ಕುಣಿಗಲ್ನ ಕುದುರೆ ಫಾರಂಗೆ ಮತ್ತೆ ಗ್ರಹಚಾರ
ಕರ್ನಾಟಕ ಸರ್ಕಾರ ಸಮಗ್ರವಾಗಿ ಈ ಪ್ರಸ್ತಾಪವನ್ನು ಮರುಪರಿಶೀಲಿಸಿ ಕುಣಿಗಲ್ನಲ್ಲಿ ಈ ಫಾರಂ ತೊಂದರೆ ಇಲ್ಲದಂತೆ ಮುಂದುವರಿಯುವಂತೆ ನೋಡಿಕೊಳ್ಳುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ. ಇತಿಹಾಸದ ಕುರುಹುಗಳ ಜಾಗ ಸಾರ್ವಜನಿಕ ಹಿತಾಸಕ್ತಿ ಪ್ರದರ್ಶನಕ್ಕೆ ತಾಣವಾಗುವುದು ಆರೋಗ್ಯಕರ ರಾಜಕಾರಣದ ಲಕ್ಷಣವಾಗಲಾರದು. ರಾಜಕೀಯ ಪಕ್ಷಗಳು ವೈಮನಸ್ಯ ಮರೆತು ಈ ವಿಚಾರದಲ್ಲಿ ಸಹಮತದೊಂದಿಗೆ ಈ ಫಾರಂ ಉಳಿಯುವಂತೆ ನೋಡಿಕೊಳ್ಳುವುದರಲ್ಲಿ ಜನಹಿತವಿದೆ.
ರಾಜಕಾರಣದ ಪ್ರೇರಣೆಯಿಂದಲೋ ಇಲ್ಲವೇ ಎಲ್ಲವನ್ನೂ ಬಳಕೆ ಮಾಡುವ ಗಿರಾಕಿ ಮನೋಭಾವದಿಂದಲೋ ಏನೋ ಸರ್ಕಾರದ ಆಡಳಿತಗಾರರಿಗೆ ಇತಿಹಾಸ ಹಾಗೂ ಪರಂಪರೆಯ ಮಹತ್ವದ ತಾಣಗಳ ಅರಿವಿದ್ದರೂ ಒಂದು ರೀತಿಯ ಜಾಣ ಮರೆವು. ಇದಕ್ಕೆ ಇತಿಹಾಸ ಪ್ರಸಿದ್ಧ ಕುಣಿಗಲ್ ಕುದುರೆ ಫಾರಂ ಪ್ರದೇಶದಲ್ಲಿ ವಸತಿ ಯೋಜನೆಯೊಂದನ್ನು ನಿರ್ಮಾಣ ಮಾಡುವ ಲೆಕ್ಕಾಚಾರ ಇದಕ್ಕೊಂದು ತಾಜಾ ನಿದರ್ಶನ. ಕುಣಿಗಲ್ ಕುದುರೆ ಫಾರಂ ಇತಿಹಾಸ ಪ್ರಸಿದ್ಧವಾದುದು. ಟಿಪ್ಪು ಸುಲ್ತಾನ್ ಕಾಲದಲ್ಲಿ ಮೈಸೂರು ಪ್ರಾಂತದ ಕುದುರೆಗಳ ಅಭಿವೃದ್ಧಿಪಡಿಸುವ ತಾಣವಾಗಿ ರೂಪುಗೊಂಡು ಅನೇಕ ಯುದ್ಧಗಳಲ್ಲಿ ಇಲ್ಲಿ ತರಬೇತಾದ ಕುದುರೆಗಳು ಬಳಕೆಯಾಗಿರುವುದು ಬಹುಶಃ ಆಡಳಿತಗಾರರಿಗೆ ಗೊತ್ತಿರಲಾರದೇನೋ. ಸಾರ್ವಜನಿಕ ಹಿತಾಸಕ್ತಿ ಎಂಬ ಕಾರಣವನ್ನು ಮುಂದೊಡ್ಡಿ ಈಗ ಸಂಪೂರ್ಣ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ವಸತಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವ ಸರ್ಕಾರದ ಕ್ರಮ ಈಗ ವಿವಾದಕ್ಕೆ ಗ್ರಾಸ.
