ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗೃತೆ
ಬೆಂಗಳೂರು: ಕುಡಿಯುವ ನೀರಿನ ಲಭ್ಯತೆಗೆ ಸಮಸ್ಯೆಯಾಗದಂತೆ ಮುಂಜಾಗೃತೆಯಾಗಿ ಕಂಟಿನ್ಜೆನ್ಸಿ ಯೋಜನೆ ರಚಿಸಲಾಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಮಾರ್ಚ್ ೨ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (ಸಿಇಒ) ವಿಸ್ತ್ರತ ಸಭೆ ನಡೆಸಿ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಲಭ್ಯತೆಗೆ ಸಮಸ್ಯೆಯಾಗದಂತೆ ಮುಂಜಾಗೃತೆಯಾಗಿ ಕಂಟಿನ್ಜೆನ್ಸಿ ಯೋಜನೆ ರಚಿಸಲಾಗಿದೆ.
- ಕೂಡಲೇ ಎಲ್ಲಾ ಸಿಇಒಗಳು ತಮ್ಮ ಕಾರ್ಯವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರತಿ ಗ್ರಾಮ ಮಟ್ಟದಲ್ಲಿ ಕುಡಿಯುವ ನೀರಿನ ಲಭ್ಯತೆಯ ಪ್ರಮಾಣದ ವಸ್ತು ಸ್ಥಿತಿ ವರದಿ ತಯಾರಿಸಬೇಕು
- ಮುಂದಿನ ಮೂರು ತಿಂಗಳು ಪ್ರತಿ 15 ದಿನಕ್ಕೊಮ್ಮೆ ಮಾಧ್ಯಮಗಳ ಮೂಲಕ ಕುಡಿಯುವ ನೀರಿನ ಲಭ್ಯತೆ, ನಿರಂತರ ನೀರಿನ ಪೂರೈಕೆಗೆ ಸರ್ಕಾರದ ಕ್ರಮಗಳ ಕುರಿತು ಜನತೆಗೆ ನಿರಂತರ ಮಾಹಿತಿ ಒದಗಿಸುವ ಕೆಲಸ ಮಾಡಬೇಕು
- ಎಲ್ಲಾ ಸಿಇಒಗಳು ಪ್ರತಿ ಸೋಮವಾರ ತಮ್ಮ ಕಾರ್ಯಕ್ಷೇತ್ರಗಳ ಕಡ್ಡಾಯ ಪ್ರವಾಸ ಮಾಡಿ ಜನರನ್ನು ಭೇಟಿ ಮಾಡಿ ಸಮಸ್ಯೆಗಳಿದ್ದರೆ ಪರಿಹಾರ ಒದಗಿಸಬೇಕು
- ಪ್ರವಾಸದ ವೇಳೆ ನರೇಗಾ ಕಾಮಗಾರಿ, ಕೂಸಿನ ಮನೆ ಹಾಗೂ ಅರಿವು ಕೇಂದ್ರಗಳ ಕಡ್ಡಾಯ ತಪಾಸಣೆ ನಡೆಸಬೇಕು
- ಪ್ರತಿ ತಿಂಗಳ ಎರಡನೇ ಹಾಗೂ ನಾಲ್ಕನೇ ಮಂಗಳವಾರ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸಲು ವಿಶೇಷ ಕಾರ್ಯಸೂಚಿ
- ಕುಡಿಯುವ ನೀರಿನ ಲಭ್ಯತೆ ಕಡಿಮೆಯಿರುವ ಗ್ರಾಮಗಳಿಗೆ ಕಂಟಿನ್ಜೆನ್ಸಿ ಅನುದಾನದಿಂದ ನೀರು ಒದಗಿಸಲು ತತಕ್ಷಣ ಕ್ರಮ, ಅಲಭ್ಯತೆ ಕಾಡಿದರೆ ಕೂಡಲೇ ಸಚಿವರ ಗಮನಕ್ಕೆ ತರಲು ಸೂಚನೆ
- ಬಾಕಿ ಉಳಿದಿರುವ ಎಲ್ಲಾ ನರೇಗಾ ಕಾಮಗಾರಿಗಳ ಪೂರ್ಣಗೊಳಿಸಲು ಕ್ರಮ
- ವಿಶೇಷವಾಗಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಕುಲುಷಿತವಾಗದಂತೆ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಲು ಸೂಚನೆ
ಈ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗಲಿರುವ ಹಿನ್ನಲೆಯಲ್ಲಿ ಈಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲು ತಿಳಿಸಲಾಗಿದೆ. ಈ ಬೇಸಿಗೆಯಲ್ಲಿ ಪರಿಣಾಮಕಾರಿಯಾಗಿ ಕುಡಿಯುವ ನೀರಿನ ಲಭ್ಯತೆಯನ್ನು ಕಾಪಾಡಿಕೊಂಡು ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂದಿದ್ದಾರೆ.