ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಮುನ್ನೆಲೆಗೆ
ದಾವಣಗೆರೆ: ಮುಡಾ, ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಗಮನ ಬೇರೆಡೆ ಸೆಳೆದು ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿಯನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆದಾಳಲು ಬಳಕೆ ಮಾಡಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು ಇಂದು ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಹೆಸರಲ್ಲಿ ಸಮಾಜ ಒಡೆಯೋಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಸ್ವಾರ್ಥಕ್ಕೆ ಜಾತಿಗಣತಿ ದುರ್ಬಳಕೆ ಮಾಡಿಕೊಂಡರೆ ನಾವು ಸಹಿಸುವುದಿಲ್ಲ. ಜನಾಕ್ರೋಶದ ದಾರಿ ತಪ್ಪಿಸಲು ಜಾತಿಗಣತಿ ದುರ್ಬಳಕೆ ಮಾಡಿಕೊಂಡರೆ ನಿಮಗೆ ಅಧಿಕಾರ ನೀಡಿರುವ ನಾಡಿನ ಜನ ಕ್ಷಮಿಸಲ್ಲ ಎಂದರು.
ವಿಷಾಯಾಂತರ ಮಾಡುವುದಕ್ಕಾಗಿ ಜಾತಿಗಣತಿ ಮುನ್ನಲೆಗೆ ತರುತ್ತಿರುವ ಕಾಂಗ್ರೆಸ್‌ಗೆ ಮೀಸಲಾತಿ ವಿಷಯದಲ್ಲಿ ಬದ್ಧತೆಯೇ ಇಲ್ಲ. ದಿ. ಜವಹಾರ್‌ಲಾಲ್ ನೆಹರು ಪ್ರಧಾನಿಯಾಗಿದ್ದಾಗ ಮೀಸಲಾತಿ ದಕ್ಷತೆಗೆ ಅಡ್ಡಿಯಾಗುತ್ತದೆ ಎಂದು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಎಂಬುದೇ ಈ ಮಾತಿಗೆ ಸಾಕ್ಷಿ. ಆದರೆ, ಇಂತವರು ಬಿಜೆಪಿ, ಆರೆಸ್ಸೆಸ್‌ಗೆ ಉಪದೇಶ ಮಾಡುತ್ತಾರೆ. ಬಡ್ತಿ ಮೀಸಲಾತಿಗೆ ಸುಪ್ರೀಂ ಮೊಕದ್ದಮೆ ಬಂದಾಗ ಬಡ್ತಿ ಮೀಸಲಾತಿ ಪರವಾಗಿ ಪ್ರಮಾಣಪತ್ರ ಸಲ್ಲಿಸಿದ್ದು ಮೋದಿ ಸರ್ಕಾರ, ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಸಾಮಾಜಿಕ ನ್ಯಾಯ ತೋರಿಸಿದ್ದು ಬಿಜೆಪಿ ಸರ್ಕಾರ, ಕಾಂಗ್ರೆಸ್ ಮೀಸಲಾತಿ ವಿಷಯದಲ್ಲಿ ಕೇವಲ ರಾಜಕಾರಣ ಮಾಡಿದೆ ಎಂದು ಆಪಾದಿಸಿದರು.
ಹಿಂದುಳಿದ ವರ್ಗಕ್ಕೆ ಸಂವಿಧಾನ ಬದ್ಧವಾದ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದು ಬಿಜೆಪಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಬಂದಿದ್ದ ಕಾಂತರಾಜು ಆಯೋಗ ವರದಿ ಎಲ್ಲಿ ಇಟ್ಟುಕೊಂಡಿದ್ದೀರಿ? ಇಷ್ಟು ದಿನ ಸುಮ್ಮನಿದ್ದು ಈಗ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಮುನ್ನೆಲೆಗೆ ತಂದಿದ್ದೀರಿ. ಕುರ್ಚಿಗೆ ಆಪತ್ತು ಬಂದಾಗ ಜಾತಿಗಣತಿ ನೆನಪಾಗುತ್ತದೆ. ಕಾಂಗ್ರೆಸ್‌ನವರಿಗೆ ಮೀಸಲಾತಿ ಬಗ್ಗೆ ಬದ್ಧತೆ ಇಲ್ಲ ಎಂದು ಹರಿಹಾಯ್ದರು.
ದಲಿತ ಸಿಎಂ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹಲವು ಸಭೆಗಳಾಗುತ್ತಿರುವುದು ಕಂಡರೆ ಮುಖ್ಯಮಂತ್ರಿ ಇದ್ದಾಗಲೇ ಅವರ ಕುರ್ಚಿಗೆ ತಿಕ್ಕಾಟ ನಡೆಯುತ್ತಿದೆ ಎಂದರೆ ಸಿದ್ದರಾಮಯ್ಯ ಮೇಲೆ ಎಷ್ಟು ವಿಶ್ವಾಸವಿದೆ ಎಂಬುದು ತಿಳಿಯುತ್ತದೆ. ವಿಶ್ವಾಸವಿಲ್ಲದ್ದಕ್ಕೆ ಇಂಥ ತೆರೆಮರೆಯ ಸಭೆಗಳು ನಡೆಯುತ್ತಿವೆ ಎಂದರು.
ಮುಡಾ, ವಾಲ್ಮೀಕಿ ನಿಗಮ, ಅರ್ಕಾವತಿಯಲ್ಲಿ ಬಡಾವಣೆಯ ಭ್ರಷ್ಟಾಚಾರ ನಡೆದಿರುವ ವಿರುದ್ಧ ನಮ್ಮ ಹೋರಾಟವಷ್ಟೇ ಹೊರತು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಚಟುವಟಿಕೆ ಅವರ ಪಕ್ಷದ್ದು, ಅದರಲ್ಲಿ ನಾವು ಕೈಜೋಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಇತರೆ ಪಕ್ಷಗಳಿಗಿಂತ ಕಾಂಗ್ರೆಸ್‌ನವರಿಗೆನೆ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಹೆಚ್ಚಿನ ಆತುರವಿದ್ದಂತಿದೆ. ಹಾಗಾಗಿ, ಸಿಎಂ ಬಗ್ಗಲೇಬೇಕು. ಜನ ನಿಮಗೆ ಅಧಿಕಾರ ಕೊಟ್ಟು ಕೂರಿಸಿದ್ದಾರೆ ನಿಮ್ಮನ್ನು ಕೆಳಗಿಳಿಸುವ ಕೆಲಸವನ್ನು ನಿಮ್ಮ ಪಕ್ಷದವರೇ ಮಾಡುತ್ತಾರೆ ಎಂದರು.
ಪ್ರಜಾಪ್ರಭುತ್ವದಲ್ಲಿ ಜಗ್ಗಲ್ಲ, ಬಗ್ಗಲ್ಲ ಅನ್ನುವ ಪದ ಪ್ರಜಾಪ್ರಭುತ್ವಕ್ಕೆ ಸೂಕ್ತವಲ್ಲ. ಸಂವಿಧಾನಕ್ಕೆ ನಾವು ತಲೆಬಾಗಲೇಬೇಕು. ಜನರಿಗೆ ನಾವು ಹೆದರಲೇಬೇಕು, ಯಾಕೆಂದರೆ ಅಧಿಕಾರ ಕೊಟ್ಟವರಿಗೆ ಬೀಳಿಸುವುದು ಕಷ್ಟವಲ್ಲ ಎಂದರು.