For the best experience, open
https://m.samyuktakarnataka.in
on your mobile browser.

ಕುಸ್ತಿ ಫೆಡರೇಷನ್ ಪುನಶ್ಚೇತನ ಆಗಲಿ

11:10 AM Dec 26, 2023 IST | Samyukta Karnataka
ಕುಸ್ತಿ ಫೆಡರೇಷನ್ ಪುನಶ್ಚೇತನ ಆಗಲಿ

ದೇಶ ವಿದೇಶಗಳಲ್ಲಿ ಭಾರತದ ಮಾನ ಹರಾಜಾಗುವಂತೆ ಮಾಡಿದ್ದ ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸ್ತಿ ಫೆಡರೇಷನ್ ಚುನಾವಣೆಯ ಫಲಿತಾಂಶಗಳನ್ನು ಕೇಂದ್ರ ಸರ್ಕಾರ ಅಮಾನತಿನಲ್ಲಿಟ್ಟಿರುವುದು ಸೋತ ಕ್ರೀಡಾ ಪಟುಗಳು ಗೆದ್ದಂತಾಗಿದೆ.

ಕುಸ್ತಿ ಎಂಬುದು ಮೈನವಿರೇಳಿಸುವ ಒಂದು ಕ್ರೀಡೆ: ಹೀಗಾಗಿಯೇ ಕುಸ್ತಿಪಟುಗಳ ಆಚಾರ ವಿಚಾರದ ಕಡೆ ಸಾರ್ವಜನಿಕರ ಗಮನ. ಕಳೆದ ಸುಮಾರು ಎರಡು ವರ್ಷಗಳಿಂದ ಬೀದಿ ರಂಪಕ್ಕೆ ತಿರುಗಿದ್ದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ದೌರ್ಜನ್ಯದ ಪ್ರಕರಣ ನಾನಾ ತಿರುವು ಪಡೆದುಕೊಂಡ ನಂತರ ನಾಟಕೀಯ ರೀತಿಯಲ್ಲಿ ನಡೆದ ಚುನಾವಣಾ ಫಲಿತಾಂಶವನ್ನು ಕೇಂದ್ರ ಸರ್ಕಾರ ಹಠಾತ್ತನೇ ಅಮಾನತಿನಲ್ಲಿ ಇಟ್ಟಿರುವ ಬೆಳವಣಿಗೆ ಒಂದು ರೀತಿಯಲ್ಲಿ ಪ್ರತಿಭಟನೆಗೆ ಇಳಿದಿದ್ದ ಕುಸ್ತಿಪಟುಗಳು ಸೋತು ಗೆದ್ದಂತಾಗಿದೆ. ಕೇಂದ್ರ ಸರ್ಕಾರ ಇಂತಹ ಬಿಗುವಾದ ಕ್ರಮವನ್ನು ತಡವಾಗಿಯಾದರೂ ಕೈಗೊಂಡಿರುವ ಬೆಳವಣಿಗೆ ನಿಜಕ್ಕೂ ಸ್ವಾಗತಾರ್ಹ. ಕೇವಲ ಅಮಾನತಿಗಷ್ಟೆ ಕೇಂದ್ರದ ಕ್ರಮ ಮುಗಿಯಬಾರದು. ಇಡೀ ಕುಸ್ತಿ ಫೆಡರೇಷನ್ ಸಂಘಟನೆಯ ಆಮೂಲಾಗ್ರ ಪುನಶ್ಚೇತನಕ್ಕೆ ಅನುವಾಗುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದು ಈಗಿನ ಅಗತ್ಯ.
ಬ್ರಿಜ್ ಭೂಷಣ್ ಭಾರತೀಯ ಜನತಾ ಪಕ್ಷದ ಪ್ರಭಾವಿ ಸಂಸದ. ಉತ್ತರ ಪ್ರದೇಶದ ಪೂರ್ವ ಪ್ರಾಂತದ ಪ್ರಭಾವಿ ನಾಯಕ. ಈತನ ಹಿಡಿತದಲ್ಲಿಯೇ ಕುಸ್ತಿ ಫೆಡರೇಷನ್ ಬಹಳ ವರ್ಷಗಳಿಂದ ಇತ್ತು. ಈತನಿಗೆ ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ ಸರ್ವಪಕ್ಷಗಳಲ್ಲೂ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ಇರಲು ಆತನ ರಾಜಕೀಯ ಪ್ರಭಾವವೇ ಕಾರಣ. ಹೀಗಾಗಿಯೇ ಗುರುತರ ಆರೋಪಗಳು ಎದುರಾದರೂ ಆತನ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿತ್ತು. ಕುಸ್ತಿ ಫೆಡರೇಷನ್ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಬಲಗೈ ಬಂಟ ಸಂಜಯ್ ಸಿಂಗ್ ಆಯ್ಕೆಯಾಗುತ್ತಿದ್ದಂತೆಯೇ ಅನಗತ್ಯ ಅವಸರದಿಂದ ಕುಸ್ತಿ ಕ್ರೀಡಾಕೂಟಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ವೇಳಾಪಟ್ಟಿಯನ್ನು ಘೋಷಿಸಿದ್ದು ಎಲ್ಲರ ಆಕ್ರೋಶಕ್ಕೆ ಪಾತ್ರವಾಯಿತು. ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಬೇರೆ ಪದಾಧಿಕಾರಿಗಳ ಜೊತೆ ಸಮಾಲೋಚಿಸಬೇಕೆಂಬುದು ಕೇಂದ್ರ ಸರ್ಕಾರದ ಸೂಚನೆಯಾಗಿತ್ತು. ಆದರೆ, ಅದನ್ನು ಧಿಕ್ಕರಿಸಿ ಏಕಾಏಕಿ ವೇಳಾಪಟ್ಟಿಯನ್ನು ಘೋಷಿಸಿದ ಬೆನ್ನಹಿಂದೆಯೇ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ ಚುನಾವಣೆ ಫಲಿತಾಂಶವನ್ನು ಅಮಾನತಿನಲ್ಲಿಟ್ಟು ಮಧ್ಯಂತರ ಸಮಿತಿಯೊಂದನ್ನು ರಚಿಸಿ ಫೆಡರೇಷನ್ ಆಗುಹೋಗುಗಳನ್ನು ನಿರ್ವಹಿಸುವಂತೆ ಕೇಂದ್ರ ಕ್ರೀಡಾ ಖಾತೆ ಸೂಚನೆ ನೀಡಿರುವುದರಿಂದ ಈಗ ಚುನಾವಣೆಯಲ್ಲಿ ಗೆದ್ದವರ ಹುಮ್ಮಸ್ಸು ಕ್ಷಣಾರ್ಧದಲ್ಲಿ ಅಡಗುವಂತಾಗಿದೆ.
ಕುಸ್ತಿ ಫೆಡರೇಷನ್‌ಗೆ ಸೇರಿದ ಹಲವಾರು ಮಂದಿ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವ ದೂರುಗಳನ್ನು ಮಾಡಿ ಸರ್ಕಾರಕ್ಕೂ ಕೂಡಾ ಮನವಿ ಸಲ್ಲಿಸಿದ್ದರು. ಹಲವಾರು ಮಂದಿ ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ರ‍್ಯಾಲಿಯನ್ನೂ ಏರ್ಪಡಿಸಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಪಟ್ಟು ಹಿಡಿದಿದ್ದರು. ಆದರೂ ಯಾವುದೇ ರೀತಿಯ ನಿರೀಕ್ಷಿತ ಕ್ರಮ ಬಾರದೇ ಹೋದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕುಸ್ತಿಪಟುಗಳ ನಿಯೋಗ ಭೇಟಿ ಮಾಡಿದ ಪರಿಣಾಮವೆಂದರೆ `ಕಾನೂನು ಕ್ರಮ ಕೈಗೊಳ್ಳುವ ಭರವಸೆ'. ತಡವಾದರೂ ಪರವಾಗಿಲ್ಲ ಈಗ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿರುವುದು ಒಂದು ರೀತಿಯಲ್ಲಿ ಹದಗೆಟ್ಟುಹೋಗಿದ್ದ ಈ ಫೆಡರೇಷನ್ ಶುದ್ಧೀಕರಣಕ್ಕೆ ಒಂದು ಮಾರ್ಗ.
ಈ ಚುನಾವಣೆಯ ಫಲಿತಾಂಶದಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ತಮ್ಮ ಬಣದ ಅಭ್ಯರ್ಥಿಗಳು ಪರಾಭವಗೊಂಡಿದ್ದನ್ನು ಗಮನಿಸಿದ ಅಂತರರಾಷ್ಟ್ರೀಯ ಕುಸ್ತಿಪಟು ಸಾಕ್ಷಿ ಮಲಿಕ್ ಕುಸ್ತಿ ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು. ಭಜರಂಗ್ ಪೂನಿಯಾ ಎಂಬ ಇನ್ನೊಬ್ಬ ನಿಷ್ಣಾತ ಕುಸ್ತಿಪಟು ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಲು ಮುಂದಾದರು. ಇದೇ ದಾರಿಯನ್ನು ಅನುಸರಿಸಿದ ಕುಸ್ತಿಪಟುಗಳು ಈ ಕುಸ್ತಿ ಸಹವಾಸವೇ ಬೇಡ ಎಂದು ದೂರ ಉಳಿಯುವ ತೀರ್ಮಾನ ಕೈಗೊಂಡಿದ್ದರು. ಆದರೆ, ಈಗ ಕೇಂದ್ರದ ಕ್ರಮದಿಂದ ಈ ಎಲ್ಲ ಪ್ರತಿಭಟನೆಯ ಕ್ರಮಗಳು ತಟಸ್ಥಗೊಂಡಂತೆ ಕಾಣುತ್ತಿವೆ. ತಬ್ಬಿಬ್ಬುಗೊಂಡಂತಿರುವ ಬ್ರಿಜ್ ಭೂಷಣ್ ಬಣ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಯಾವುದೇ ಮಾತನ್ನು ಆಡದೇ ಸುಮ್ಮನಾಗಿದ್ದಾರೆ. ಆದರೆ, ಚುನಾವಣೆಯಲ್ಲಿ ಗೆದ್ದಿದ್ದ ಅಧ್ಯಕ್ಷ ಸಂಜಯ್ ಸಿಂಗ್ ನ್ಯಾಯಾಲಯದಲ್ಲಿ ಪ್ರಶ್ನಿಸುವ ಮಾತನಾಡಿ ನಂತರ ತೆಪ್ಪಗಾದರು.