ಕುಂಭಮೇಳವು ಭಾರತದ ಆಧ್ಯಾತ್ಮಿಕ ಅಸ್ಮಿತೆ
ಹಿಂದೂ ಸನಾತನ ಸಂಸ್ಕೃತಿಯಲ್ಲಿ ಕುಂಭಮೇಳಕ್ಕೆ ವಿಶೇಷವಾದ ಮಹತ್ವವಿದೆ. ಈ ಪವಿತ್ರ ಘಟನೆಯು ಭಾರತದ ನಾಲ್ಕು ಪವಿತ್ರ ಸ್ಥಳಗಳಲ್ಲಿ ನಡೆಯುತ್ತದೆ. ಭಾರತದ ಉದ್ದಗಲದಲ್ಲಿ ಇರುವ ಸರ್ವ ಜಾತಿಯ, ಸರ್ವ ವರ್ಣದವರೂ ಒಟ್ಟಾಗಿ, ಪವಿತ್ರನದಿ ಸ್ನಾನ ಮಾಡುವ ಮಹಾ ಸಂಗಮದ, ವಿವಿಧತೆಯಲ್ಲಿ ಏಕತೆ ಕಾಣುವ ವಿಶೇಷ ಧಾರ್ಮಿಕ ಮಹಾ ಉತ್ಸವ ಈ ಕುಂಭಮೇಳ.
ಕುಂಭಮೇಳದ ವಿಶೇಷತೆ ಪುರಾಣಗಳಲ್ಲಿ ಸಿಗುತ್ತದೆ. ದೇವಗಣ ಮತ್ತು ರಾಕ್ಷಸರು ಅಮರತ್ವದ ಅಮೃತಕ್ಕಾಗಿ ಒಟ್ಟಿಗೆ ಸೇರಿ ಸಮುದ್ರಮಂಥನ ಮಾಡುತ್ತಾರೆ. ವಿಷ್ಣುವಿನ ಕುರ್ಮಾವಾವತಾರದ ಕೂರ್ಮದ ಬೆನ್ನಮೇಲೆ ಮೇರು ಪರ್ವತವನ್ನು ಕಡೆಗೋಲಿನಂತೆ ಇಟ್ಟು, ಆದಿಶೇಷನನ್ನು ಹಗ್ಗವನ್ನಾಗಿಸಿ, ಮೇರುಪರ್ವತಕ್ಕೆ ಸುತ್ತಿ ಆದಿಶೇಷನ ತಲೆಯ ಭಾಗದಲ್ಲಿ ಸರ್ವದೇವತೆಗಳೂ ಹಾಗು ಬಾಲ ಭಾಗದಲ್ಲಿ ಅಸುರರೂ ಹಿಡಿದು ಮೇರುಪರ್ವತವನ್ನು ಕಡಗೋಲಿನಂತೆ ಕ್ಷೀರ ಸಮುದ್ರವನ್ನು ಕಡೆದಾಗ, ಹೇರಳವಾದ ಸಂಪತ್ತು ಪ್ರಾಪ್ತಿಯಾಗುತ್ತದೆ. ಮುಂದೆ ಅಮೃತದ ಕುಂಭ ಬಂದಾಗ ದೇವಾ ದಾನವರು ಒಟ್ಟಿಗೆ ಮೊದಲು ಅಮರತ್ವ ಸಾಧಿಸಬೇಕು ಎಂದು ಕುಂಭವನ್ನು ಸ್ವಾಧೀನಪಡಿಸಿಕೊಳ್ಳಲು ಹೋದಾಗ, ಮಹಾವಿಷ್ಣು ಮೋಹಿನಿ ರೂಪದಿಂದ ದೈತ್ಯರಿಂದ ಅಮೃತದ ಕುಂಭವನ್ನು ಮರೆಮಾಚುವಾಗ ಆ ಕುಂಭದ ನಾಲ್ಕು ಹನಿಗಳು ನಾಲ್ಕು ಸ್ಥಳಗಳಲ್ಲಿ ಚೆಲ್ಲುತ್ತದೆ. ಆ ಪವಿತ್ರ ಸ್ಥಳಗಳೇ ಪ್ರಯಾಗರಾಜ, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ. ಕುಂಭಮೇಳವು ವೈದಿಕ ಜ್ಯೋತಿಷ್ಯದ ರಹಸ್ಯಗಳೊಂದಿಗೆ ಹೆಣೆದುಕೊಂಡಿರುವ ಹಬ್ಬವಾಗಿದೆ.
