ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ವ್ಯಕ್ತಿ
ಕೊಪ್ಪಳ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯಾವಾಗಲೂ ಹಿಟ್ ಆ್ಯಂಡ್ ರನ್ ಮಾಡುವ ವ್ಯಕ್ತಿ ಆಗಿದ್ದಾರೆ. ಈ ಮೊದಲು ಕೂಡಾ ಪೆಂಡ್ರೈವ್ ಇದೆ ಎನ್ನುತ್ತಿದ್ದರು. ಪೆಂಡ್ರೈವ್ ಕೊಟ್ಟರೇ. ಯಾವುದೇ ಪ್ರಕರಣವನ್ನು ಕುಮಾರಸ್ವಾಮಿ ತಾರ್ತಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಬಸಾಪುರ ಗ್ರಾಮದ ಖಾಸಗಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಿದ್ದರಾಮಯ್ಯರಿಗೆ ಸಂಬಂಧಿಸಿದ ಲಾರಿಯಷ್ಟು ದಾಖಲೆಗಳಿವೆ ಎಂದ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಲೋಕಾಯುಕ್ತರು ಕುಮಾರಸ್ವಾಮಿ ಪ್ರಕರಣದ ತನಿಖೆ ಮಾಡಿ, ಸಾಕ್ಷ್ಯ ಸಂಗ್ರಹಿಸಿದ್ದಾರೆ. ಬಳಿಕ ಲೋಕಾಯುಕ್ತರು ರಾಜ್ಯಪಾಲರಿಗೆ ಪ್ರಾಶುಕ್ಯೂಷನ್ನಿಗೆ ಅನುಮತಿ ಕೇಳಿದ್ದಾರೆ. ಪ್ರಾಶುಕ್ಯೂಷನ್ನಿಗೆ ಅನುಮತಿ ನೀಡುತ್ತಾರೋ ಎಂದು ಕುಮಾರಸ್ವಾಮಿ ಭಯ ಭೀತರಾಗಿದ್ದಾರೆ. ಬಂಧಿಸುವ ಸನ್ನಿವೇಶ ಬಂದಿಲ್ಲ. ಬಂಧಿಸುವ ಸನ್ನಿವೇಶ ಬಂದರೆ ಮುಲಾಜಿಲ್ಲದೇ ಬಂಧಿಸುತ್ತೇವೆ ಎಂದರು.
ಅಬ್ರಾಹಂ ನನ್ನ ಬಗ್ಗೆ ದೂರು ನೀಡಿದ್ದು, ಲೋಕಾಯುಕ್ತರು ತನಿಖೆ ಮಾಡಿಲ್ಲ. ಸಾಕ್ಷ್ಯಗಳನ್ನು ಸಂಗ್ರಹಿಸಿಲ್ಲ. ಆದರೂ ದೂರು ನೀಡಿದ ೮ ಗಂಟೆಯಲ್ಲಿಯೇ ನನಗೆ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ಪ್ರಕರಣದಲ್ಲಿ ಲೋಕಾಯುಕ್ತರು ತನಿಖೆ ಮಾಡಿ, ಸಾಕ್ಷ್ಯ ಸಂಗ್ರಹಿಸಿದರೂ ಕೂಡಾ ಪ್ರಾಶುಕ್ಯೂಷನ್ ಗೆ ಅನುಮತಿ ಕೇಳಿದರೂ ರಾಜ್ಯಪಾಲರು ಕೊಟ್ಟಿಲ್ಲ. ಕಳೆದ ಕೆಲ ದಿನಗಳ ಹಿಂದೆ ಲೋಕಾಯುಕ್ತರು ರಾಜ್ಯಪಾಲರಿಗೆ ೨ನೇ ಪತ್ರ ಬರೆದಿದ್ದಾರೆ. ಆದರೂ ಅನುಮತಿ ನೀಡಿಲ್ಲ. ಇದು ತಾರತಮ್ಯ ಅಲ್ಲವೇ ಎಂದು ಪ್ರಶ್ನಿಸಿದರು.
ನಾನು ಯಾವುದೇ ಪತ್ರ ಬರೆದಿಲ್ಲ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಪತ್ರ ಸುಳ್ಳು ಪತ್ರವಾಗಿದೆ ಎಂದರು. ಹೆಸರು ಬೇಳೆಗೆ ಖರೀದಿ ಕೇಂದ್ರ ಆರಂಭಿಸುವಂತೆ ರೈತರ ಬೇಡಿಕೆ ಇದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇದ್ದರು.