For the best experience, open
https://m.samyuktakarnataka.in
on your mobile browser.

ಕೂಡಲಸಂಗಮದಲ್ಲಿ ಸಾವಿರ ಸಂತರ ಸಮಾವೇಶ

05:40 PM Oct 20, 2024 IST | Samyukta Karnataka
ಕೂಡಲಸಂಗಮದಲ್ಲಿ ಸಾವಿರ ಸಂತರ ಸಮಾವೇಶ

ಬಾಗಲಕೋಟೆ: ಹಿಂದುಳಿದ, ದಲಿತ ಹಾಗೂ ಸಮಗ್ರ ಹಿಂದೂ ಸಮಾಜದ ಸಂಘಟನೆಗಾಗಿ ಮುಂಬರುವ ಸಂಕ್ರಾಂತಿ ದಿನದಂದು ಸುಕ್ಷೇತ್ರ ಕೂಡಲಸಂಗಮದಲ್ಲಿ ಒಂದು ಸಾವಿರ ಸಂತರ ಸಮ್ಮುಖದಲ್ಲಿ ಬೃಹತ್ ಸಮಾವೇಶ ನಡೆಸಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಬ್ರಿಗೇಡ್‌ನ ಹೆಸರು ಪ್ರಕಟಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಘೋಷಿಸಿದ್ದಾರೆ.
ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ರವಿವಾರ ಹಮ್ಮಿಕೊಂಡಿದ್ದ ಹಿಂದುಳಿದ, ದಲಿತ ಹಾಗೂ ಸಮಗ್ರ ಹಿಂದೂ ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳ ಚಿಂತನ ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನನಗೆ ಬಿಜೆಪಿ ಎಂದೆಂದಿಗೂ ತಾಯಿಯೇ. ಅಡಿಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯ ಮಗನಾದ ನನ್ನನ್ನು ಪಕ್ಷ ೫ ಬಾರಿ ಶಾಸಕನನ್ನಾಗಿಸಿದೆ. ಡಿಸಿಎಂ, ವಿಪಕ್ಷ ನಾಯಕನನ್ನಾಗಿ ಮಾಡಿದೆ. ಇಂದು ಪಕ್ಷ ಕೆಲವು ಹೊಂದಾಣಿಕೆ ರಾಜಕಾರಣ ಮಾಡುವ, ಸ್ವಜನಪಕ್ಷಪಾತ ಮಾಡುವವರ ಕೈಯಲ್ಲಿ ಸಿಲುಕಿದೆ. ಪಕ್ಷ ನನಗೆ ತಾಯಿಯಿದ್ದಂತೆ ಆ ತಾಯಿಯನ್ನು ಬಂಧನ ಮುಕ್ತಗೊಳಿಸುವುದು ನನ್ನ ಗುರಿ ಅದಕ್ಕಾಗಿ ನನ್ನ ಸೋಲು ನಿಶ್ಚಿತ ಎಂಬುದನ್ನು ಅರಿತೂ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ ಎಂದು ವಿವರಿಸಿದರು.
ತಿಂಥಣಿಯ ಕಾಗಿನೆಲೆ ಪೀಠದ ಶ್ರೀಸಿದ್ಧರಾಮಾನಂದಪುರಿ ಸ್ವಾಮೀಜಿ ಅವರು ಮಾತನಾಡಿ, ಇಂದಿನ ಸಭೆ ಸಂಪೂರ್ಣ ಸಮಾಜದ ಬಗ್ಗೆ ಚಿಂತಿಸುವ ಕಾರ್ಯಕ್ರಮವಾಗಿದೆ. ಹಿಂದೂ ಸಮಾಜದ ಲಾಭವನ್ನು ಕೆಲವೇ ಕೆಲವು ಸಮುದಾಯಗಳು ಪಡೆಯುತ್ತಿವೆ. ಹಿಂದುಳಿದವರ ನಾಯಕ ಕೆ.ಎಸ್. ಈಶ್ವರಪ್ಪನವರಿಗೆ ಆಗಿರುವ ಅನ್ಯಾಯ ಆರ್‌ಎಸ್‌ಎಸ್‌ನವರಿಗೆ ಕಂಡಿಲ್ಲವೇ ಎಂದು ಖಾರವಾಗಿ ಪ್ರಶ್ನೆ ಮಾಡಿದರು.

Tags :