ಗುರುಗ್ರಹವು ವೃಷಭ ರಾಶಿಯಲ್ಲಿದ್ದಾಗ ಮತ್ತು ಸೂರ್ಯ ಮತ್ತು ಚಂದ್ರರು ಮಕರ ರಾಶಿಯಲ್ಲಿ ಸಂಚರಿಸುವಾಗ ಕುಂಭಮೇಳಗಳು ಜರಗುತ್ತವೆ. ಈ ಕುಂಭಮೇಳದ ವಿಶೇಷವೆಂದರೆ ೧೪೪ ವರ್ಷಗಳಿಗೊಮ್ಮೆ ಬರುವ ಮಹಾ ಕುಂಭಮೇಳವಿದು. ಕುಂಭಮೇಳದ ೪೫ ದಿನಗಳಲ್ಲಿ ಪೌರ್ಣಿಮೆ, ಅಮವಾಸ್ಯೆ, ಶಾಹಿ ಸ್ನಾನ ಅಥವಾ ರಾಜಯೋಗಿ ಸ್ನಾನ ವಿಶೇಷ ಪ್ರಸಿದ್ಧಿ ಪಡೆದಿದೆ. ಇಂಥ ಪವಿತ್ರ ದಿನಗಳಲ್ಲಿ ಭಗವಂತನ ಪ್ರೀತಿಗಾಗಿ, ಆಧ್ಯಾತ್ಮಿಕ ಸಾಧನೆಗಾಗಿ ಸ್ನಾನ ಮಾಡುವುದರಿಂದ ಅಮರತ್ವದ ಸಾಧನೆಯ ಮಾರ್ಗ ನಿಶ್ಚಯವಾಗಿ ಗೋಚರಿಸುತ್ತದೆ ಎಂದು ಹಿಂದೂ ಸಂಸ್ಕೃತಿಯಲ್ಲಿರುವ ಪ್ರಬಲ ನಂಬಿಕೆ.
ಈ ಕುಂಭಮೇಳ ನಡೆಯುವ ಸಮಯದಲ್ಲಿ ಪ್ರಪಂಚದಲ್ಲಿ ಇರುವ ಎಲ್ಲಾ ಆಧ್ಯಾತ್ಮಿಕ ವಿಷಯದಲ್ಲಿ ಸಾಧನೆ ಮಾಡಿದ, ಮಹಾನ್ ಸಾಧುಗಳು, ಜ್ಞಾನಿಗಳು, ಪವಾಡ ಪುರುಷರು ಒಟ್ಟಿಗೆ ಒಂದೇ ಸ್ಥಳದಲ್ಲಿ ಸೇರುವ ಮಹಾ ಪರ್ವಕಾಲ. ಭೂಮಿಯ ಮೇಲಿನ ಅತಿದೊಡ್ಡ ಆಧ್ಯಾತ್ಮಿಕ ಸಭೆ. ಇಂತಹ ಸಾಧನೆಯ ಉತ್ತುಂಗದಲ್ಲಿರುವವರ ದರ್ಶನ, ಅವರ ವಿದ್ವತ್‌ವೀಕ್ಷಣೆ, ಅವರ ಆಚಾರ, ವಿಚಾರಗಳು, ಸಾಧನೆಯ ಮಾರ್ಗಗಳು, ನಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕ ಧನಾತ್ಮಕ ಪರಿಣಾಮ ಉಂಟುಮಾಡುತ್ತವೆ.
ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಬರಬಹುದಾದ ಈ ಕುಂಭ ಮೇಳದಲ್ಲಿ ಪಾಲ್ಗೊಂಡು, ಆಧ್ಯಾತ್ಮಿಕ ಚಿಂತನೆಗಳನ್ನು ಧನಾತ್ಮಕವಾಗಿ ಪಡೆದುಕೊಳ್ಳುವ ವಿಶೇಷ ಅವಕಾಶವನ್ನು ಸರ್ವರೂ ಉಪಯೋಗಿಸಿಕೊಂಡು, ಜನ್ಮಜನ್ಮಾಂತರದ ಪಾಪಗಳನ್ನು ಕಳೆದುಕೊಳ್ಳೋಣ.
ಮುಕ್ತಿಮಾರ್ಗದಲ್ಲಿ ಬೇಕಾದ ಸಾಧನೆ ಮಾರ್ಗದಲ್ಲಿ ಮುಂದುವರೆಯಲು ಈ ಪವಿತ್ರನದಿ ದೈವ ನದಿಗಳಾದ ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಕುಂಭ ಸ್ನಾನವನ್ನು ಮಾಡಿ ಕೃತಾರ್ಥರಾಗೋಣ.