ಕುಣಿಗಲ್ ಕುದುರೆ ಫಾರಂ ವಿವಾದಕ್ಕೆ ಗ್ರಾಸವಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡಾ ವಿವಾದಗಳು ಭುಗಿಲೆದ್ದಾಗ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಸರ್ಕಾರಗಳು ತೆಪ್ಪಗಾಗಿದ್ದವು. ಉದ್ಯಮಿ ವಿಜಯ್ ಮಲ್ಯ ಒಡೆತನದ ಈ ಕುದುರೆ ಫಾರಂನ ಗುತ್ತಿಗೆ ನವೀಕರಣದ ಬಗ್ಗೆ ಈ ಹಿಂದೆ ಹಲವಾರು ತಕರಾರುಗಳು ವ್ಯಕ್ತವಾಗಿದ್ದವು. ಆಗಲೂ ಕೂಡಾ ವಸತಿ ಯೋಜನೆ ನಿರ್ಮಾಣ ಮುನ್ನೆಲೆಗೆ ಬಂದಿತ್ತು. ಸರ್ಕಾರವೂ ಕೂಡಾ ಈ ಯೋಜನೆಯನ್ನು ಜಾರಿ ಮಾಡಲು ತುದಿಗಾಲ ಮೇಲೆ ನಿಂತಿತ್ತು. ಆದರೆ, ಸಾರ್ವಜನಿಕರ ಆಕ್ರೋಶ ಇದಕ್ಕೆ ಅಡ್ಡಿಯಾಗಿಹೋಯಿತು. ಪರಂಪರೆಯಿಂದ ರಾಜಕಾರಣಿಗಳು ಬುದ್ಧಿ ಕಲಿಯುವುದಿಲ್ಲ ಎಂಬ ಮಾತೊಂದಿದೆ. ಈ ಹಿಂದೆ ವಸತಿ ಯೋಜನೆ ಕಾರ್ಯಸಾಧುವಲ್ಲ ಎಂಬುದು ಖಚಿತವಾಗಿದ್ದರೂ ಬದಲಾದ ರಾಜಕೀಯ ಸನ್ನಿವೇಶ ಬಳಸಿಕೊಂಡು ಪಟ್ಟಭದ್ರರು ಮತ್ತೆ ಇದೇ ಯೋಜನೆಗೆ ತಳುಕು ನೀಡಿ ಜಾರಿಗೊಳಿಸಲು ಹೊರಟಿರುವುದು ಜನರ ನಂಬಿಕೆಗೆ ಬಗೆದ ದ್ರೋಹ.
ಕರ್ನಾಟಕದಲ್ಲಿ ಈಗಿರುವುದು ಇದೊಂದೇ ಕುದುರೆ ಅಭಿವೃದ್ಧಿಯ ಫಾರಂ. ಕುಣಿಗಲ್ ಪ್ರದೇಶದ ಮೇಲ್ಮೈ ಲಕ್ಷಣ ಹಾಗೂ ಹಿತಕರ ಹವಾಗುಣ ಕುದುರೆ ಸಾಕಾಣಿಗೆ ಹೇಳಿ ಮಾಡಿಸಿದ ಕೇಂದ್ರ ಎಂಬ ತಜ್ಞರ ಅಭಿಪ್ರಾಯದ ಮೇರೆಗೆ ಹಲವಾರು ವರ್ಷಗಳಿಂದಲೂ ಇಲ್ಲಿ ಕುದುರೆ ಸಾಕಣೆ ಹಾಗೂ ಅಭಿವೃದ್ಧಿ ನಡೆಯುತ್ತಿದೆ. ಆದರೆ, ಈಗ ಇಂತಹ ಫಲವತ್ತಾದ ಹಣ ತರುವ ಪ್ರದೇಶದಲ್ಲಿ ವಸತಿ ಯೋಜನೆಯನ್ನು ನಿರ್ಮಾಣ ಮಾಡಿ ದೊಡ್ಡವರೆನಿಸಿಕೊಳ್ಳುವ ಸಣ್ಣ ಮನಸ್ಸು ಆಡಳಿತಗಾರರಿಗೆ ಬರಲು ರಾಜಕೀಯ ಮುಖಂಡರ ಒತ್ತಾಸೆಯೇ ಕಾರಣ ಎಂಬುದು ರಹಸ್ಯವಾಗಿ ಉಳಿದಿಲ್ಲ. ಹಾಸನ ಹಾಗೂ ಬೆಂಗಳೂರು ನಡುವಣ ರೈಲು ಮಾರ್ಗದ ನಿರ್ಮಾಣದ ಸಂಬಂಧದಲ್ಲಿ ಈ ಫಾರಂನ ಬಹುತೇಕ ಪ್ರದೇಶ ರೈಲ್ವೆ ಇಲಾಖೆಗೆ ಸ್ವಾಧೀನಕ್ಕೆ ಹೋಗಬೇಕಾಗಿತ್ತು. ಆದರೆ, ಆಗಲೂ ಕೂಡಾ ಜನಾಕ್ರೋಶ ಭುಗಿಲೆದ್ದಿದ್ದನ್ನು ಗಮನಿಸಿದ ಆಗಿನ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವರಾಗಿದ್ದ ಕರ್ನಾಟಕದ ಕೆ.ಎಚ್. ಮುನಿಯಪ್ಪ ಅವರು ಮಧ್ಯಪ್ರವೇಶಿಸಿ ಈ ಫಾರಂಗೆ ಹೆಚ್ಚಿನ ತೊಂದರೆಯಾಗದ ರೀತಿಯಲ್ಲಿ ರೈಲು ಮಾರ್ಗ ನಿರ್ಮಾಣವಾಗುವಂತೆ ನೋಡಿಕೊಂಡಿದ್ದರು. ಪ್ರಭಾವಿ ಮುಖಂಡರಾಗಿದ್ದ ಮಾಜಿ ಸಚಿವ ವೈ.ಕೆ. ರಾಮಯ್ಯ ಅವರು ಕುಣಿಗಲ್ ಫಾರಂ ಪ್ರದೇಶದ ಪರಭಾರೆ ವಿರುದ್ಧ ವಿಧಾನಸಭೆಯಲ್ಲಿಯೇ ರಣಕಹಳೆ ಮೊಳಗಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಆದರೆ, ಆಡಳಿತಗಾರರಿಗೆ ಜಾಣ ಮರೆವು. ಹೀಗಾಗಿ ಮತ್ತೊಮ್ಮೆ ಈ ಯೋಜನೆಗೆ ಮರುಜೀವ.