲೂ ಹಿಂದೂ ವಿರೋಧಿ. ಓಲೈಕೆ ರಾಜಕಾರಣ ಮಾಡುವ ಉದ್ದೇಶದಿಂದ ಹಿಂದೂ ಆಚರಣೆಗಳನ್ನು ವಿರೋಧಿಸುತ್ತಾರೆ. ಹೀಗಾಗಿ ಅವರು ಹೋದಲ್ಲೆಲ್ಲ ಕುಂಕುಮ ಹಚ್ಚುವ ಬದಲು ಟೋಪಿ ಹಾಕಿ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ದೆಹಲಿ ಚಲೋ ಚಳುವಳಿ ವಿಚಾರವಾಗಿ ಮಾತನಾಡಿ, ಶಾಸಕರಿಗೆ ಅನುದಾನ ಕೊಡುವ ಯೋಗ್ಯತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ನಾನೂ ಶಾಸಕನಿದ್ದೇನೆ. ಕಳೆದ 8 ತಿಂಗಳಾದರೂ ಒಂದು ಕೋಟಿ ರೂಪಾಯಿ ಅನುದಾನ ನೀಡಿಲ್ಲ. ಅವರಲ್ಲಿ ಒಡಲು, ಭ್ರಷ್ಟಾಚಾರದ ಆರೋಪದಿಂದ ಪಾರಾಗಲು ಜನರ ದಾರಿ ತಪ್ಪಿಸುವಂತಹ ಕೆಲಸ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಅವರು ಏನೇ ತಿಪ್ಪರ್ಲಾಗಾ ಹಾಕಿದರೂ ಕೇಂದ್ರದಲ್ಲಿ ನರೇಂದ್ರ ಮೋದಿಯವರನ್ನೇ ಆರಿಸಿ ತರುವ ನಿರ್ಧಾರ ಜನ ಮಾಡಿದ್ದಾರೆ. ಕೇಂದ್ರ ಸರ್ಕಾರದ ದುಡ್ಡನ್ನು ರಾಜ್ಯ ನಾಯಕರು ಮತ್ತು ಅವರ ಚೇಲಾಗಳು ಜೇಬಿಗೆ ಇಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರದ ಮೂಲಕ ನಾಯಕರೆಲ್ಲಾ ಜೇಬು ತುಂಬಿಸಿಕೊಳ್ತಾ ಇದ್ದಾರೆ. ಅದೇ ದುಡ್ಡನ್ನು ಬರಗಾಲ, ಅಭಿವೃದ್ಧಿಗೆ ಹಾಕಲಿ. ತಾವು ಲೋಕಸಭೆಯಲ್ಲಿ ಗೆಲ್ಲಲ್ಲ ಅಂತಾ ಗೊತ್ತಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳು ಕೇವಲ ಲೋಕಸಭಾ ಚುನಾವಣೆವರೆಗೂ ಮಾತ್ರ. ಅದಕ್ಕಾಗಿಯೇ ಗ್ಯಾರಂಟಿ ರದ್ದಿನ ಬಗ್ಗೆ ಪೀಠಿಕೆ ಹಾಕುತ್ತಿದ್ದಾರೆ ಎಂದರು.