ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕುದುರೆಮುಖ: 385 ಗುತ್ತಿಗೆ ನೌಕರರ ಕೆಲಸಕ್ಕೆ ಕುತ್ತು

05:21 PM Oct 25, 2024 IST | Samyukta Karnataka

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್)ನಲ್ಲಿ ನೇರ ಮತ್ತು ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ದ.ಕ. ಮತ್ತು ಉಡುಪಿ ಜಿಲ್ಲೆಯ ೩೮೫ ನೌಕರರನ್ನು ಕೈಬಿಡಲು ಕೆ.ಐ.ಒ.ಸಿ.ಎಲ್ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಅ. ೧ರಂದು ನೌಕರರಿಗೆ ನೋಟೀಸ್ ನೀಡಿರುವ ಕಂಪನಿ ಅ. ೩೦ರಂದು ನೌಕರಿಯನ್ನು ಅಂತಿಮಗೊಳಿಸುವಂತೆ ಸೂಚನೆ ನೀಡಿದೆ. ಕಂಪನಿಯ ಆರ್ಥಿಕ ಸ್ಥಿತಿ ಕುಸಿಯುತ್ತಿದ್ದು, ಈ ಕಾರಣಕ್ಕಾಗಿ ನೌಕರರನ್ನು ವಜಾಗೊಳಿಸುತ್ತಿರುವುದಾಗಿ ಕೆ.ಐ.ಒ.ಸಿ.ಎಲ್ ಮಾಹಿತಿ ನೀಡಿದೆ ಎನ್ನಲಾಗಿದೆ.
ಕಂಪನಿಯಲ್ಲಿ ನೇರ ಗುತ್ತಿಗೆ ಆಧಾರದಲ್ಲಿ ೩೫ ಮಂದಿ ಮತ್ತು ಹೊರಗುತ್ತಿಗೆ ಆಧಾರದಲ್ಲಿ ೩೫೦ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ವಜಾಕ್ಕೆ ನೋಟೀಸ್ ಪಡೆದುಕೊಂಡಿರುವ ನೌಕರರ ಪೈಕಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶೇ. ೯೦ ನೌಕರರಿದ್ದಾರೆ. ಇದಲ್ಲದೆ, ಸುಮಾರು ೪೦೦ ಮಂದಿ ಖಾಯಂ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕಂಪೆನಿ ತನ್ನ ೪೦೦ ಖಾಯಂ ಉದ್ಯೋಗಿಗಳ ಸಂಬಳಕ್ಕಾಗಿ ಪ್ರತೀ ತಿಂಗಳು ಸುಮಾರು ೬ ಕೋಟಿ ರೂ.ಗೂ ಅಧಿಕ ಹಣವನ್ನು ವ್ಯಯಿಸುತ್ತಿದ್ದರೆ, ನೇರ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಸಂಬಳಕ್ಕಾಗಿ ೧ ಕೋಟಿ ರೂ. ಗೂ ಕಡಿಮೆ ಹಣವನ್ನು ವೆಚ್ಚ ತಗುಲುತ್ತಿದೆ ಎನ್ನಲಾಗಿದೆ.
ಜಿಲ್ಲಾಧಿಕಾರಿಗೆ ಮನವಿ..
ಕಾರ್ಮಿಕರನ್ನು ತುರ್ತು ವಜಾಗೊಳಿಸಿರುವುದರಿಂದ ಅವರ ಕುಟುಂಬವನ್ನು ಮುನ್ನಡೆಸುವುದು ಬಹಳ ಕಷ್ಟಕರವಾಗುತ್ತದೆ. ಈ ಕೆಲಸವನ್ನು ನಂಬಿ ಕಾರ್ಮಿಕರು ಮನೆ, ವಾಹನ, ಮದುವೆ ಇತರೆ ದೈನಂದಿನ ಚಟುವಟಿಕೆಗಳಿಗಾಗಿ ಬ್ಯಾಂಕುಗಳಿಂದ, ಇತರರಿಂದ ಸಾಲವನ್ನು ಪಡೆದು ಅವನ್ನು ಮರುಪಾವತಿಸಲು ಹಾಗೂ ಕುಟುಂಬದ ನಿರ್ವಹಣೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯ ನಿರ್ವಹಣೆಗೆ ಈ ಕೆಲಸವನ್ನೇ ಅವಲಂಬಿಸಿರುತ್ತಾರೆ. ಈ ಕೆಲಸವನ್ನೇ ನಂಬಿಕೊಂಡಿರುವ ನೇರ ಹಾಗೂ ಹೊರ ಗುತ್ತಿಗೆ ಕಾರ್ಮಿಕರಿಗೆ ನೀಡಿದ ವಜಾ ನೋಟಿಸನ್ನು ಕೂಡಲೇ ಹಿಂಪಡೆದು ಕಾರ್ಮಿಕರನ್ನು ಕಂಪನಿಯಲ್ಲಿ ಮರುನೇಮಕ ಮಾಡಬೇಕು. ಈ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಧಿಕಾರಿ ಕೆ.ಐ.ಒ.ಸಿ.ಎಲ್ ಅಧಿಕಾರಿಗಳ ಸಭೆ ಕರೆದು ಸ್ಥಳೀಯ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.

Next Article