For the best experience, open
https://m.samyuktakarnataka.in
on your mobile browser.

ಕುಂಭದ್ರೋಣ ಮಳೆಗೆ ವಿಜಯಪುರ `ಹೈರಾಣ'

05:19 PM Sep 24, 2024 IST | Samyukta Karnataka
ಕುಂಭದ್ರೋಣ ಮಳೆಗೆ ವಿಜಯಪುರ  ಹೈರಾಣ

ವಿಜಯಪುರ: ಸೋಮವಾರ ಸಂಜೆ ವೇಳೆಗೆ ನಿರಂತರವಾಗಿ ಸುರಿದ ಕುಂಭದ್ರೋಣ ಮಳೆಗೆ ವಿಜಯಪುರದ ಡೋಣಿ ನದಿಗೆ ಪ್ರವಾಹ ಪರಿಸ್ಥಿತಿ ಆತಂಕ ಎದುರಾಗಿದೆ.
ಎತ್ತ ನೋಡಿದರೂ ಸಹ ನೀರು ಹಾಗೂ ಚರಂಡಿ ನೀರು ಧಾರಕಾರವಾಗಿ ರಸ್ತೆ ಮೇಲೆ ಹರಿಯುತ್ತಿತ್ತು. ಹಲವಾರು ಬಡಾವಣೆಗಳಲ್ಲಿ ಅಕ್ಷರಶಃ ನಡುಗಡ್ಡೆಯಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನಜೀವನವೇ ಅಸ್ತವ್ಯವಸ್ಥವಾಗಿ, ಬೋಟ್ ಮೂಲಕ ನೀರಿನಿಂದ ಹೊರಗಡೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರ ಸೇರಿದಂತೆ ಜಿಲ್ಲಾದ್ಯಂತ ರಾತ್ರಿಯಿಡಿ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶದ ಬಡಾವಣೆಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಜಾಗರಣೆ ಮಾಡುವಂತಾಯಿತು. ಅಲ್ಲದೆ ರಸ್ತೆಗಳು ನದಿಯಂತಾಗಿ, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.
ನವಭಾಗ ರಸ್ತೆ, ಬಿಲಾಲ್ ನಗರ, ಇಬ್ರಾಹಿಂ ರೋಜಾಗೆ ಹೊಂದಿಕೊಂಡಿರುವ ಮುಜಾವರ್ ಕಾಲೋನಿ, ಬಾಗವಾನ ಗಲ್ಲಿ, ಸ್ಟೇಷನ್ ರಸ್ತೆ ಹಿಂಭಾಗದ ಬಡಾವಣೆಗಳು, ಬಬಲೇಶ್ವರ ನಾಕಾ, ಜಮಖಂಡಿ ರಸ್ತೆ, ಕೆಸಿ ನಗರ, ಆಲಕುಂಟೆ ನಗರ, ಮುಗಳಖೋಡ ಮಠ ಆವರಣ ಸೇರಿ ಸುತ್ತಲು ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿದ್ದವು.
ನಿನ್ನೆ ರಾತ್ರಿಯಿಂದಲೇ ದೊಡ್ಡ ಪ್ರಮಾಣದಲ್ಲಿ ನೀರು ಅನೇಕ ಮನೆಗಳಿಗೆ ನುಗ್ಗಿದ ಪರಿಣಾಮ ನೀರು ಹೊರಹಾಕಲು ರಾತ್ರಿಯಿಡೀ ಜನರು ಶ್ರಮಿಸಿದರು.
ಬಬಲೇಶ್ವರ ನಾಕಾ ಬಳಿಯ ಬಿದನೂರ ಪೆಟ್ರೋಲ್ ಪಂಪ್ ಜಲಾವೃತವಾದರೆ, ಕಾಮತ್ ಹೋಟೆಲ್ ನೆಲ ಮಹಡಿಯಲ್ಲಿರುವ ಸೂಪರ್ ಮಾರ್ಕೆಟ್‌ಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿತ್ತು.

Tags :